

ನವದೆಹಲಿ: ನ್ಯಾಯಾಂಗವು ದೈನಂದಿನ ರಾಜಕೀಯ ಸಂಘರ್ಷಗಳಿಂದ ದೂರವಿರಬೇಕು ಎಂದು ಪ್ರತಿಪಾದಿಸಿರುವ ಬಿಜೆಪಿ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಭೇಟಿಯಾಗಲು ಮುಂದಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಕಿಡಿಕಾರಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ನ್ಯಾಯಾಂಗವನ್ನು ರಾಜಕೀಯ ವಿವಾದಗಳಿಂದ ದೂರವಿರಿಸುವ ಅಗತ್ಯದ ಕುರಿತು ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರ ಭೇಟಿಯನ್ನು ನಿರಾಕರಿಸುವ ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರವು ಒಂದು ಪ್ರಮುಖ ಸಂದೇಶವನ್ನು ರವಾನಿಸಿದೆ ಎಂದಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳು ವಿರೋಧ ಪಕ್ಷದ ರಾಜಕೀಯ ಹತಾಶೆಯನ್ನು ಹೊರಹಾಕುವ ವೇದಿಕೆಗಳಾಗಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರು ಸಾಂವಿಧಾನಿಕ ತತ್ವಗಳನ್ನು ತಮ್ಮ ರಾಜಕೀಯ ತಂತ್ರಗಳೊಂದಿಗೆ ಗೊಂದಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರೇ, ಕೇವಲ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡ ಮಾತ್ರಕ್ಕೆ ಅದರ ಜ್ಞಾನ ಲಭಿಸುವುದಿಲ್ಲ. ಒಮ್ಮೆಯಾದರೂ ಸಂವಿಧಾನವನ್ನು ಓದಲು ಸಮಯ ಮೀಸಲಿಡಿ! ಅದರಲ್ಲೂ ವಿಶೇಷವಾಗಿ 'ಅಧಿಕಾರ ವಿಭಜನೆಯ ತತ್ವ'ವನ್ನು ಗಮನಿಸಿ. ಸಂವಿಧಾನವು ಪ್ರದರ್ಶನಕ್ಕಿಡುವ ವಸ್ತುವಲ್ಲ, ಅದು ಪ್ರಜಾಪ್ರಭುತ್ವದ ಘನತೆಯ ಪ್ರತೀಕವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ(ಅ. 12) ಇಂಡಿಯಾ ಕೂಟವು, ಚಲೋ ದೆಹಲಿ - ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ' ಎಂಬ ಹೆಸರಿನಲ್ಲಿ ಸುಪ್ರೀಂಕೋರ್ಟ್ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ಮತ್ತು ಎಸ್ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನ ಸಿಜೆಐ ಸೂರ್ಯಕಾಂತ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲು ಉದ್ದೇಶಿಸಲಾಗಿದೆ.
ಜೊತೆಗೆ ಸಂಜೆ 4ರಿಂದ 5 ಗಂಟೆವರೆಗೆ ಭೇಟಿಗೆ ತಮಗೆ ಸಮಯ ನೀಡಬೇಕೆಂದು ಕಾಂಗ್ರೆಸ್ ನಾಯಕರು ಸಿಜೆಐ ಅವರಿಗೆ ಸಮಯಾವಕಾಶ ಕೇಳಿದ್ದರು. ಆದ್ರೆ ಸಿಜೆಐ, ಇದೇ ವಿಷಯಗಳು ನ್ಯಾಯಾಂಗ ಪರಿಶೀಲನೆಯ ಹಂತದಲ್ಲಿವೆ ಎಂಬ ಕಾರಣವನ್ನು ನೀಡಿ ಕಾಂಗ್ರೆಸ್ ನಾಯಕರ ಭೇಟಿಗೆ ನಿರಾಕರಿಸಿದ್ದಾರೆ. ಇನ್ನೂ ಈ ಕುರಿತು ಇನ್ನೊಂದು ಔಪಚಾರಿಕ ಪಿಐಎಲ್ ಸಲ್ಲಿಸುವಂತೆ ಸೂಚಿಸಿದ್ದಾರೆ (ಏಜೆನ್ಸೀಸ್).