Dating App ಬಳಕೆ ಮಾಡ್ತಿದ್ರೆ ಇಂದೇ ಎಚ್ಚೆತ್ತುಕೊಳ್ಳಿ; ಚಿನ್ನ..ರನ್ನ ಎಂದ ಬ್ಯೂಟಿಗೆ ಮರುಳಾಗಿ ಹಣ ಕಳೆದುಕೊಂಡ ಗುರುಗ್ರಾಮದ ವ್ಯಕ್ತಿ

​Dating App Scam, AI image
​Dating App Scam, AI image
Published on

ಪ್ರಮುಖ ಮುಖ್ಯಾಂಶಗಳು

  • ಡೇಟಿಂಗ್ ಆ್ಯಪ್‌ನ ಮೂಲಕ ಪರಿಚಯವಾದ ಯುವತಿಯಿಂದ ವಂಚನೆ
  • ​ದೆಹಲಿಯ ಕೆಫೆಯೊಂದರಲ್ಲಿ 22,000 ರೂಪಾಯಿಗೆ ಡ್ರಿಂಕ್ಸ್​ ಬಿಲ್ ಮಾಡಿದ ಯುವತಿ, ವ್ಯಕ್ತಿಗೆ ಶಾಕ್
  • ​ರಾಜಕೀಯ ಸಂಪರ್ಕದ ಹೆಸರಲ್ಲಿ ಬೆದರಿಸಿ ಹಣ ಪೀಕಿದ ವಂಚಕರು
ನವದೆಹಲಿ: ಇತ್ತೀಚೆಗೆ ಡೇಟಿಂಗ್ ಆ್ಯಪ್‌ನ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ, ಬೇರೆ ಬೇರೆ ಆಪ್​ಗಳು ಉದ್ಭವವಾಗತ್ತಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ವಂಚಕರು ಅಮಾಯಕರನ್ನು ವಂಚಿಸಿ ಅವರಿಂದ ಹಣ ಪೀಕುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇದಕ್ಕೆ ಹೊಸ ಉದಾಹರಣೆ ಎಂದರೆ ಗುರುಗ್ರಾಮದ ವ್ಯಕ್ತಿಯೊಬ್ಬ ಟೇಟಿಂಗ್​ ಆಪ್​ ಬಳಕೆ ಮಾಡಿ ಹಣ ಕಳೆದುಕೊಂಡಿದ್ದಾರೆ.
ಗುರುಗ್ರಾಮದ ವ್ಯಕ್ತಿಯೊಬ್ಬರು ಡೇಟಿಂಗ್​ ಆ್ಯಪ್‌ ಮೂಲಕ ಪರಿಚಯವಾದ ಯುವತಿಯನ್ನು ಭೇಟಿಯಾದಾಗ ತಾನು ಹೇಗೆ ವಂಚನೆಗೆ ಒಳಗಾದೆ ಎಂಬ ಬಗ್ಗೆ ರೆಡ್ಡಿಟ್​​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಜೊತೆಗೆ ನನ್ನಂತೆ ನೀವು ಕಣ್ಣಿದ್ದು ಕುರುಡರಾಗ್ಬೇಡಿ, ಕಿವಿಯಿದ್ದು ಕಿವುಡರಾಗ್ಬೇಡಿ ಎಂದು ಮಾತನಾಡಿದರು.

ರೆಡ್ಡಿಟ್​ ಪೋಸ್ಟ್​​ನಲ್ಲಿ ಏನಿದೆ?

ಗುರುಗ್ರಾಮದ ವ್ಯಕ್ತಿ ಬಂಬಲ್ ಎನ್ನುವ ಡೇಟಿಂಗ್​ ಆ್ಯಪ್‌ನಲ್ಲಿ 'ಜಿಯಾ ನೇಗಿ' ಎಂಬ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಅವರಿಬ್ಬರು ಅನೋನ್ಯವಾಗಿ ಮಾತನಾಡಲು ಆರಂಭಿಸಿದ್ದರು. ಒಂದೊಮ್ಮೆ ಇಬ್ಬರು ಭೇಟಿಯಾಗಲು ನಿರ್ಧರಿಸದರು.
ಯಾವುದೇ ಪೂರ್ವ ಯೋಜನೆಯಿಲ್ಲದ ಕಾರಣ, ನಾನು ಹತ್ತಿರದ 'ಕೆಫೆ ಡೆಲ್ಲಿ ಹೈಟ್ಸ್'ಗೆ ಹೋಗೋಣ ಎಂದೆ. ಆದರೆ ಆಕೆ ಲಾಂಜ್‌ಗೇ ಹೋಗಬೇಕೆಂದು ಪಟ್ಟು ಹಿಡಿದಳು. ಆನ್‌ಲೈನ್‌ನಲ್ಲಿ ಹುಡುಕಿ ಹತ್ತಿರದ ಒಂದು ಸ್ಥಳಕ್ಕೆ ಹೋದೆವು. ಅಲ್ಲಿಗೆ ಹೋದ ಮೇಲೆ ಆಕೆಗೆ ಅಲ್ಲಿನ ವಾತಾವರಣ ಇಷ್ಟವಾಗುತ್ತಿಲ್ಲ, ಜಿಟಿಬಿ ನಗರಕ್ಕೆ ಹೋಗೋಣ ಅಲ್ಲಿ ಒಳ್ಳೆಯ ಜಾಗಗಳಿವೆ ಎಂದಳು. ನನಗೆ ದೆಹಲಿಯ ಬಗ್ಗೆ ಹೆಚ್ಚು ತಿಳಿಯದ ಕಾರಣ, ಸರಿ ಎಂದು ಒಪ್ಪಿದೆ.
ದೆಹಲಿಯ ಜಿಟಿಬಿ ನಗರದ 'ಬಘೀರಾ' ಎಂಬ ರೆಸ್ಟೋರೆಂಟ್‌ಗೆ ಹೋದೆವು. ನನಗೆ ಡ್ರೈವ್ ಮಾಡಬೇಕಿದ್ದರಿಂದ ಕುಡಿಯುವ ಮೂಡ್ ಇರಲಿಲ್ಲ, ಹಾಗಾಗಿ ನಾನು ಕೇವಲ ಆಹಾರದ ಮೆನು ನೋಡಿದೆ. ಆದರೆ ಆಕೆ ಹುಕ್ಕಾ ಬೇಕೆಂದು ಒತ್ತಾಯಿಸುತ್ತಿದ್ದಳು. ಆಕೆ ನನ್ನನ್ನು ಕುಡಿಯುವಂತೆ ಬಲವಂತಪಡಿಸಿದಳು, ನಾನು ನಿರಾಕರಿಸಿದಾಗ ಆಕೆ ತನಗಾಗಿ ಡ್ರಿಂಕ್ಸ್ ಆರ್ಡರ್ ಮಾಡಿದಳು.
ನಾನು ಮಾತ್ರ ಒಂದು ಪ್ಲೇಟ್​ ಪಾಸ್ತಾ ಹಾಗೂ ಶೇಕ್​ ಆರ್ಡರ್ ಮಾಡಿಕೊಂಡಿದ್ದೆ ಎಂದಿದ್ದಾರೆ.

ಮೋಸ ಮಾಡುತ್ತಿದ್ದಾರೆ ಎಂದು ಅರಿತುಕೊಂಡೆ

ಆಕೆ ಮದ್ಯ ಮಾತ್ರ ಆರ್ಡರ್​ ಮಾಡುತ್ತಿದ್ದಳು. ಯಾವುದೇ ಫುಡ್ ತಿನ್ನುತ್ತಿರಲಿಲ್ಲ. ಆ ಮಧ್ಯೆ ನನಗೆ ನನ್ನ ಸಹೋದರ ಹಾಗೂ ಸ್ನೇಹಿತನ ಕರೆ ಬಂದಿತು. ಹಾಗಾಗಿ ನಾನು ಅದನ್ನು ಅಟೆಂಡ್​ ಮಾಡಲು ಹೊರಗೆ ಬಂದಾಗಲೆಲ್ಲಾ ಅಪರಿಚಿತ ವ್ಯಕ್ತಿಯೊಬ್ಬ ಈತನನ್ನು ಹಿಂಬಾಲಿಸುತ್ತಿದ್ದ. ಏನೋ ಮೋಸವಾಗುತ್ತಿದೆ. ಆ ಹುಡುಗಿ ಏನೋ ಸಂಚು ರೂಪಿಸುತ್ತಿದ್ದಾಳೆ ಎಂದು ಅರೆತುಕೊಂಡೆ.
ನನ್ನ ಸ್ನೇಹಿತ ನನ್ನ ರಕ್ಷಣೆಗಾಗಿ ಆಗಾಗ ಕರೆ ಮಾಡುತ್ತಿದ್ದ, ನಾನು ಪಾರ್ಕಿಂಗ್​ ಏರಿಯಾಗೆ ತೆರಳಿ ಕಾರು ತೆಗೆಯುವಾಗ ನನ್ನ ಕಾರಿನ ಮುಂದೆ ಮತ್ತೊಂದು ಕಾರನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು. ಅದನ್ನು ತೆಗೆಯಲು ಹೇಳಿದಾಗ, ಅಲ್ಲಿದ್ದ ವ್ಯಕ್ತಿಗಳು "ಮೊದಲು ಬಿಲ್ ಪಾವತಿಸಿ, ಆಮೇಲೆ ಕಾರು ತೆಗೆಯುತ್ತೇವೆ" ಎಂದರು. ಆಗ ನನಗೆ ತುಂಬಾ ಕೋಪ ಬಂತು, ಆದರೆ ರಸ್ತೆಯಲ್ಲಿ ಜಗಳ ಮಾಡುವುದು ಬೇಡವೆಂದು ನಿರ್ಧರಿಸಿದೆ.
ರೆಸ್ಟೋರೆಂಟ್​​ ಅಕೌಂಟೆಂಟ್​ ಬಳಿ ಬಿಲ್​ ಕೇಳಿದೆ. ಬಿಲ್ ಮೊತ್ತ 22,000 ರೂಪಾಯಿ ದಾಟಿತ್ತು. ಇದನ್ನು ಕಂಡು ಅವಕ್ಕಾದೆ. ನನ್ನದು 800 ಮಿಕ್ಕಿದ್ದೆಲ್ಲ ಆಕೆಯದ್ದೇ ಆರ್ಡರ್​ ಎಂದು ಸಂತ್ರಸ್ತ ಯುವಕ ಹೇಳಿಕೊಂಡಿದ್ದಾರೆ.
ನಾನು ಅವರಿಗೆ ನೇರವಾಗಿ ಹೇಳಿದೆ. ನನಗೆ ಈ ಸ್ಕ್ಯಾಮ್ ಬಗ್ಗೆ ಗೊತ್ತು, ನಾನು ಪೂರ್ತಿ ಬಿಲ್ ಕಟ್ಟುವುದಿಲ್ಲ. ನಾನು ನನ್ನ ಕುಟುಂಬದ ಹಿನ್ನೆಲೆ ಮತ್ತು ನನ್ನ ಸಹೋದರನಿಗೆ ಮುಖ್ಯಮಂತ್ರಿಯವರ ಜೊತೆಗಿರುವ ಸಂಬಂಧವನ್ನು ತೋರಿಸಿದಾಗ ಅವರು ಸ್ವಲ್ಪ ಮೆತ್ತಗಾದರು. ಸೆಟಲ್ಮೆಂಟ್ ಮಾಡಿಕೊಳ್ಳೋಣ" ಎಂದು 5,000 ಕೇಳಿದರು. ನಾನು ಅದಕ್ಕೂ ಒಪ್ಪದೆ, ಆಹಾರಕ್ಕೆ ತಕ್ಕಷ್ಟು ಅಂದರೆ ಗರಿಷ್ಠ 3,000 ಮತ್ತು ನಿಮ್ಮ ಕಮಿಷನ್ ಸೇರಿಸಿ 4,000 ನೀಡುತ್ತೇನೆ ಎಂದು ಪಟ್ಟು ಹಿಡಿದೆ. ಕೊನೆಗೆ ಅವರು₹4,000ಕ್ಕೆ ಒಪ್ಪಿದರು. ನಾನು ಹಣ ಪಾವತಿಸಿ ಅಲ್ಲಿಂದ ಹೊರಬಂದೆ.
ಎಚ್ಚರಿಕೆಯಿಂದಿರಿ
ಈ ಪೋಸ್ಟ್​ ಓದುತ್ತಿರುವವರಿಗೆ ನಾನು ಏನು ಹೇಳಬೇಕು ಎಂದು ನಿರ್ಧರಿಸಿದ್ದೇನೆ ಎಂದರೆ, ನನ್ನಂತೆ ದಡ್ಡರಾಗಬೇಡಿ, ಇಂತಹ ಆಪ್‌ಗಳ ಮೂಲಕ ಅಪರಿಚಿತರನ್ನು ಭೇಟಿಯಾಗುವಾಗ ಎಚ್ಚರದಿಂದಿರಿ. ನನ್ನಂತೆ ಮೋಸ ಹೋಗ್ಬೇಡಿ. ಕಿವಿಯಿದ್ದು ಕಿವುಡರಾಗಬೇಡಿ ಎಂದು ಎಚ್ಚರಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net