ಆರ್‌ಜಿ ಕರ್ ಸಂತ್ರಸ್ತೆಯ ಕುಟುಂಬಕ್ಕೆ ಲಂಚ ನೀಡಲು ಯತ್ನ; ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಸುವೇಂದು | RG Kar Case

RG Kar Case | ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಸುವೇಂದು
RG Kar Case | ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಸುವೇಂದು
Published on
ಕೊಲ್ಕತ್ತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಅಮಾನತುಗೊಂಡವರಲ್ಲಿ ಅಂದಿನ ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್, ಅಭಿಷೇಕ್ ಗುಪ್ತಾ ಮತ್ತು ಇಂದಿರಾ ಮುಖ್ಯೋಪಾಧ್ಯಾಯ ಸೇರಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೂ ಸಹ ಆದೇಶಿಸಲಾಗಿದೆ.
ನಬನ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, ಈ ಅಧಿಕಾರಿಗಳು ಸಂತ್ರಸ್ತೆಯ ಕುಟುಂಬಕ್ಕೆ ಲಂಚ ನೀಡಲು ಪ್ರಯತ್ನಿಸಿದ್ದಾರೆ ಮತ್ತು ಸರ್ಕಾರದ ಲಿಖಿತ ಅನುಮತಿಯನ್ನು ಪಡೆಯದೆಯೇ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪ್ರಕರಣದ ಹಿನ್ನೆಲೆ

2024 ರ ಆಗಸ್ಟ್​​ನಲ್ಲಿ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಳಗೆ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ನಡೆದ ಕ್ರೂರ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ನ್ಯಾಯ, ಸುರಕ್ಷತೆ ಮತ್ತು ಹೊಣೆಗಾರಿಕೆಯನ್ನು ಒತ್ತಾಯಿಸಿ ವೈದ್ಯರು ಹಾಗೂ ನಾಗರಿಕ ಸಮಾಜದಿಂದ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಸಾಕ್ಷ್ಯ ನಾಶ ಮತ್ತು ಪೊಲೀಸ್ ಕ್ರಮದ ವಿಳಂಬದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದಂತೆ ಸಿಬಿಐ (CBI) ತನಿಖೆ ಕೈಗೆತ್ತಿಕೊಂಡಿತ್ತು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಸಂತ್ರಸ್ತೆಯ ತಾಯಿಗೆ ಪಾಣಿಹಟಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ರತ್ನ ದೇವ್ನಾಥ್​​ ಟಿಎಂಸಿ ಅಭ್ಯರ್ಥಿ ತೀರ್ಥಂಕರ ಘೋಷ್​​ರನ್ನು 28,836 ಮತಗಳ ಅಂತರದಿಂದ ಸೋಲಿಸಿ ಜಯಗಳಿಸಿದರು. ಸಂತ್ರಸ್ತೆಗೆ ನ್ಯಾಯ ಒದಗಿಸುವುದು ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಯಾಗಿತ್ತು.

ನಂದಿಗ್ರಾಮಕ್ಕೆ ಸುವೇಂದು ರಾಜೀನಾಮೆ

ಇದೇ ವೇಳೆ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ತಾವು ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ ಅವರು, ನಿಯಮಗಳ ಪ್ರಕಾರ ನಾನು ಒಂದು ಸ್ಥಾನವನ್ನು ಬಿಟ್ಟುಕೊಡಬೇಕಾಗಿದೆ. ಆದರೆ ನಂದಿಗ್ರಾಮದ ಜನರು ಸುವೇಂದು ಅಧಿಕಾರಿ ಇಲ್ಲಿಲ್ಲ ಎಂದು ಭಾವಿಸಲು ನಾನು ಬಿಡುವುದಿಲ್ಲ. ನಾನು ಆ ಕ್ಷೇತ್ರದ ಮೇಲೂ ಕಣ್ಣಿಡುತ್ತೇನೆ ಮತ್ತು ಅಲ್ಲಿನ ಜನರನ್ನು ನೋಡಿಕೊಳ್ಳುವುದನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net