

ಪಾಟ್ನಾ: ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಶುಕ್ರವಾರ(ಅ. 23) ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ ಘಟನೆಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸಿವಾನ್ನ ಸ್ಥಳೀಯ ಮೊಹಮ್ಮದ್ ಅಮಿರುದ್ದೀನ್ ಮಿಯಾನ್ ಅವರ ಮನೆ ಮತ್ತು ಪಟಾಕಿ ಘಟಕದೊಳಗೆ ಸಂಗ್ರಹಿಸಲಾದ ಪಟಾಕಿಗಳು ಬೆಂಕಿಗೆ ಆಹುತಿಯಾಗಿದ್ದು, ಸರಣಿ ಸ್ಫೋಟಗಳು ಸಂಭವಿಸಿವೆ ಎನ್ನಲಾಗಿದೆ. ಮಿಯಾನ್ ಪಟಾಕಿ ವ್ಯಾಪಾರಿ ಎಂದು ಹೇಳಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭರತ್ ಸೋನಿ, ನಾಲ್ಕು ಸಾವುಗಳನ್ನು ದೃಢಪಡಿಸಿದ್ದು, ಇನ್ನೂ ಮೂವರು ಸದಸ್ಯರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬೆಂಕಿ ಹೊತ್ತಿಕೊಂಡಾಗ ಮನೆಯೊಳಗೆ ಹಲವಾರು ಜನರು ಇದ್ದರು ಎನ್ನಲಾಗಿದೆ. ಆವರಣದಲ್ಲಿ ಸಂಗ್ರಹಿಸಲಾದ ಇತರ ಪಟಾಕಿಗಳಿಗೂ ಜ್ವಾಲೆಗಳು ಹರಡಿ, ಜನನಿಬಿಡ ಪ್ರದೇಶದಲ್ಲಿ ಪದೇ ಪದೇ ಸ್ಫೋಟಗಳು ಸಂಭವಿಸಿವೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮನೆಯ ಮುಂಭಾಗ ಕುಸಿದು ಬಿದ್ದು, ಅವಶೇಷಗಳು ರಸ್ತೆಯ ಮೇಲೆ ಬಿದ್ದಿವೆ. ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಸ್ಫೋಟಗಳು ಸಂಭವಿಸಿವೆ ಎನ್ನಲಾಗಿದೆ.
ಸ್ಫೋಟದ ಮಾಹಿತಿ ತಿಳಿದ ತಕ್ಷಣ ಪೊಲೀಸರು, ಅಗ್ನಿ ಶಾಮಕದಳ ಹಾಗೂ ಎಸ್ಡಿಆರ್ಎಫ್ ತಂಡಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ (ಏಜೆನ್ಸೀಸ್).