ಬ್ರಿಟನ್‌ನಲ್ಲಿ ಮುಂದುವರಿದ ‘ಪ್ರಧಾನಿ’ ಮ್ಯೂಸಿಕಲ್ ಚೇರ್ ಆಟ! ತೀವ್ರ ಅಸಮಾಧಾನಕ್ಕೆ ಮಣಿದು ಸ್ಟಾರ್ಮರ್ ರಾಜೀನಾಮೆ; ಆ್ಯಂಡಿ ಬರ್ನ್‌ಹ್ಯಾಮ್ ಮುಂದಿನ ಪಿಎಂ? Andy Burnham

ಬ್ರಿಟನ್‌ನಲ್ಲಿ ಮುಂದುವರಿದ ‘ಪ್ರಧಾನಿ’ ಮ್ಯೂಸಿಕಲ್ ಚೇರ್ ಆಟ! ತೀವ್ರ ಅಸಮಾಧಾನಕ್ಕೆ ಮಣಿದು ಸ್ಟಾರ್ಮರ್ ರಾಜೀನಾಮೆ; ಆ್ಯಂಡಿ ಬರ್ನ್‌ಹ್ಯಾಮ್ ಮುಂದಿನ ಪಿಎಂ?
ಬ್ರಿಟನ್‌ನಲ್ಲಿ ಮುಂದುವರಿದ ‘ಪ್ರಧಾನಿ’ ಮ್ಯೂಸಿಕಲ್ ಚೇರ್ ಆಟ! ತೀವ್ರ ಅಸಮಾಧಾನಕ್ಕೆ ಮಣಿದು ಸ್ಟಾರ್ಮರ್ ರಾಜೀನಾಮೆ; ಆ್ಯಂಡಿ ಬರ್ನ್‌ಹ್ಯಾಮ್ ಮುಂದಿನ ಪಿಎಂ?
Published on
ಲಂಡನ್: ಬ್ರಿಟನ್ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ಆಡಳಿತಾರೂಢ ಲೇಬರ್ ಪಕ್ಷದೊಳಗೆ ಭುಗಿಲೆದ್ದಿದ್ದ ತೀವ್ರ ಅಸಮಾಧಾನ ಮತ್ತು ಕುಸಿಯುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಸ್ಥಾನಕ್ಕೆ ಭಾನುವಾರ ತಡರಾತ್ರಿ (ಜೂ.22) ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಕೇವಲ ಎರಡು ವರ್ಷಗಳ ಹಿಂದೆ (2024ರ ಜುಲೈನಲ್ಲಿ) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಸ್ಟಾರ್ಮರ್, ಅವಧಿಗೂ ಮುನ್ನವೇ ಅಧಿಕಾರದಿಂದ ಕೆಳಗಿಳಿಯುವಂತಾಗಿದೆ.
ಸ್ಟಾರ್ಮರ್ ಅವರ ನಿರ್ಗಮನದ ಬೆನ್ನಲ್ಲೇ, ಬ್ರಿಟನ್‌ನ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲ ತೀವ್ರಗೊಂಡಿದೆ. ಸದ್ಯದ ಮಟ್ಟಿಗೆ ಲೇಬರ್ ಪಕ್ಷದ ಪ್ರಭಾವಿ ನಾಯಕ, 'ಕಿಂಗ್ ಆಫ್ ದಿ ನಾರ್ತ್ ಎಂದೇ ಖ್ಯಾತರಾಗಿರುವ ಗ್ರೇಟರ್ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆಂಡಿ ಬರ್ನ್‌ಹ್ಯಾಮ್ (Andy Burnham) ಮುಂದಿನ ಬ್ರಿಟಿಷ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

10 ಡೌನಿಂಗ್ ಸ್ಟ್ರೀಟ್ ಮುಂದೆ ಭಾವುಕರಾದ ಸ್ಟಾರ್ಮರ್

ಪ್ರಧಾನಿ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್ ಮುಂಭಾಗದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಕೀರ್ ಸ್ಟಾರ್ಮರ್ ಅತ್ಯಂತ ಭಾವುಕರಾಗಿ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ನಾನು ಯೋಗ್ಯನೇ ಎಂಬ ಪ್ರಶ್ನೆ ನನ್ನದೇ ಪಕ್ಷದ ಸಂಸದರಲ್ಲಿ ಮೂಡಿತ್ತು. ಅವರ ಆಂತರಿಕ ಧ್ವನಿಗೆ ಗೌರವ ಕೊಟ್ಟು ನಾನು ಲೇಬರ್ ಪಕ್ಷದ ನಾಯಕತ್ವ ಹಾಗೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ದೇಶದ ಹಿತದೃಷ್ಟಿಯಿಂದಲೇ ಆಗಿತ್ತು ಎಂದು ಸ್ಟಾರ್ಮರ್ ಕಣ್ಣೀರು ತುಂಬಿದ ಧ್ವನಿಯಲ್ಲಿ ಹೇಳಿದ್ದಾರೆ. ಅಲ್ಲದೆ, ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ (ಸೆಪ್ಟೆಂಬರ್ ವರೆಗೆ) ಅವರು ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಯಾರು ಈ ಆಂಡಿ ಬರ್ನ್‌ಹ್ಯಾಮ್? ರೇಸ್‌ನಲ್ಲಿ ಅವರೇ ಮುಂದೆ ಏಕೆ?

ಪ್ರಧಾನಿ ರೇಸ್‌ನಲ್ಲಿ ಅತ್ಯಂತ ಮುಂಚೂಣಿಯಲ್ಲಿ ಕೇಳಿಬರುತ್ತಿರುವ 56 ವರ್ಷದ ಆಂಡಿ ಬರ್ನ್‌ಹ್ಯಾಮ್ ಬ್ರಿಟನ್ ರಾಜಕಾರಣದಲ್ಲಿ ಜನಪ್ರಿಯ ನಾಯಕರಾಗಿದ್ದಾರೆ. ಇತ್ತೀಚೆಗೆ ನಡೆದ ಮೇಕರ್‌ಫೀಲ್ಡ್ ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಅವರು ಮತ್ತೆ ಸಂಸತ್ (ಹೌಸ್ ಆಫ್ ಕಾಮನ್ಸ್) ಪ್ರವೇಶಿಸಿದ್ದಾರೆ. ಲೇಬರ್ ಪಕ್ಷದ ನಿಯಮಾವಳಿಗಳ ಪ್ರಕಾರ ಪ್ರಧಾನಿ ಹುದ್ದೆಯ ರೇಸ್‌ನಲ್ಲಿರಲು ಸಂಸದರಾಗಿರುವುದು ಕಡ್ಡಾಯ. ಹೀಗಾಗಿಯೇ ಬರ್ನ್‌ಹ್ಯಾಮ್ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬೆನ್ನಲ್ಲೇ ಸ್ಟಾರ್ಮರ್ ರಾಜೀನಾಮೆ ನೀಡಿದ್ದಾರೆ.
ಉತ್ತರ ಬ್ರಿಟನ್‌ನ ಧ್ವನಿ: ಬರ್ನ್‌ಹ್ಯಾಮ್ ಅವರು ಉತ್ತರ ಇಂಗ್ಲೆಂಡ್‌ನ ಕಾರ್ಮಿಕ ವರ್ಗದ ಹಕ್ಕುಗಳಿಗಾಗಿ ಸದಾ ಧ್ವನಿ ಎತ್ತುವ ನಾಯಕ. ಇದೇ ಕಾರಣಕ್ಕೆ ಅವರಿಗೆ 'ಕಿಂಗ್ ಆಫ್ ದಿ ನಾರ್ತ್' (ಉತ್ತರದ ರಾಜ) ಎಂಬ ಬಿರುದು ಬಂದಿದೆ.
ದೀರ್ಘ ರಾಜಕೀಯ ಅನುಭವ: ಟೋನಿ ಬ್ಲೇರ್ ಮತ್ತು ಗಾರ್ಡನ್ ಬ್ರೌನ್ ಅವರ ಆಡಳಿತಾವಧಿಯಲ್ಲಿ ಬ್ರಿಟನ್‌ನ ಆರೋಗ್ಯ ಸಚಿವರಾಗಿ, ಸಾಂಸ್ಕೃತಿಕ ಸಚಿವರಾಗಿ ಇವರು ಸೇವೆ ಸಲ್ಲಿಸಿದ್ದಾರೆ. 2017 ರಿಂದ 2026ರ ವರೆಗೆ ಮೂರು ಬಾರಿ ಮ್ಯಾಂಚೆಸ್ಟರ್‌ನ ಮೇಯರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಸರಳ ಸಜ್ಜನಿಕೆಯ ನಾಯಕ: ಕೋಟು-ಸೂಟು ಧರಿಸುವ ಸಾಂಪ್ರದಾಯಿಕ ರಾಜಕಾರಣಿಗಳಿಗಿಂತ ಭಿನ್ನವಾಗಿ, ಸಾಮಾನ್ಯ ಜೀನ್ಸ್ ಮತ್ತು ಓಪನ್ ಶರ್ಟ್ ಧರಿಸಿ ಜನಸಾಮಾನ್ಯರ ಜೊತೆ ಸುಲಭವಾಗಿ ಬೆರೆಯುವ ಗುಣ ಇವರದ್ದಾಗಿದೆ. ಸದ್ಯ ಬ್ರಿಟನ್‌ನ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಇವರೂ ಒಬ್ಬರು.
ಮುಖ್ಯವಾಗಿ, ಪ್ರಧಾನಿ ರೇಸ್‌ನಲ್ಲಿದ್ದ ಮಾಜಿ ಆರೋಗ್ಯ ಸಚಿವ ವೆಸ್ ಸ್ಟ್ರೀಟಿಂಗ್ ಅವರೂ ಸಹ ಆಂಡಿ ಬರ್ನ್‌ಹ್ಯಾಮ್ ಅವರಿಗೆ ಬಹಿರಂಗ ಬೆಂಬಲ ಘೋಷಿಸಿರುವುದರಿಂದ, ಯಾವುದೇ ದೊಡ್ಡ ಆಂತರಿಕ ಪೈಪೋಟಿ ಇಲ್ಲದೆಯೇ ಬರ್ನ್‌ಹ್ಯಾಮ್ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಭರ್ಜರಿ ಗೆಲುವಿನಿಂದ ದಿಢೀರ್ ಪತನಕ್ಕೆ ಕಾರಣವೇನು?

2024ರ ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷಕ್ಕೆ 174 ಸೀಟುಗಳ ಐತಿಹಾಸಿಕ ಬಹುಮತ ತಂದುಕೊಟ್ಟು, 14 ವರ್ಷಗಳ ಕನ್ಸರ್ವೇಟಿವ್ ಪಕ್ಷದ ಆಡಳಿತಕ್ಕೆ ಸ್ಟಾರ್ಮರ್ ಮುಕ್ತಿ ಹಾಡಿದ್ದರು. ಆದರೆ, ಕೇವಲ ಎರಡೇ ವರ್ಷಗಳಲ್ಲಿ ಅವರ ಪತನಕ್ಕೆ ಮುಖ್ಯ ಕಾರಣಗಳು ಇಲ್ಲಿವೆ.
ಆರ್ಥಿಕ ಬಿಕ್ಕಟ್ಟು ಮತ್ತು ಬೆಲೆ ಏರಿಕೆ: ಬ್ರಿಟನ್‌ನಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಜೀವನ ಕಷ್ಟಕರವಾಗಿತ್ತು. ಇದನ್ನು ನಿಭಾಯಿಸಲು ಸ್ಟಾರ್ಮರ್ ಸರ್ಕಾರ ವಿಫಲವಾಯಿತು.
ಲೈಂಗಿಕ ಅಪರಾಧಿ ಜೊತೆ ನಂಟು ಹೊಂದಿದ್ದ ನಾಯಕನ ನೇಮಕ: ವಿವಾದಿತ ಲೇಬರ್ ಪಕ್ಷದ ಹಿರಿಯ ನಾಯಕ ಪೀಟರ್ ಮ್ಯಾಂಡೆಲ್ಸನ್ ಅವರನ್ನು ಅಮೆರಿಕದ ಬ್ರಿಟನ್ ರಾಯಭಾರಿಯನ್ನಾಗಿ ನೇಮಿಸಿದ್ದು ಸ್ಟಾರ್ಮರ್‌ಗೆ ಮುಳುವಾಯಿತು. ಮ್ಯಾಂಡೆಲ್ಸನ್ ಅವರು ಜೈಲಿನಲ್ಲಿ ಮೃತಪಟ್ಟ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ ಜೊತೆ ನಂಟು ಹೊಂದಿದ್ದರು ಎಂಬ ಆರೋಪವಿತ್ತು. ಇದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಆಂತರಿಕ ಭಿನ್ನಮತ: ಪಕ್ಷದ ನೀತಿಗಳ ಕುರಿತು ಲೇಬರ್ ಪಕ್ಷದ ಒಳಗೆ ತೀವ್ರ ಅಸಮಾಧಾನವಿತ್ತು. ಸುಮಾರು ಕಾಲು ಭಾಗದಷ್ಟು ಸಂಸದರು ಸ್ಟಾರ್ಮರ್ ನಾಯಕತ್ವದ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದಿದ್ದರು.

10 ವರ್ಷಗಳಲ್ಲಿ 7ನೇ ಪ್ರಧಾನಿ ಕಾಣಲಿರುವ ಬ್ರಿಟನ್!

ಕೀರ್ ಸ್ಟಾರ್ಮರ್ ರಾಜೀನಾಮೆಯಿಂದಾಗಿ ಬ್ರಿಟನ್ ರಾಜಕೀಯ ಅಸ್ಥಿರತೆ ಮತ್ತೊಮ್ಮೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕಳೆದ ಒಂದು ದಶಕದಲ್ಲಿ (10 ವರ್ಷಗಳಲ್ಲಿ) ಬ್ರಿಟನ್ ಕಾಣಲಿರುವ 7ನೇ ಪ್ರಧಾನಿ ಇವರಾಗಲಿದ್ದಾರೆ. ಡೇವಿಡ್ ಕ್ಯಾಮರೂನ್, ಥೆರೇಸಾ ಮೇ, ಬೋರಿಸ್ ಜಾನ್ಸನ್, ಲಿಜ್ ಟ್ರಸ್, ರಿಷಿ ಸುನಕ್ ಮತ್ತು ಕೀರ್ ಸ್ಟಾರ್ಮರ್ ಅವರ ನಂತರ ಈಗ ಆಂಡಿ ಬರ್ನ್‌ಹ್ಯಾಮ್ ಬ್ರಿಟನ್‌ನ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಬರುವ ಜುಲೈ ತಿಂಗಳ ಮಧ್ಯಭಾಗದಲ್ಲಿ ಅಥವಾ ಸೆಪ್ಟೆಂಬರ್ ಒಳಗೆ ಅಧಿಕೃತವಾಗಿ ನೂತನ ಪ್ರಧಾನಿ ಅಧಿಕಾರ ಸ್ವೀಕರಿಸಲಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net