ಕತಾರ್ ಗ್ಯಾಸ್ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ; ಭಾರತೀಯರು ಸೇರಿ 13 ಕಾರ್ಮಿಕರ ಸಾವು, 66 ಜನರಿಗೆ ಗಾಯ! Qatar gas plant explosion

ಕತಾರ್ ಗ್ಯಾಸ್ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ; ಭಾರತೀಯರು ಸೇರಿ 13 ಕಾರ್ಮಿಕರ ಸಾವು, 66 ಜನರಿಗೆ ಗಾಯ!
ಕತಾರ್ ಗ್ಯಾಸ್ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ; ಭಾರತೀಯರು ಸೇರಿ 13 ಕಾರ್ಮಿಕರ ಸಾವು, 66 ಜನರಿಗೆ ಗಾಯ!
Published on
ದೋಹಾ: ಕೊಲ್ಲಿ ರಾಷ್ಟ್ರ ಕತಾರ್‌ನ ಪ್ರಮುಖ ನೈಸರ್ಗಿಕ ಅನಿಲ ಸಂಸ್ಕರಣಾ ಕೇಂದ್ರದಲ್ಲಿ (Qatar gas plant explosion) ಸಂಭವಿಸಿದ ಭೀಕರ ಸ್ಫೋಟದಲ್ಲಿ ಭಾರತೀಯರು ಸೇರಿದಂತೆ ಕನಿಷ್ಠ 13 ಜನ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ಭಾನುವಾರ ಸಂಜೆ ನಡೆದ ಈ ತಾಂತ್ರಿಕ ದುರಂತದಲ್ಲಿ ಇತರ 66 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಕತಾರ್ ದೇಶದ ಇಂಧನ ಸಚಿವ ಸಾದ್ ಅಲ್-ಕಾಬಿ ಸೋಮವಾರ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸದ್ಯ ಯಾರೊಬ್ಬರ ಪರಿಸ್ಥಿತಿಯೂ ಜೀವನ್ಮರಣದ ನಡುವೆ ಇಲ್ಲ ಎಂದು ಕತಾರ್ ಸರ್ಕಾರ ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವ ಸಾದ್ ಅಲ್-ಕಾಬಿ ಅತ್ಯಂತ ಕಳವಳ ವ್ಯಕ್ತಪಡಿಸಿದ್ದು, ನನ್ನ ಇಡೀ ಸೇವಾವಧಿಯಲ್ಲಿ ಇಂತಹದೊಂದು ಕಹಿ ಸುದ್ದಿಯನ್ನು ಪ್ರಕಟಿಸಬೇಕಾಗಿ ಬರುತ್ತದೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ಸ್ಫೋಟದಲ್ಲಿ ಭಾರತ ಮತ್ತು ಪಾಕಿಸ್ತಾನ ಮೂಲದ 13 ಜನ ಅಮೂಲ್ಯ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ನುಡಿದಿದ್ದಾರೆ. ಆದರೆ, ಮೃತರ ಪೈಕಿ ಭಾರತೀಯರು ಎಷ್ಟು ಜನ ಎನ್ನುವ ನಿಖರ ಸಂಖ್ಯೆಯನ್ನು ಕತಾರ್ ಸರ್ಕಾರವಿನ್ನೂ ಬಿಡುಗಡೆ ಮಾಡಿಲ್ಲ.

ಇರಾನ್ ಮಿಸೈಲ್ ದಾಳಿ ನಡೆದಿತ್ತು; ಮರು ಆರಂಭಿಸುವಾಗಲೇ ಒಲಿದ ಯಮರಾಜ!

ವಿಶ್ವದ ಅತಿ ದೊಡ್ಡ ಅನಿಲ ರಫ್ತು ಕೇಂದ್ರಗಳಲ್ಲಿ ಒಂದಾದ ಕತಾರ್‌ನ ರಾಸ್ ಲಾಫನ್ ಸಂಕೀರ್ಣದ ಒಳಗೆ ಇರುವ 'ಬರ್ಜಾನ್' ಪ್ರಾದೇಶಿಕ ಗ್ಯಾಸ್ ಪ್ಲಾಂಟ್‌ನಲ್ಲಿ ಈ ಘಟನೆ ಜರುಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಇರಾನ್ ದೇಶವು ಕತಾರ್‌ನ ಈ ಗ್ಯಾಸ್ ಪ್ಲಾಂಟ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಆ ವೇಳೆ ಘಟಕಕ್ಕೆ ಭಾರಿ ಪ್ರಮಾಣದ ಹಾನಿಯಾಗಿದ್ದರಿಂದ ಕಳೆದ ಮೂರು ತಿಂಗಳಿಂದ ಇಲ್ಲಿ ಕೆಲಸ ಸಂಪೂರ್ಣ ಸ್ಥಗಿತಗೊಂಡಿತ್ತು.
ದುರಸ್ತಿ ಕಾರ್ಯ ಮುಗಿಸಿ, ಭಾನುವಾರ ಸಂಜೆ ಕಾರ್ಮಿಕರು ಗ್ಯಾಸ್ ಪ್ಲಾಂಟ್ ಕಾರ್ಯಾಚರಣೆಯನ್ನು ಮರು ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾಗ ತಾಂತ್ರಿಕ ದೋಷದಿಂದಾಗಿ ಒಮ್ಮೆಲೇ ದೈತ್ಯ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಇಡೀ ಪ್ರದೇಶ ಕಂಪಿಸಿದ್ದು, ದಟ್ಟವಾದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಆಕಾಶದತ್ತ ಮುಗಿಲು ಮುಟ್ಟಿದ್ದವು.

ಇದು ದೇಶಿ ವಿಧ್ವಂಸಕ ಕೃತ್ಯವಲ್ಲ: ಕತಾರ್ ಸ್ಪಷ್ಟನೆ

ಮಾರ್ಚ್‌ನಲ್ಲಿ ನಡೆದ ಇರಾನ್ ದಾಳಿಯ ಹಿನ್ನೆಲೆಯಲ್ಲಿ ಈ ಸ್ಫೋಟದ ಹಿಂದೆಯೂ ಶತ್ರು ದೇಶಗಳ ಕೈವಾಡವಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿದ್ದವು. ಆದರೆ ಇದನ್ನು ಕತಾರ್ ಇಂಧನ ಸಚಿವಾಲಯ ಸ್ಪಷ್ಟವಾಗಿ ನಿರಾಕರಿಸಿದೆ. ಇದು ಕೇವಲ ತಾಂತ್ರಿಕ ದೋಷದಿಂದ ಸಂಭವಿಸಿದ ಅಪಘಾತವೇ ಹೊರತು ಯಾವುದೇ ವಿಧ್ವಂಸಕ ಕೃತ್ಯ ಅಥವಾ ವಿದೇಶಿ ದಾಳಿಯಲ್ಲ ಎಂದು ಸಚಿವ ಕಾಬಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸ್ಫೋಟದ ತನಿಖೆಗೆ ಹೈಲೆವೆಲ್ ಕಮಿಟಿ ರಚಿಸಲಾಗಿದೆ ಎಂದಿದ್ದಾರೆ.
ಕಟ್ಟಡದ ಯಾವ ಭಾಗದಲ್ಲಿ ಸ್ಫೋಟ ಸಂಭವಿಸಿದೆ ಮತ್ತು ಗ್ಯಾಸ್ ಪ್ಲಾಂಟ್‌ಗೆ ಒಟ್ಟಾರೆ ಎಷ್ಟು ನಷ್ಟ ಉಂಟಾಗಿದೆ ಎನ್ನುವ ರಹಸ್ಯ ಮಾಹಿತಿಯನ್ನು ಕತಾರ್ ಇಂಧನ ಸಂಸ್ಥೆ ಬಹಿರಂಗಪಡಿಸಿಲ್ಲ. ಆದಾಗ್ಯೂ, ಈ ಅಪಘಾತದಿಂದ ಜಗತ್ತಿನ ಇತರ ದೇಶಗಳಿಗೆ ಕತಾರ್ ಮಾಡುತ್ತಿರುವ ಗ್ಯಾಸ್ ರಫ್ತು ಪ್ರಕ್ರಿಯೆಗೆ ಯಾವುದೇ ಧಕ್ಕೆಯಾಗಿಲ್ಲ ಮತ್ತು ಪರಿಸರದ ಮೇಲೂ ಯಾವುದೇ ದುಷ್ಪರಿಣಾಮ ಬೀರಿಲ್ಲ ಎಂದು ಕತಾರ್ ಆಡಳಿತ ಮಂಡಳಿ ತಿಳಿಸಿದೆ.

ಕತಾರ್ ದೇಶದ ಜೀವನಾಡಿ ಈ ಬರ್ಜಾನ್ ಪ್ಲಾಂಟ್!

ಸ್ಫೋಟಗೊಂಡಿರುವ ಬರ್ಜಾನ್ ಗ್ಯಾಸ್ ಪ್ಲಾಂಟ್ ಕತಾರ್ ದೇಶಕ್ಕೆ ಅತ್ಯಂತ ಪ್ರಮುಖವಾದುದಾಗಿದೆ. ಇದು ಪ್ರತಿದಿನ ಸುಮಾರು 140 ಕೋಟಿ ಪ್ರಮಾಣದ ನೈಸರ್ಗಿಕ ಗ್ಯಾಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕತಾರ್ ದೇಶವು ತನ್ನ ಸ್ವಂತ ಬಳಕೆಯ ವಿದ್ಯುತ್ ಜನರೇಟರ್‌ಗಳನ್ನು ನಡೆಸಲು ಮತ್ತು ಮರುಭೂಮಿ ನಾಡಿನಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುವ ಬೃಹತ್ 'ಲವಣಮುಕ್ತ ನೀರು ಸಂಸ್ಕರಣಾ ಘಟಕಗಳನ್ನು ಮುನ್ನಡೆಸಲು ಇದೇ ಪ್ಲಾಂಟ್‌ನ ಅನಿಲವನ್ನು ಪ್ರಮುಖವಾಗಿ ಬಳಸಿಕೊಳ್ಳುತ್ತದೆ.
ಬದುಕಲು ಗಲ್ಫ್ ರಾಷ್ಟ್ರಕ್ಕೆ ತೆರಳಿದ್ದ ಭಾರತೀಯ ಕಾರ್ಮಿಕರು ಅಲ್ಲಿನ ಗ್ಯಾಸ್ ಪ್ಲಾಂಟ್ ದುರಂತಕ್ಕೆ ಬಲಿಯಾಗಿರುವುದು ಅವರ ತಾಯ್ನಾಡಿನ ಕುಟುಂಬಗಳಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕತಾರ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮೃತಪಟ್ಟ ಭಾರತೀಯರ ಪತ್ತೆ ಹಾಗೂ ಅವರ ಮೃತದೇಹಗಳನ್ನು ಸ್ವದೇಶಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net