

ನವದೆಹಲಿ: ಚುನಾವಣಾ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾಗಿರುವ ಇಂಡಿಯಾ ಒಕ್ಕೂಟದ ನಾಯಕರ ಭೇಟಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (CJI SuryaKant) ಅವರು ನಯವಾಗಿ ನಿರಾಕರಿಸಿದ್ದಾರೆ. ಸುಪ್ರೀಂ ಕೋರ್ಟ್ ಬಾಗಿಲು ಎಲ್ಲರಿಗೂ ಸದಾ ತೆರೆದಿರುತ್ತದೆ ಎಂದಿರುವ ಅವರು, ಈ ವಿಚಾರ ಈಗಾಗಲೇ ನ್ಯಾಯಾಲಯದ ವಿಚಾರಣಾ ಹಂತದಲ್ಲಿರುವುದರಿಂದ, ಕೇವಲ ಮನವಿ ಪತ್ರ ನೀಡುವ ಬದಲು ನೇರವಾಗಿ ಅಧಿಕೃತ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ವಿರೋಧ ಪಕ್ಷಗಳು, ಸೋಮವಾರ ಸುಪ್ರೀಂ ಕೋರ್ಟ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿವೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತ ಕಳ್ಳತನ ಕುರಿತು ಚರ್ಚಿಸಲು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರೊಂದಿಗೆ ಭೇಟಿಗೆ ಅವಕಾಶ ಕೋರಿದ್ದರು.
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು, ಸಂಜೆ 4 ರಿಂದ 5 ರ ನಡುವೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಲು ಸಮಯಾವಕಾಶ ಕೋರಿದ್ದರು. ಮತ ಕಳ್ಳತನಕ್ಕೆ ಅಂತ್ಯ ಹಾಡುವುದು, ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಿಲ್ಲಿಸುವುದು ಮತ್ತು ಮತ್ತೆ ಬ್ಯಾಲೆಟ್ ಪೇಪರ್ನ್ನು ಮರಳಿ ತರುವುದು ಈ ಮನವಿಯ ಮುಖ್ಯ ಬೇಡಿಕೆಗಳಾಗಿದ್ದವು ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) 33ನೇ ಸ್ಥಾಪನಾ ದಿನದ ಕಾರ್ಯಕ್ರಮದ ಬಳಿಕ ಈ ಭೇಟಿಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಭೇಟಿ ಕೋರಿ ನಿನ್ನೆ ನನಗೆ ಪತ್ರ ಬಂದಿತ್ತು. ನಾನು ಅದಕ್ಕೆ ನಿನ್ನೆ ರಾತ್ರಿಯೇ ಉತ್ತರಿಸಿದ್ದು, ಯಾವ ಕಾರಣಗಳಿಂದಾಗಿ ನನಗೆ ಭೇಟಿಯಾಗಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್‌ನ ಬಾಗಿಲುಗಳು ಎಲ್ಲರಿಗೂ ತೆರೆದಿವೆ. ಯಾವುದೇ ಸಾಮಾನ್ಯ ನಾಗರಿಕ ಅಥವಾ ಚುನಾಯಿತ ಸಂಸ್ಥೆಯ ಸದಸ್ಯರಿಂದ ಬರುವ ಅರ್ಜಿಯನ್ನು ನಾವು ಸ್ವಾಗತಿಸುತ್ತೇವೆ. ಪ್ರತಿಯೊಬ್ಬ ಭಾರತೀಯನಿಗೂ ನ್ಯಾಯಾಲಯವನ್ನು ಸಂಪರ್ಕಿಸುವ ಹಕ್ಕಿದೆ. ನಾವು ಅವರ ಆತಂಕಗಳನ್ನು ಆಲಿಸುತ್ತೇವೆ ಮತ್ತು ಕಾನೂನಿನ ಪ್ರಕಾರ ಸಿಗಬೇಕಾದ ನ್ಯಾಯವನ್ನು ಒದಗಿಸುತ್ತೇವೆ ಎಂದು ಅವರು ಹೇಳಿದರು. ವಿರೋಧ ಪಕ್ಷದ ನಾಯಕರಿಗೆ ಭೇಟಿ ನಿರಾಕರಿಸಲು ಸೂಕ್ತ ಕಾರಣಗಳನ್ನು ವಿವರಿಸಿ ಇಮೇಲ್ ಮೂಲಕ ವಿವರವಾದ ಉತ್ತರ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ನಿಯೋಗ ಎತ್ತಿರುವ ವಿಷಯಗಳನ್ನು ಕೇವಲ ಆಡಳಿತಾತ್ಮಕ ಮಾರ್ಗದ ಮೂಲಕ ಮನವಿ ಪತ್ರ ಸಲ್ಲಿಸುವುದಕ್ಕಿಂತ, ನ್ಯಾಯಾಲಯದ ಕಾನೂನು ಪ್ರಕ್ರಿಯೆ ಮೂಲಕವೇ ಪರಿಹರಿಸುವುದು ಹೆಚ್ಚು ಸೂಕ್ತ ಎಂಬ ಅಂಶವನ್ನು ಆ ಉತ್ತರದಲ್ಲಿ ಒತ್ತಿಹೇಳಲಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷವು ಸೋಮವಾರದ ಪ್ರತಿಭಟನೆಯನ್ನು ದೆಹಲಿ ಚಲೋ - ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ (Chalo Delhi - March for Democracy) ಎಂದು ಕರೆದಿದೆ. ಈ ಮೆರವಣಿಗೆಗಾಗಿ ನಾಯಕರು ಮಧ್ಯಾಹ್ನ 1:30 ರ ಸುಮಾರಿಗೆ ಕನ್ನಾಟ್ ಪ್ಲೇಸ್-ಬಾರಖಂಬಾ ರಸ್ತೆ ಜಂಕ್ಷನ್‌ನಲ್ಲಿ ಒಟ್ಟುಗೂಡಲಿದ್ದಾರೆ. ಈ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪಕ್ಷ, ಲಿಂಗ, ಜಾತಿ, ಸಮುದಾಯ ಮತ್ತು ರಾಜ್ಯಗಳ ಗಡಿಗಳನ್ನು ಮೀರಿ ಎಲ್ಲಾ ಭಾರತೀಯರು ಒಟ್ಟಾಗಿ ಸುಪ್ರೀಂ ಕೋರ್ಟ್ ಕಡೆಗೆ ಮೆರವಣಿಗೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಿನ್ನೆ ದೆಹಲಿಯಲ್ಲಿ ದೇಶದ ಯುವಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಂದಿದ್ದರು. ಅವರ ಹೃದಯದಲ್ಲಿ ದ್ವೇಷ ಅಥವಾ ಕೋಪವಿರಲಿಲ್ಲ, ಪ್ರೀತಿ ಇತ್ತು. ಆದರೆ ಅವರನ್ನು ಪೊಲೀಸರು ಹಾಗೂ ಬಿಜೆಪಿಯ ಗೂಂಡಾಗಳು ಥಳಿಸಿದ್ದಾರೆ. ನಮಗೆ ಬೇಕಿರುವ ಭಾರತ ಇದಲ್ಲ ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುಂಚೆ ಶುಕ್ರವಾರದಂದು, ವಿವಿಧ ವಿರೋಧ ಪಕ್ಷಗಳ ನಾಯಕರು ಸಂಸತ್ ಭವನದಿಂದ ವಿಜಯ್ ಚೌಕ್ ವರೆಗೆ ಮೆರವಣಿಗೆ ನಡೆಸಿ, ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ದೇಶಾದ್ಯಂತ ಗೊಂದಲದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಶನಿವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಿರುವುದು ಮತ್ತು ಜನರನ್ನು ವಶಕ್ಕೆ ಪಡೆದಿರುವುದು, ಯುವಕರ ಪ್ರತಿಭಟನೆಗೆ ಸರ್ಕಾರಕ್ಕಿರುವ ಭಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದರು(ಏಜೆನ್ಸೀಸ್).