ಲಖನೌ: ಉತ್ತರ ಪ್ರದೇಶದ ಹೊಸ ಕಾಂಗ್ರೆಸ್ ರಾಜ್ಯಾಧ್ಯಕ್ಷೆಯಾಗಿ ನೇಮಕಗೊಂಡಿರುವ ಆರಾಧನಾ ಮಿಶ್ರಾ ಹಾಗೂ ಕಾರ್ಯಕಾರಿ ಅಧ್ಯಕ್ಷ ಇಮ್ರಾನ್ ಮಸೂದ್ ಅವರ ಪದಗ್ರಹಣ ಸಮಾರಂಭದ ವೇಳೆ, ಲಖನೌದ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ (UP Congress Office) ಶೂಗಳ ತೂರಾಟ ನಡೆಸಲಾಗಿದೆ. ಇದಷ್ಟೆ ಅಲ್ಲದೇ ಕಾರ್ಯಕರ್ತರು ಪರಸ್ಪರ ಕೈಕೈಮಿಲಾಯಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ನಿರ್ಗಮಿತ ರಾಜ್ಯಾಧ್ಯಕ್ಷ ಅಜಯ್ ರೈ ಮತ್ತು ಕೌನ್ಸಿಲರ್ ಮಮತಾ ಚೌಧರಿ ಬೆಂಬಲಿಗರ ನಡುವೆ ಈ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಅವಧ್ ವಲಯ ಅಧ್ಯಕ್ಷೆ ಮಮತಾ ಚೌಧರಿ ಅವರು ಅಶ್ಲೀಲ ಭಾಷೆ ಬಳಸಿದ್ದಾರೆ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ಅಜಯ್ ರೈ ಬೆಂಬಲಿಗರು ಭಾರಿ ಗದ್ದಲ ಸೃಷ್ಟಿಸಿದರು. ವಿವಾದದ ಬಳಿಕ ರೈ ಅವರು ಪ್ರಮೋದ್ ತಿವಾರಿ ಹಾಗೂ ಇಮ್ರಾನ್ ಮಸೂದ್ ಅವರಿಗೆ ದೂರು ನೀಡಿ, ಮಮತಾರಂತ ವ್ಯಕ್ತಿಗಳಿದ್ದರೆ ಪಕ್ಷಕ್ಕೆ ಕೆಟ್ಟ ಹೆಸರು, ಆದ್ದರಿಂದ ಅವರನ್ನು ಉಚ್ಚಾಟಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗದ್ದಲದ ಕುರಿತು ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದ್ದು, ಘಟನೆಯ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ, ಹೊಸ ರಾಜ್ಯ ಅಧ್ಯಕ್ಷರು ಮಾಜಿ ಅಧ್ಯಕ್ಷ ಅಜಯ್ ರೈ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ.
ಆರಾಧನಾ ಮಿಶ್ರಾ ಅವರನ್ನು ಆರಾಧನಾ ಮಿಶ್ರಾ ಮೋನಾ ಎಂದೂ ಸಹ ಕರೆಯಲಾಗುತ್ತದೆ. ಪ್ರತಾಪಗಢ ಜಿಲ್ಲೆಯ ರಾಂಪುರ ಖಾಸ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಪುತ್ರಿಯಾಗಿದ್ದಾರೆ. ಪ್ರಮೋದ್ ತಿವಾರಿ ಅವರು ರಾಂಪುರ ಖಾಸ್ ಕ್ಷೇತ್ರವನ್ನು ಒಂಬತ್ತು ಬಾರಿ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರು. ಆರಾಧನಾ ಮಿಶ್ರಾ ಅವರ ಈ ನೇಮಕವು ಉತ್ತರ ಪ್ರದೇಶದಲ್ಲಿ ಪಕ್ಷದ ಸಾಮಾಜಿಕ ಮತ್ತು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ನೋಡಲಾಗುತ್ತಿದೆ.
ಪಕ್ಷದೊಳಗೆ ಬ್ರಾಹ್ಮಣ ಸಮುದಾಯದ ನಡುವೆ ತನ್ನ ಪ್ರಭಾವವನ್ನು ಬಲಪಡಿಸುವತ್ತ ಅನೇಕ ವರ್ಷಗಳಿಂದ ಗಮನ ಹರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ, ರಾಜ್ಯದ ಚುಕ್ಕಾಣಿಯನ್ನು ಬ್ರಾಹ್ಮಣ ನಾಯಕಿಗೆ ನೀಡಲಾಗಿದೆ. 2027ರ ಚುನಾವಣೆಗೆ ಮುಂಚಿತವಾಗಿ ಇದನ್ನು ಪಕ್ಷದ ನೆಲೆಯನ್ನು ವಿಸ್ತರಿಸುವ ತಂತ್ರದ ಒಂದು ಭಾಗವೆಂದು ಪರಿಗಣಿಸಲಾಗಿದೆ.
ಮುಂಬರುವ 2027ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ದೊಡ್ಡ ಸಂಘಟನಾತ್ಮಕ ಬದಲಾವಣೆಯನ್ನು ಮಾಡಿದೆ. ಹೊಸ ರಾಜ್ಯಾಧ್ಯಕ್ಷರು, ಕಾರ್ಯಕಾರಿ ಅಧ್ಯಕ್ಷರು ಮತ್ತು ಹಿರಿಯ ಉಪಾಧ್ಯಕ್ಷರ ನೇಮಕಾತಿಯೊಂದಿಗೆ ಈಗ ಸಂಪೂರ್ಣ ಜವಾಬ್ದಾರಿಯು ಹೊಸ ತಂಡದ ಮೇಲಿದೆ. ಮುಂಬರುವ ಚುನಾವಣೆಗಾಗಿ ಪಕ್ಷವು ಸಿದ್ಧತೆಗಳನ್ನು ನಡೆಸುತ್ತಿದ್ದು, ಇದರ ಭಾಗವಾಗಿ ಹೊಸ ನಾಯಕತ್ವವು ರಾಜ್ಯಾದ್ಯಂತ ಪಕ್ಷದ ಸಂಘಟನೆ ಮತ್ತು ಜನಸಂಪರ್ಕವನ್ನು ಬಲಪಡಿಸುವತ್ತ ಗಮನಹರಿಸಬೇಕಿದೆ(ಏಜೆನ್ಸೀಸ್).