

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಭರ್ಜರಿ ಬೇಟೆಯಾಡಿದ್ದು, ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೈಬಾ (LeT) ಕಮಾಂಡರ್ ಲತೀಫ್ ಭಟ್‌ನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ.
ಬುಧವಾರ ಮುಂಜಾನೆ (ನ.18) ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ದೇವ್ಸಾರ್ ಪ್ರದೇಶದಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಈ ಕುಖ್ಯಾತ ಉಗ್ರ ಅಂತ್ಯಕಂಡಿದ್ದಾನೆ. ಇತ್ತೀಚಿನ ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿಗೆ ಸೇನೆ ಈ ಮೂಲಕ ತಕ್ಕ ಪ್ರತೀಕಾರ ತೀರಿಸಿಕೊಂಡಿದೆ.
ಎನ್‌ಕೌಂಟರ್ ಆರಂಭವಾದ ವೇಳೆ ಲತೀಫ್ ಭಟ್‌ನನ್ನು ಜೀವಂತವಾಗಿ ಸೆರೆಹಿಡಿಯಲು ಭದ್ರತಾ ಪಡೆಗಳು ಮಾನವೀಯ ಪ್ರಯತ್ನ ನಡೆಸಿದ್ದವು. ಆತನೊಂದಿಗೆ ವಿಡಿಯೋ ಕರೆ ಮೂಲಕ ಸಂಪರ್ಕ ಸಾಧಿಸಿದ ಅಧಿಕಾರಿಗಳು, "ಲತೀಫ್ ಭಾಯ್, ನೀನು ಏಕೆ ಈ ತಪ್ಪು ದಾರಿಯನ್ನು ಆರಿಸಿಕೊಂಡಿದ್ದೀಯಾ? ದಯವಿಟ್ಟು ಹಿಂಸೆ ನಿಲ್ಲಿಸಿ ಶರಣಾಗಿಬಿಡು, ನಾವು ನಿನ್ನನ್ನು ಕೊಲ್ಲಲು ಬರುತ್ತಿದ್ದೇವೆ" ಎಂದು ಮನವೊಲಿಸಲು ಯತ್ನಿಸಿದ್ದರು.
ಆದರೆ, ಸೇನೆಯ ಮನವಿಯನ್ನು ತಿರಸ್ಕರಿಸಿದ ಲತೀಫ್ ಭಟ್, "ನಾನು ಅಲ್ಲಾನನ್ನು ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಭೇಟಿಯಾಗಲು ಹೊರಟಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ, ನನ್ನೊಂದಿಗೆ ಅಲ್ಲಾಹನೊಬ್ಬನೇ ಇದ್ದಾನೆ" ಎಂದು ಉತ್ತರಿಸಿ ಗುಂಡಿನ ದಾಳಿ ಮುಂದುವರಿಸಿದ್ದಾನೆ. ಕೊನೆಗೆ ಅನ್ಯಮಾರ್ಗವಿಲ್ಲದೆ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಆತ ಹತನಾಗಿದ್ದಾನೆ. ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಭಯೋತ್ಪಾದಕ ಈತನಾಗಿದ್ದ ಎಂದು ಹೇಳಲಾಗುತ್ತಿದೆ.
ಕಳೆದ ನವೆಂಬರ್ 11 ರಂದು ಕುಲ್ಗಾಂನ ತಪಾಸಣಾ ಕೇಂದ್ರವೊಂದರ ಬಳಿ ಬೈಕ್‌ನಲ್ಲಿ ಬಂದ ಉಗ್ರರು ಗುಂಡು ಹಾರಿಸಿದ್ದರಿಂದ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು. ಈ ಕೃತ್ಯದಲ್ಲಿ ಲತೀಫ್ ಭಟ್ ಮತ್ತು ಉಮರ್ ನಿಸಾರ್ ದಾರ್ ಭಾಗಿಯಾಗಿದ್ದರು.
ಸೋಮವಾರ ಲಾರು ಬೈಪಾಸ್ ಪ್ರದೇಶದಲ್ಲಿ ನಡೆದ ಮೊದಲ ಎನ್‌ಕೌಂಟರ್‌ನಲ್ಲಿ ಸೇನೆ ಉಮರ್ ನಿಸಾರ್ ದಾರ್‌ನನ್ನು ಹತ್ಯೆಗೈದಿತ್ತು. ಆದರೆ ಅಂದು ಲತೀಫ್ ಭಟ್ ಕತ್ತಲಲ್ಲಿ ಪರಾರಿಯಾಗಿದ್ದನು. ಕೇವಲ ಎರಡು ದಿನಗಳಲ್ಲೇ ಜಂಗಲ್‌ಪೋರಾದಲ್ಲಿ ಆತನ ಜಾಡು ಹಿಡಿದ ಭದ್ರತಾ ಪಡೆಗಳು ಇದೀಗ ಆತನನ್ನೂ ಸದೆಬಡಿಯುವುದರಲ್ಲಿ ಯಶಸ್ವಿಯಾಗಿದೆ.
ಹಿಂದೆ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉಮರ್ ನಿಸಾರ್ ದಾರ್, ನಾಪತ್ತೆಯಾಗಿ ದಿ ರೆಸಿಸ್ಟೆನ್ಸ್ ಫ್ರಂಟ್ ಉಗ್ರ ಸಂಘಟನೆ ಸೇರಿದ್ದನು. ಕಳೆದ ಆರು ತಿಂಗಳಿನಿಂದ ಈತ ಲತೀಫ್ ಭಟ್‌ಗೆ ಆಶ್ರಯ ನೀಡಿದ್ದನು. ನವೆಂಬರ್ 11 ರ ದಾಳಿಗೂ ಒಂದು ದಿನ ಮುನ್ನ ಇವರಿಬ್ಬರೂ ಮಿರ್ ಬಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಂ ಪ್ರದೇಶಗಳಲ್ಲಿ ಸಂಚರಿಸಿ ದಾಳಿಗೆ ಸಂಚು ರೂಪಿಸಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಇದೀಗ ಇಬ್ಬರೂ ಉಗ್ರರ ಹತ್ಯೆಯೊಂದಿಗೆ ಕುಲ್ಗಾಂನಲ್ಲಿ ಅಡಗಿದ್ದ ಉಗ್ರ ಜಾಲವನ್ನು ಭದ್ರತಾ ಪಡೆಗಳು ಸಂಪೂರ್ಣವಾಗಿ ಧ್ವಂಸಗೊಳಿಸಿವೆ, (ಏಜೆನ್ಸೀಸ್).