ನನ್ನ ಮಗಳ ಸಾವಿಗೆ ಮಮತಾ ಬ್ಯಾನರ್ಜಿ ನೇರ ಹೊಣೆ...ದೀದಿ ಜೈಲಿಗೆ ಹೋದರೆ ಸತ್ಯ ಹೊರಬರುತ್ತದೆ ಎಂದ ಸಂತ್ರಸ್ತೆಯ ತಾಯಿ | RG Kar Case

RG Kar Case | ಆರ್‌ಜಿ ಕರ್ ಪ್ರಕರಣದ ಸಂತ್ರಸ್ತೆಯ ತಾಯಿ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ
RG Kar Case | ಆರ್‌ಜಿ ಕರ್ ಪ್ರಕರಣದ ಸಂತ್ರಸ್ತೆಯ ತಾಯಿ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ
Published on
RG Kar Case: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ಮೂವರು ಉನ್ನತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಬೆನ್ನಲ್ಲೇ, ಸಂತ್ರಸ್ತೆಯ ತಾಯಿ ಹಾಗೂ ಬಿಜೆಪಿ ಶಾಸಕಿ ರತ್ನ ದೇವ್ನಾಥ್​ ತನಿಖೆಯ ಕುರಿತಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಉತ್ತರ 24 ಪರಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರತ್ನ ದೇವ್ನಾಥ್​, ಈ ಪ್ರಕರಣದಲ್ಲಿ ಅನೇಕ ಅಪರಾಧಿಗಳಿದ್ದಾರೆ, ಅವರಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿಯನ್ನು ಮೊದಲು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ, ಉಳಿದೆಲ್ಲಾ ಅಪರಾಧಿಗಳ ಹೆಸರುಗಳು ಹೊರಬರುತ್ತವೆ ಎಂದು ನೇರ ವಾಗ್ದಾಳಿ ನಡೆಸಿದರು.

ಮಗಳ ಜೊತೆ ಊಟ ಮಾಡಿದವರ ತನಿಖೆಯಾಗಿಲ್ಲ

ಪ್ರಕರಣದ ತನಿಖೆಯಲ್ಲಿ ಇನ್ನೂ ಹಲವು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಆರೋಪಿಸಿದ ರತ್ನ, ಘಟನೆ ನಡೆದ ದಿನದಂದು ರಾತ್ರಿ ನನ್ನ ಮಗಳ ಜೊತೆ ಊಟ ಮಾಡಿದವರನ್ನು ಇದುವರೆಗೂ ಸರಿಯಾಗಿ ತನಿಖೆ ಮಾಡಿಲ್ಲ, ಕೇವಲ ಕಾಲೇಜಿನ ಮಾಜಿ ಪ್ರಾಂಶುಪಾಲರು ಮಾತ್ರ ಜೈಲಿನಲ್ಲಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಘಟನೆಗೆ ಮಮತಾ ಬ್ಯಾನರ್ಜಿ ಜೊತೆಗೆ ಕಾಲೇಜು ಅಧಿಕಾರಿಗಳೂ ನೇರ ಹೊಣೆ ಎಂದು ಆರೋಪಿಸಿದ ಸಂತ್ರಸ್ತೆಯ ತಾಯಿ, ಮಾಜಿ ಆರೋಗ್ಯ ಕಾರ್ಯದರ್ಶಿ ನಾರಾಯಣಸ್ವರೂಪ್ ನಿಗಮ್ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಮೂವರು ಐಪಿಎಸ್ ಅಧಿಕಾರಿಗಳ ಅಮಾನತು

ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಅಮಾನತುಗೊಂಡವರಲ್ಲಿ ಅಂದಿನ ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್, ಅಭಿಷೇಕ್ ಗುಪ್ತಾ ಮತ್ತು ಇಂದಿರಾ ಮುಖ್ಯೋಪಾಧ್ಯಾಯ ಸೇರಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೂ ಸಹ ಆದೇಶಿಸಲಾಗಿದೆ.
ನಬನ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, ಈ ಅಧಿಕಾರಿಗಳು ಸಂತ್ರಸ್ತೆಯ ಕುಟುಂಬಕ್ಕೆ ಲಂಚ ನೀಡಲು ಪ್ರಯತ್ನಿಸಿದ್ದಾರೆ ಮತ್ತು ಸರ್ಕಾರದ ಲಿಖಿತ ಅನುಮತಿಯನ್ನು ಪಡೆಯದೆಯೇ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪ್ರಕರಣದ ಹಿನ್ನೆಲೆ
2024 ರ ಆಗಸ್ಟ್​​ನಲ್ಲಿ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಳಗೆ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ನಡೆದ ಕ್ರೂರ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ನ್ಯಾಯ, ಸುರಕ್ಷತೆ ಮತ್ತು ಹೊಣೆಗಾರಿಕೆಯನ್ನು ಒತ್ತಾಯಿಸಿ ವೈದ್ಯರು ಹಾಗೂ ನಾಗರಿಕ ಸಮಾಜದಿಂದ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಸಾಕ್ಷ್ಯ ನಾಶ ಮತ್ತು ಪೊಲೀಸ್ ಕ್ರಮದ ವಿಳಂಬದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಸಿಬಿಐ (CBI) ತನಿಖೆ ಕೈಗೆತ್ತಿಕೊಂಡಿತ್ತು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಸಂತ್ರಸ್ತೆಯ ತಾಯಿಗೆ ಪಾಣಿಹಟಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ರತ್ನ ದೇವ್ನಾಥ್​​ ಟಿಎಂಸಿ ಅಭ್ಯರ್ಥಿ ತೀರ್ಥಂಕರ ಘೋಷ್​​ರನ್ನು 28,836 ಮತಗಳ ಅಂತರದಿಂದ ಸೋಲಿಸಿ ಜಯಗಳಿಸಿದರು. ಸಂತ್ರಸ್ತೆಗೆ ನ್ಯಾಯ ಒದಗಿಸುವುದು ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಯಾಗಿತ್ತು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net