ಹಿಜಾಬ್​​ಗಿಲ್ಲದ ನಿಷೇಧ ಬಿಂದಿಗ್ಯಾಕೆ?; ಪಿಯೂಷ್ ಬನ್ಸಾಲ್ ಸ್ಪಷ್ಟನೆ ಬಳಿಕವೂ Lenskart​ ಡ್ರೆಸ್​ಕೋಡ್​ ವಿರುದ್ಧ ನಿಲ್ಲದ ಆಕ್ರೋಶ

Lenskart Dress Code Controversy
Lenskart Dress Code Controversy
Published on
ನವದೆಹಲಿ: ಬಹಳ ತಡವಾಗಿ ನಿಮ್ಮ ಬದಲಾವಣೆ ಜಾರಿಗೆ ತಂದಿರಿ. ಧಾರ್ಮಿಕ ನಂಬಿಕೆಗೆ ಕನಿಷ್ಠ ಮಟ್ಟದಲ್ಲಿ ಹೇಗೆ ಅವಕಾಶ ನೀಡುತ್ತಿದ್ದೀರಿ. ಸಾರ್ವಜನಿಕವಾಗಿ ಮಾಡಲ್ಪಟ್ಟ ಈ ಸಂವಿಧಾನ ಬಾಹಿರ ನೀತಿಯ ಪಟ್ಟಿಯನ್ನು, ಕಂಪನಿ ಜಾರಿಗೆ ತಂದಿದ್ದಾದರೂ ಯಾಕೆ?ಮತ್ತು ಸಂಸ್ಥಾಪಕರನ್ನು ಕಾನೂನುಬದ್ಧವಾಗಿ ವಿಚಾರಣೆಗೆ ಒಳಪಡಿಸಬೇಕು. ಹೀಗೆ ನೆಟ್ಟಿಗರ ಆಕ್ರೋಶಕ್ಕೆ ಒಳಗಾಗಿರುವುದು ಲೆನ್ಸ್​​ಕಾರ್ಟ್​ನ ಸಂಸ್ಥಾಪಕ ಪಿಯೂಷ್​ ಬನ್ಸಾಲ್.
ಹೌದು, ಭಾರತದ ಪ್ರಮುಖ ಸಂಸ್ಥೆಯಾದ ಲೆನ್ಸ್‌ಕಾರ್ಟ್(Lenskart Dress Code)ತನ್ನ ಸಿಬ್ಬಂದಿಗಳ ಮೇಲೆ ಹೇರಿದ್ದ ವಿವಾದಾತ್ಮಕ ಡ್ರೆಸ್ ಕೋಡ್ ನಿಯಮಗಳ ವಿರುದ್ಧ ಸಾರ್ವಜನಿಕವಾಗಿ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಲೆನ್ಸ್​​ಕಾರ್ಟ್ ತನ್ನ ಸಂಸ್ಥೆಯ ಸಿಬ್ಬಂದಿಗಳಿಗೆ,​ ಹಿಂದೂ ಧರ್ಮದ ಸಂಕೇತಗಳಾದ ಬಿಂದಿ ಮತ್ತು ತಿಲಕವನ್ನು ನಿಷೇಧಿಸಿ, ಹಿಜಾಬ್‌ಗೆ ಮಾತ್ರ ಅವಕಾಶ ನೀಡಿತ್ತು. ಇದನ್ನು ಉಲ್ಲೇಖಿಸಿ ಶೆಫಾಲಿ ವೈದ್ಯ ಅವರು ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಾಗ್ವಾದಕ್ಕೆ ಗುರಿಯಾಗಿತ್ತು. ಸಾಕಷ್ಟು ಜನರಿಂದ ಟೀಕಾ ಪ್ರಹಾರಗಳು ಕೇಳಿ ಬಂದ ನಂತರ, ಈ ನಿಯಮವನ್ನು ಪಿಯೂಷ್ ಬನ್ಸಾಲ್ ರದ್ದು ಪಡಿಸಿ ಕ್ಷಮೆ ಯಾಚಿಸಿದ್ದಾರೆ.
ಪಿಯೂಷ್​ ಬನ್ಸಾಲ್​ ಹೇಳಿದ್ದೇನು?
ಹೊಸ ಡ್ರೆಸ್​ ಕೋಡ್​ ಪದ್ಧತಿಯನ್ನು ಜಾರಿ ಮಾಡಿದ್ದೇವೆ. ಲೆನ್ಸ್​​ಕಾರ್ಟ್​​ ಭಾರತದಲ್ಲಿರುವ ಭಾರತೀಯರಿಗಾಗಿ ನಿರ್ಮಿಸಿದ ಸಂಸ್ಥೆ. ಇದು ನಮ್ಮ ಸಂಸ್ಕೃತಿ ಧಾರ್ಮಿಕ ಪದ್ಧತಿಗೆ ಗೌರವ ನೀಡುತ್ತದೆ. ಆ ಹಳೆಯ ಟಿಪ್ಪಣಿಯಲ್ಲಿದ್ದ ತಪ್ಪು ಭಾಷಾ ಪ್ರಯೋಗದ ಜವಾಬ್ದಾರಿಯನ್ನು ನಾನು ವೈಯಕ್ತಿಕವಾಗಿ ಹೊರುತ್ತೇನೆ. ಈ ತಪ್ಪಿನಿಂದಾಗಿ ನೋವಾಗಿದ್ದರೆ ಖಂಡಿತ ನಾನು ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಬಿಂದಿ, ದಾರ ಎಲ್ಲ ಹಾಕ್ಕೊಳ್ಳಬಹುದು
ಬಿಂದಿ ಮತ್ತು ತಿಲಕಕ್ಕೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಫೆಬ್ರವರಿ ತಿಂಗಳಲ್ಲೇ ಗಮನಿಸಿ ತೆಗೆದುಹಾಕಲಾಗಿತ್ತು. ಏಪ್ರಿಲ್ 18 ರಿಂದ ಅನ್ವಯವಾಗುವಂತೆ ನೂತನ ಡ್ರೆಸ್​​ ಕೋಡ್​​ ಅನ್ನು ಬಿಡುಗಡೆ ಮಾಡಿದ್ದೇವೆ. ಬಿಂದಿ, ತಿಲಕ, ಸಿಂಧೂರ, ಮಂಗಳಸೂತ್ರ, ಧಾರ್ಮಿಕ ದಾರ ಎಲ್ಲವನ್ನು ಧರಿಸಬಹುದು. ಎಲ್ಲದಕ್ಕೂ ಮುಕ್ತ ಅವಕಾಶವಿದೆ ಎಂದು ಹೇಳಿಕೊಂಡಿದ್ದಾರೆ. ಹಿಜಾಬ್ ಮತ್ತು ಟರ್ಬನ್‌ಗಳನ್ನು ಮೊದಲಿನಂತೆಯೇ ಸಮವಸ್ತ್ರದ ಭಾಗವಾಗಿ ಧರಿಸಬಹುದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ನೆಟ್ಟಿಗರು ಏನಂದ್ರು?
ನೀವು ಕ್ಷಮೆಯಾಚಿಸಿ, ಡ್ರೆಸ್​ ಕೋಡ್​​ ಬದಲಿಸಿರುವುದು ಪ್ರಾಮಾಣಿಕತೆಯಿಂದ ಇದೆ ಎಂದು ತಿಳಿಯುತ್ತಿಲ್ಲ. ಕೇವಲ ಜನರ ಆಕ್ರೋಶಕ್ಕೆ ಹೆದರಿಕೊಂಡು ಹೊಸ ಡ್ರೆಸ್​ ಕೋಡ್ ಜಾರಿ ಮಾಡಲಾಗಿದೆ. ಇದು ನವ ಭಾರತ ಇಲ್ಲಿ ಯಾರೂ ತಮ್ಮ ಸಂಸ್ಕೃತಿ ಮತ್ತು ನಂಬಿಕೆಯನ್ನು ಪ್ರದರ್ಶಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net