ಇಂಡಿಯಾ ಟುಡೇ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿಯಾ ತಾಯಿ ಪೂಜಾ ಗೋಯಲ್, ಲೋಹಗಢ್ ಕೋಟೆಗೆ ಟ್ರೆಕ್ಕಿಂಗ್ ಹೋಗಬೇಕು ಎಂದು ಸಿಯಾ ಹಠ ಹಿಡಿದಿರಲಿಲ್ಲ, ಬದಲಿಗೆ ಮೃತ ಕೇತನ್ ಅಗರ್ವಾಲ್ ಅವರೇ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಸಿಯಾಗೆ ಅಲ್ಲಿಗೆ ಹೋಗಲು ಇಷ್ಟವಿರಲಿಲ್ಲ, ಘಟನೆ ನಡೆಯುವ ಮರುದಿನವೇ ಈ ಜೋಡಿ ಮಹಾಬಲೇಶ್ವರ ಪ್ರವಾಸಕ್ಕೆ ಹೋಗಬೇಕಿತ್ತು. ಹೀಗಾಗಿ ಟ್ರೆಕ್ಕಿಂಗ್ ಹೋದರೆ ಸುಸ್ತಾಗುತ್ತದೆ ಎಂದು ಸಿಯಾ ನಿರಾಕರಿಸಿದ್ದಳಂತೆ. ಮಮ್ಮಿ, ಕೇತನ್ ನನ್ನನ್ನು ಟ್ರೆಕ್ಕಿಂಗ್ ಬರಲು ಕೇಳುತ್ತಿದ್ದಾನೆ, ನನಗೆ ಹೋಗಲು ಇಷ್ಟವಿಲ್ಲ. ನೀವೇ ಆತನಿಗೆ ಬೇಡ ಎಂದು ಹೇಳಿ ಎಂದು ಸಿಯಾ ತನ್ನ ತಾಯಿಗೆ ತಿಳಿಸಿದ್ದಳಂತೆ.