ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲೇ ಮಾಂಸಹಾರ ನಿಷೇಧಿಸಿದ ಕೇರಳ ರಾಜ್ಯಪಾಲ ಮಾಥುರ್: ಕಾಂಗ್ರೆಸ್​ ಕಿಡಿ | Kerala Governor

ಕೇರಳ ರಾಜ್ಯಪಾಲರಾಗಿ ಓಂ ಪ್ರಕಾಶ್ ಮಾಥುರ್ ಅವರು ಇಂದು(ಅ. 23) ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಲೋಕ ಭವನದ ಅಡುಗೆಮನೆಯಲ್ಲಿ ಮಾಂಸ ಮತ್ತು ಮೀನು ಬೇಯಿಸಬಾರದು ಎಂದು ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕೇರಳ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಮತ್ತು ಕೆ.ಸಿ.ವೇಣುಗೋಪಾಲ್
ಕೇರಳ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಮತ್ತು ಕೆ.ಸಿ.ವೇಣುಗೋಪಾಲ್
Published on: 

ತಿರುವನಂತಪುರಂ: ಕೇರಳ ರಾಜ್ಯಪಾಲರಾಗಿ ಓಂ ಪ್ರಕಾಶ್ ಮಾಥುರ್ ಅವರು ಇಂದು(ಅ. 23) ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಲೋಕ ಭವನದ ಅಡುಗೆಮನೆಯಲ್ಲಿ ಮಾಂಸ ಮತ್ತು ಮೀನು ಬೇಯಿಸಬಾರದು ಎಂದು ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸಿಕ್ಕಿಂ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಮಾಥುರ್ ಶುಕ್ರವಾರ ಕೇರಳದ 29 ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ವಿ.ಡಿ. ಸತೀಶನ್, ಸ್ಪೀಕರ್ ತಿರುವಂಚೂರು ರಾಧಾಕೃಷ್ಣನ್, ಸಚಿವರು ಮತ್ತು ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೇನ್ ಪ್ರಮಾಣ ವಚನ ಬೋಧಿಸಿದರು. ಅಧಿಕಾರ ವಹಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಮಾಂಸಹಾರ ನಿಷೇಧಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಕೆ.ಸಿ.ವೇಣುಗೋಪಾಲ್, ಕೇರಳದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಅರ್ಥಮಾಡಿಕೊಳ್ಳದೆ ರಾಜ್ಯಪಾಲರು ತುಂಬಾ ಮುಂದೆ ಹೋಗಿದ್ದಾರೆ. ಮತಗಳನ್ನು ಕಸಿದುಕೊಂಡು, ನಾಗರಿಕರ ಪ್ರಜಾಪ್ರಭುತ್ವ ಹಕ್ಕುಗಳ ಬೇರುಗಳ ಮೇಲೆಯೇ ಪ್ರಹಾರ ನಡೆಸಿದವರು, ಈಗ ಆಹಾರ ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳಲು ಸಿದ್ಧರಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Also Read
ಅಳಿಯ ರೈಹಾನ್ ವಾದ್ರಾ ಪರ ಪೋಸ್ಟ್ ಹಾಕದೇ ಮೌನ: ಕಾಂಗ್ರೆಸ್​ನಲ್ಲಿ ರಾಹುಲ್ v/s ಪ್ರಿಯಾಂಕಾ ಸಂಘರ್ಷವಿದೆ ಎಂದ ಬಿಜೆಪಿ | BJP
ಕೇರಳ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಮತ್ತು ಕೆ.ಸಿ.ವೇಣುಗೋಪಾಲ್

ಕೇರಳದ ಆಹಾರ ಸಂಸ್ಕೃತಿಯನ್ನು ಸಮರ್ಥಿಸಿಕೊಂಡಿರುವ ವೇಣುಗೋಪಾಲ್, ಕೇರಳವು ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಹೊಂದಿದ್ದು, ಸಸ್ಯಾಹಾರ ಮತ್ತು ಮಾಂಸಾಹಾರಿ ಆಹಾರಗಳು ದೈನಂದಿನ ಜೀವನದ ಭಾಗವಾಗಿದೆ. ಕರಾವಳಿ ರಾಜ್ಯ ಕೇರಳದಲ್ಲಿ ಮೀನು ಸಂಪನ್ಮೂಲಗಳು ಹೇರಳವಾಗಿದ್ದು, ಇಲ್ಲಿ ಮೀನು ಹಾಗೂ ಇತರ ಮಾಂಸಾಹಾರಿ ಆಹಾರಗಳನ್ನು ಸೇವಿಸುವ ದೀರ್ಘಕಾಲದ ಸಂಪ್ರದಾಯವಿದೆ ಎಂದಿದ್ದಾರೆ.

ರಾಜ್ಯಪಾಲರು ತಮ್ಮದೇ ಆದ ಸಸ್ಯಾಹಾರಿ ಆಹಾರವನ್ನು ಅನುಸರಿಸಲು ಸ್ವತಂತ್ರರು ಎಂದಿರುವ ಅವರು, ಮಲಯಾಳಿಗಳ ಆಹಾರ ಪದ್ಧತಿಯನ್ನು ನಿರ್ಬಂಧಿಸುವ ಅಥವಾ ಇನ್ನು ಮುಂದೆ ಅವರು ಏನು ತಿನ್ನಬೇಕೆಂದು ನಿರ್ದೇಶಿಸುವ ಯಾವುದೇ ಪ್ರಯತ್ನವನ್ನು ಒಪ್ಪಲು ಸಾಧ್ಯವಿಲ್ಲ. ಕೇರಳದ ಉದ್ಯೋಗಿಗಳಿಗೆ ಊಟ ಒದಗಿಸುವ ಲೋಕಭವನದ ಅಡುಗೆಮನೆಯು ಅವರ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕೆಂದು ಒತ್ತಾಯಿಸುವುದು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿದ್ದಾರೆ.

ಇಂತಹ ನಿರ್ಬಂಧಗಳು ವೈಯಕ್ತಿಕ ಸ್ವಾತಂತ್ರ್ಯವನ್ನು ಹಾಳುಮಾಡುತ್ತವೆ ಮತ್ತು ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಆಹಾರ ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಈ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಯಾವುದೇ ಕ್ರಮದಿಂದ ರಾಜ್ಯಪಾಲರು ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net