"ಭಾರತ ಸರ್ಕಾರದಿಂದ ನ್ಯಾಯ ಸಿಗಲ್ಲ", "ಪಾಕಿಸ್ತಾನವೇ ಕಾಶ್ಮೀರವನ್ನು ರಕ್ಷಿಸುತ್ತಿದೆ!" ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ! Farooq Abdullah

ಪಾಕಿಸ್ತಾನವೇ ಕಾಶ್ಮೀರವನ್ನು ರಕ್ಷಿಸುತ್ತಿದೆ ಎಂದು ಹೇಳುವ ಮೂಲಕ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Farooq Abdullah stated that Pakistan is protecting Kashmiris.
ಪಾಕಿಸ್ತಾನ ಕಾಶ್ಮೀರಿಗಳನ್ನು ರಕ್ಷಿಸುತ್ತಿದೆ ಎಂದು ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ
Published on: 

ಬಾರಾಮುಲ್ಲಾ : ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಹಿರಿಯ ನಾಯಕ ಫಾರೂಕ್ ಅಬ್ದುಲ್ಲಾ ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟು ದೇಶಾದ್ಯಂತ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ವೇದಿಕೆಗಳಲ್ಲಿ ಕಾಶ್ಮೀರ ವಿಚಾರವನ್ನು ನಿರಂತರವಾಗಿ ಎತ್ತುವ ಮೂಲಕ ಪಾಕಿಸ್ತಾನವೇ ಜಮ್ಮು ಮತ್ತು ಕಾಶ್ಮೀರದ ಜನರನ್ನು ರಕ್ಷಿಸುತ್ತಿದೆ ಎಂದು ಹೇಳುವ ಮೂಲಕ ಅವರು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

ಭಾರತ ಸರ್ಕಾರ ಜನರ ಹಕ್ಕುಗಳನ್ನು ಕಸಿಯಲು ಹೊಂಚು ಹಾಕಿದ್ದು, ಅಂತಾರಾಷ್ಟ್ರೀಯ ಒತ್ತಡದ ಭಯದಿಂದ ಮಾತ್ರ ಸುಮ್ಮನಿದೆ ಎಂಬ ಅವರ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತಲ್ಲಳವನ್ನು ಸೃಷ್ಟಿಸಿದೆ.

ಅಬ್ದುಲ್ಲಾ ಹೇಳಿದ್ದೇನು?

ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಪಾಕಿಸ್ತಾನದ ಬೆಂಬಲಕ್ಕೆ ನಿಂತಂತೆ ಮಾತನಾಡಿದರು. "ನಮ್ಮ ಪಕ್ಕದ ದೇಶ (ಪಾಕಿಸ್ತಾನ) ನಿರಂತರವಾಗಿ ಜಗತ್ತಿನ ಗಮನ ಸೆಳೆಯುತ್ತಿದೆ. ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಯೊಂದು ವೇದಿಕೆಯಲ್ಲೂ ಹೋಗಿ ಕಾಶ್ಮೀರ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಹೇಳುತ್ತಿದ್ದಾರೆ. ನಿಜ ಹೇಳಬೇಕೆಂದರೆ ಪಾಕಿಸ್ತಾನ ನಮ್ಮನ್ನು ರಕ್ಷಿಸುತ್ತಿದೆ ಎಂದಿದ್ದಾರೆ.

ಅಷ್ಟಕ್ಕೇ ನಿಲ್ಲದ ಅಬ್ದುಲ್ಲಾ, ಸ್ಥಳೀಯರನ್ನು ಪ್ರಚೋದಿಸುವ ರೀತಿಯಲ್ಲಿ ಮಾತನಾಡಿ, "ದೆಹಲಿಯ ಸರ್ಕಾರದಿಂದ ನೀವು ನ್ಯಾಯ ಸಿಗುತ್ತದೆ ಎಂದು ನಂಬಿದ್ದೀರಾ? ನಿಮ್ಮ ಹಕ್ಕುಗಳು ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಎದ್ದುನಿಂತು ಹೋರಾಡಿ. ಧೈರ್ಯದಿಂದ ಹೋರಾಡದಿದ್ದರೆ ನಿಮ್ಮ ಅಸ್ತಿತ್ವವೇ ಇಲ್ಲದಂತಾಗುತ್ತದೆ" ಎಂದು ವಿಷಕಾರಿದ್ದಾರೆ.

'ಹಾಗಿದ್ದರೆ ಪಾಕಿಸ್ತಾನಕ್ಕೇ ಹೋಗಿ ನೆಲೆಸಿ!'

ಫಾರೂಕ್ ಅಬ್ದುಲ್ಲಾ ಅವರ ಈ ದೇಶವಿರೋಧಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ಸತ್ ಶರ್ಮಾ ನೇರ ವಾಗ್ದಾಳಿ ನಡೆಸಿ, "ಅಬ್ದುಲ್ಲಾ ಅವರು ಭಾರತದ ಜನರ ಬಳಿ ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಭಾರತದಲ್ಲಿ ಮಾತನಾಡುವ ಸ್ವಾತಂತ್ರ್ಯ ಇರುವುದರಿಂದಲೇ ಇವರು ಇಷ್ಟೆಲ್ಲಾ ಮಾತನಾಡುತ್ತಿದ್ದಾರೆ. ಇದೇ ಮಾತನ್ನು ಪಾಕಿಸ್ತಾನದಲ್ಲಿ ಆಡಿದ್ದರೆ ಇವರ ಪರಿಸ್ಥಿತಿ ಏನಾಗುತ್ತಿತ್ತು ಎಂಬುದು ಇವರಿಗೇ ಗೊತ್ತು. ಭಾರತದ ಋಣದಲ್ಲಿದ್ದು ಪಾಕಿಸ್ತಾನವನ್ನು ಹೊಗಳುವುದಾದರೆ ಅವರು ತಕ್ಷಣವೇ ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ" ಎಂದು ಖಾರವಾಗಿ ಎಚ್ಚರಿಸಿದ್ದಾರೆ.

Also Read
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರ: ಅ. 28 ಕ್ಕೆ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ವರುಣಾರ್ಭಟ; ಹವಾಮಾನ ಇಲಾಖೆ ರೆಡ್ ಅಲರ್ಟ್! Cyclone Alert
Farooq Abdullah stated that Pakistan is protecting Kashmiris.

'ಇವರು ಭಾರತದಲ್ಲಿದ್ದು ಪಾಕ್ ಭಜನೆ ಮಾಡ್ತಿದ್ದಾರೆ!'

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡ ವಿನೋದ್ ಬನ್ಸಾಲ್ ಕೂಡ ಅಬ್ದುಲ್ಲಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಕೆಲವರು ಇನ್ನೂ ತಮ್ಮ ಹಳೆಯ ದೇಶದ್ರೋಹದ ಬುದ್ಧಿಯನ್ನು ಬಿಡುವುದಿಲ್ಲ. ಭಾರತದಲ್ಲೇ ಇದ್ದು ಪಾಕಿಸ್ತಾನವನ್ನು ಕೊಂಡಾಡುತ್ತಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದು ಭಾರತದ ಸೈನ್ಯ ಮತ್ತು ರಕ್ಷಣಾ ಶಕ್ತಿಯಿಂದ ಸುರಕ್ಷಿತವಾಗಿದೆಯೇ ಹೊರತು, ಭಿಕ್ಷೆ ಬೇಡುವ ಪಾಕಿಸ್ತಾನದಿಂದಲ್ಲ" ಎಂದು ತಿರುಗೇಟು ನೀಡಿದ್ದಾರೆ.

ಮುಸ್ಲಿಮರಿಗೆ ಒಗ್ಗಟ್ಟಿನ ಕರೆ!

ಇದೇ ಸಭೆಯಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರ ಆಸ್ತಿಗಳನ್ನು ಗುರಿಯಾಗಿಸಿ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. "ನಮ್ಮ ಮನೆ, ಅಂಗಡಿ ಮತ್ತು ಮಸೀದಿಗಳನ್ನು ನೆಲಸಮ ಮಾಡುತ್ತಿರುವಾಗ ನಾವೇಕೆ ಈ ವ್ಯವಸ್ಥೆಯನ್ನು ಬೆಂಬಲಿಸಬೇಕು? ಮುಸ್ಲಿಮರೆಲ್ಲರೂ ಒಗ್ಗೂಡಿ ಬೀದಿಗಿಳಿದು ಹೋರಾಡಬೇಕು" ಎಂದು ಕರೆ ನೀಡಿದ್ದಾರೆ.

ಜೊತೆಗೆ ಮಾಧ್ಯಮಗಳ ಮೇಲೂ ಹರಿಹಾಯ್ದ ಅವರು, ಮುಖ್ಯವಾಹಿನಿ ಮಾಧ್ಯಮಗಳು ಸರ್ಕಾರದ 'ಸಂಬಳ ಪಡೆಯುವ ವಕ್ತಾರರಂತೆ' ಬದಲಾಗಿವೆ ಮತ್ತು ಧ್ವನಿ ಎತ್ತುವ ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂಷಿಸಿದ್ದಾರೆ. ಒಟ್ಟಿನಲ್ಲಿ, ನೆರೆಯ ಶತ್ರು ರಾಷ್ಟ್ರವನ್ನು ಹಾಡಿ ಹೊಗಳಿದ ಫಾರೂಕ್ ಅಬ್ದುಲ್ಲಾ ಹೇಳಿಕೆ ಸದ್ಯ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net