ಉದ್ಯೋಗ ಸ್ಥಿರ ಕೆಲಸವು ಹಗುರ

work is easy
work is easy
Published on
(ಕೃತಕ ಬುದ್ಧಿಮತ್ತೆ ತಜ್ಞ ರವೀಂದ್ರ ವರ್ಣ ಅಭಿಮತ)
ಯಾವುದೇ ಹೊಸ ತಂತ್ರಜ್ಞಾನ ಬಂದಾಗ ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಬಳಕೆಗೆ ತಂದಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಅದೇ ರೀತಿ ಕೃತಕ ಬುದ್ಧಿಮತ್ತೆಯನ್ನು (ಎಐ) ನಮ್ಮ ದೈನಂದಿನ ಕೆಲಸಗಳಲ್ಲಿ ಬಳಸಿ, ಕೌಶಲ ಹೆಚ್ಚಿಸಿಕೊಂಡರೆ ಯಾರಿಗೂ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗದು ಎನ್ನುತ್ತಾರೆ ಎಐ ತಜ್ಞ, ಬ್ರ್ಯಾಂಡ್​ ​ಸ್ಕೇಪ್ಸ್​ ವರ್ಲ್ಡ್​ವೈಡ್​ ಕಂಪನಿಯ ಸಿಟಿಒ ಹಾಗೂ ಹಿರಿಯ ಉಪಾಧ್ಯಕ್ಷ ರವೀಂದ್ರ ವರ್ಣ.
ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಎಐ ಬಳಕೆಯಿಂದ ನಿಖರ ಹಾಗೂ ವೇಗವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ. ನಾಲ್ಕೈದು ಮಂದಿ ಮಾಡುವ ಕೆಲಸವನ್ನು ಸೀಮಿತ ಅವಧಿಯಲ್ಲಿ ಪೂರ್ಣಗೊಳಿಸಬಹುದು. ವಿವಿಧ ವಿಷಯಗಳಲ್ಲಿ ಒಳನೋಟದೊಂದಿಗೆ ಇನ್ನಷ್ಟು ಸ್ವರೂಪದಲ್ಲಿ ನಮ್ಮ ಚಿಂತನೆಗಳಿಗೆ ಇಂಬು ನೀಡುತ್ತದೆ ಎಂದರು. ಮುಖ್ಯವಾಗಿ ನಮ್ಮ ಶ್ರಮ ಹಾಗೂ ಸಮಯವನ್ನು ಎಐ ಉಳಿಸುತ್ತದೆ. ಇಂತಹ ತಂತ್ರಜ್ಞಾನದೊಂದಿಗೆ ಪ್ರಸ್ತುತ ಟೆಕ್ನಾಲಜಿ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ನವೀನ ಆವಿಷ್ಕಾರಗಳು ಮುನ್ನೆಲೆಗೆ ಬರುತ್ತಿವೆ. ಇದು ಮನುಷ್ಯನನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಸು ಉಳ್ಳ ವ್ಯಕ್ತಿಯನ್ನು ತಂತ್ರಜ್ಞಾನ ಇನ್ನಷ್ಟು ಮೇಲ್​ಸ್ತರಕ್ಕೆ ಕೊಂಡೊಯ್ಯುತ್ತದೆ. ಹೊಸ ಚಿಂತನೆ, ಹೊಸ ಹೊಳಹು ಹಾಗೂ ಅರಿವನ್ನು ಉದ್ದೀಪಿಸುವ ಎಐ ಚಿಮ್ಮುಹಲಗೆ ರೀತಿ ಪ್ರಯೋಜನಕ್ಕೆ ಬರಲಿದೆ. ಹಾಗಾಗಿ ಉದ್ಯೋಗ ಕಡಿತ, ಸ್ಥಾನಪಲ್ಲಟ ಆಗಬಹುದೆಂಬ ನಕಾರಾತ್ಮಕ ಚಿಂತನೆಯನ್ನು ಬದಿಗಿಟ್ಟು ಸಕಾರಾತ್ಮಕ ಹೆಜ್ಜೆ ಇರಿಸಿದಲ್ಲಿ ಕೃತಕ ಬುದ್ಧಿಮತ್ತೆ ಉದ್ಯೋಗಾವಕಾಶಗಳ ಆಗರವಾಗಲಿದೆ.
ಎಐ ನಮಗೆ "ಕೋ ಪೈಲಟ್​' ರೀತಿ ಸಹಚರನಾಗಿ ಆಪ್ತವಾಗಿ ಸಹಕರಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಪ್ರತ್ಯೇಕ ನೀತಿ ಅಗತ್ಯ

ಕೃತಕ ಬುದ್ಧಿಮತ್ತೆಯನ್ನು ಒಳ್ಳೆಯ ಉದ್ದೇಶ ಹಾಗೂ ಅನ್ವೇಷಣೆಗೆ ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ರ್ನಿದಿಷ್ಟ ಚೌಕಟ್ಟು ಹಾಕಬೇಕಿದೆ. ಎಐಗೂ ಪ್ರತ್ಯೇಕ ನೀತಿ ತರಬೇಕಿದೆ. ಈ ಕ್ಷೇತ್ರದ ಲಾಭ&ನಷ್ಟ, ಸಾಧಕ&ಬಾಧಕ, ಉಪಯೋಗ, ಹೂಡಿಕೆ, ಮಾರುಕಟ್ಟೆ, ತರಬೇತಿ, ಸಂಶೋಧನೆ ಇತ್ಯಾದಿ ಅಂಶಗಳನ್ನು ಗಮನದಲ್ಲಿರಿಸಿ ಸ್ಪಷ್ಟ ನೀತಿ ತಂದರೆ ಜಾಗತಿಕವಾಗಿ ಪೈಪೋಟಿ ನೀಡಲು ಸಾಧ್ಯವಿದೆ. ಈಗಾಗಲೇ ಭಾರತವು ಐಟಿ ವಲಯದಲ್ಲಿ ವಿಶ್ವದ ಗಮನ ಸೆಳೆದಿರುವುದರಿಂದ ಎಐ ಕ್ಷೇತ್ರದಲ್ಲೂ ಹೆಸರು ಮಾಡಬಹುದು.

ಎಲ್ಲ ಕ್ಷೇತ್ರಗಳಿಗೂ ಎಐ ಸಹಕಾರಿ

ಸದ್ಯ ಮನುಷ್ಯನಿಗೆ ತ್ವರಿತವಾಗಿ ಸೇವೆ, ಸೌಲಭ್ಯ ಸಿಗಬೇಕು ಎಂಬ ತುಡಿತ ಇದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭವಾಗಬೇಕು ಎಂಬ ಇಂಗಿತವೂ ಇದೆ. ಇಂತಹ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲು ತಂತ್ರಜ್ಞಾನದ ಮೊರೆ ಹೋಗಲೇಬೇಕು. ಇದಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ಅಪ್ಪಿದರೆ ತಪ್ಪಲ್ಲ. ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಎಲ್ಲ ಕ್ಷೇತ್ರಗಳಲ್ಲೂ ಎಐ ಬಳಸಿಕೊಳ್ಳಬಹುದಾಗಿದೆ. ಎಐನಿಂದ ಅಗಾಧ ಬದಲಾವಣೆ ತರಬಹುದಾಗಿದೆ. ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್​, ನ್ಯಾಯಾಂಗ ಸೇರಿ ಕೆಲ ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮುಖ್ಯವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ (ಆರ್​ ಆ್ಯಂಡ್​ ಡಿ) ಕ್ಷೇತ್ರದಲ್ಲಿ ನಿಖರ, ತ್ವರಿತ ಫಲಿತಾಂಶ ಕಾಣಲು ಸಾಧ್ಯವಾಗುತ್ತದೆ.

ಫೇಕ್​ ಮಾಹಿತಿಗೆ ಕಡಿವಾಣ ಅಗತ್ಯ

ಇತ್ತೀಚೆಗೆ ಎಐ ಟೂಲ್​ ಬಳಸಿ ಗಣ್ಯರ ಚಿತ್ರಗಳ ಡೀಪ್​ ಫೇಕ್​ ಸೃಷ್ಟಿಸುತ್ತಿರುವುದು ಆತಂಕಕ್ಕೆ ಈಡುಮಾಡಿದೆ. ಕೆಲವೊಮ್ಮೆ ತಪ್ಪು ಮಾಹಿತಿಗಳನ್ನೇ ಸರಿ ಎಂದು ಭಾವಿಸಿ ಬಳಸುವ ಸಾಧ್ಯತೆ ಉಂಟು. ಅಪರಾಧಿಗಳು, ಸಮಾಜಘಾತುಕರು ಎಐ ದುರ್ಲಾಭ ಪಡೆಯುವ ಸಾಧ್ಯತೆಯೂ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಶಿಕ್ಷೆ ವಿಧಿಸುವ ಕಾಯ್ದೆ ರೂಪಿಸಬೇಕಿದೆ. ಜತೆಗೆ ಮಾಹಿತಿ/ಚಿತ್ರಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕಿದೆ. ಸ್ವಯಂ ನಿರ್ಣಯ ಕೈಗೊಳ್ಳುವ ಎಐ ಟೂಲ್​ಗಳು ಆವಿಷ್ಕಾರದ ಹಂತದಲ್ಲಿವೆ. ಸೂಕ್ಷ್ಮ ವಿಷಯಗಳನ್ನು ಪಡೆಯಲು ಯತ್ನಿಸಿದರೆ ಮಾಹಿತಿ/ದತ್ತಾಂಶ ನಿರಾಕರಿಸುವ ಸುರಕ್ಷತಾ ಟೂಲ್​ ಬರಲಿದೆ. ಜನರು ಕೂಡ ಬೇಡದ ಟೂಲ್​ಗಳನ್ನು ಬಳಸದಂತೆ ರ್ನಿಬಂಧ ವಿಧಿಸಿಕೊಳ್ಳಬೇಕಿದೆ.

ಔಷಧ ಕ್ಷೇತ್ರದಲ್ಲಿ ಎಐ ಕ್ರಾಂತಿಕಾರಕ

ಆರೋಗ್ಯ ಕ್ಷೇತ್ರದಲ್ಲಿ ಕ್ಯಾನ್ಸರ್​ ಸೇರಿ ಮುಂಬರುವ ಅಪಾಯಕಾರಿ ಕಾಯಿಲೆಗಳನ್ನು ನಿವಾರಿಸಲು ಔಷಧಗಳು ರಾಮಬಾಣ ಆಗಿ ಕಾರ್ಯಾಚರಿಸಲಿವೆ. ಇವುಗಳನ್ನು ಸಂಶೋಧಿಸಿ ಜನಬಳಕೆಗೆ ತರಲು ಹೆಚ್ಚಿನ ಸಮಯ ಹಿಡಿಯಲಿದೆ. ಎಐ ಬಳಸುವುದರಿಂದ ಹಿಂದಿನ ಆರ್​ ಆ್ಯಂಡ್​ ಡಿ ಮಾಹಿತಿ ವಿಶ್ಲೇಷಣೆ, ಆಕರ ಕೋಶ ಸಹಿತ ಇನ್ನಿತರ ದತ್ತಾಂಶ ಪರಿಶೀಲಿಸಿ ತ್ವರಿತವಾಗಿ ಹೊಸ ಔಷಧ, ಲಸಿಕೆ ತಯಾರಿಸಲು ಫಾರ್ಮಾ ಕಂಪನಿಗಳು ಮುಂದಾಗಿವೆ. ಜತೆಗೆ ರೋಗಿಗಳ ಕಾಯಿಲೆಯ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡಲು ಇನ್ನಷ್ಟು ಸುಲಭವಾಗಲಿದೆ.

ಪ್ರೌಢಶಾಲೆ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕಲಿಕೆ ಸೂಕ್ತ

ಭವಿಷ್ಯದಲ್ಲಿ ಎಐ ಬಳಕೆ ಶಿಕ್ಷಣ ವಲಯದಲ್ಲೂ ಜಾಗ ಪಡೆಯಲಿದೆ. ಹಾಗಂತ ಪ್ರಾಥಮಿಕ ಹಂತದಿಂದಲೇ ಎಐ ಬೋಧಿಸಿದರೆ ಮಕ್ಕಳ ಸ್ವಾಭಾವಿಕ ಕಲಿಕೆಗೆ ಅಡ್ಡಿಯಾಗುತ್ತದೆ. ಸ್ವಯಂ ಕಲಿಕೆಯಲ್ಲಿ ಹಿನ್ನಡೆ, ಒಂಟಿತನ, ಮೌನಿಗಳಾಗುವ ಅಪಾಯ ಇದೆ. ಹಾಗಾಗಿ ಪ್ರೌಢಶಾಲೆ ಮೇಲ್ಪಟ್ಟ, ಉನ್ನತ ಶಿಕ್ಷಣದವರೆಗಿನ ವಿದ್ಯಾರ್ಥಿಗಳಿಗೆ ಎಐ ಕಲಿಸಿ ಬೌದ್ಧಿಕ ಮಟ್ಟ ಹೆಚ್ಚಿಸಬಹುದು. ಜತೆಗೆ ವೃತ್ತಿಪರರಿಗೆ ಎಐ ಅವಶ್ಯಕತೆ ಜಾಸ್ತಿ ಇದೆ.

ತ್ವರಿತ ನ್ಯಾಯದಾನಕ್ಕೂ ಸಹಕಾರಿ

ದೇಶದಲ್ಲಿ ನ್ಯಾಯದಾನ ವಿಳಂಬ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ನ್ಯಾಯಾಲಯಗಳು ತಮ್ಮ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣಗಳ ಹಿನ್ನೆಲೆ, ಹಳೆಯ ತೀರ್ಪುಗಳ ವಿಶ್ಲೇಷಣೆ, ಮಾಹಿತಿ ಹೆಕ್ಕಿ ಈಗಿನ ಸ್ಥಿತಿಯನ್ನು ಆಧರಿಸಿ ನ್ಯಾಯದಾನ ನೀಡಬೇಕಾಗುತ್ತದೆ. ಇದಕ್ಕೆ ಮಾನವ ಸಂಪನ್ಮೂಲದ ಸೀಮಿತ ಬಳಕೆ ಇದೆ. ಈ ಜಾಗದಲ್ಲಿ ಎಐ ಬಳಸಿಕೊಂಡಲ್ಲಿ ಒಂದೇ ದಿನದಲ್ಲಿ ನೂರಾರು ಪುಟಗಳ ತೀರ್ಪಿನ ಸಾರಾಂಶವನ್ನು ಕ್ರೋಡಿಕರಿಸಲು ಸಾಧ್ಯ. ಜನಸಾಮಾನ್ಯ ಕೂಡ ಎಐ ಟೂಲ್​ ಬಳಸಿ ಕೋರ್ಟ್​ಗೆ ಅರ್ಜಿ ಸಲ್ಲಿಸುವ ನಮೂನೆಯನ್ನು ಸ್ವಯಂ ಸಿದ್ಧಪಡಿಸಿಕೊಳ್ಳಲು ಅವಕಾಶ ಇದೆ. ಈ ವಿಧಾನ ಜಾರಿಗೆ ಬಂದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡಿಗ

ರವೀಂದ್ರ ವರ್ಣ ಅವರು ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟೇಶ್ವರದವರು. ಬೆಂಗಳೂರಿನ ಯುವಿಸಿಇನಲ್ಲಿ ಎಲೆಕ್ಟ್ರಿಕಲ್​ ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್​ ಪೂರ್ಣಗೊಳಿಸಿ, ಎಐ ವಿಷಯದಲ್ಲಿ ಪರಿಣತಿ ಸಾಧಿಸಿದ್ದಾರೆ. ಡಿಜಿಟಲ್​ ಎಂಜಿನಿಯರಿಂಗ್​ ಮತ್ತು ಎಐ&ಚಾಲಿತ ಎಂಟರ್​ಪೆಸ್​ ಪ್ಲಾಟ್​ಫಾಮ್​ರ್ಗಳನ್ನು ನಿರ್ಮಿಸುವಲ್ಲಿ ಎರಡು ದಶಕಗಳ ಅನುಭವ ಹೊಂದಿದ್ದಾರೆ. ಅಮೆರಿಕ, ಬ್ರಿಟನ್​, ಐರ್ಲೆಂಡ್​, ಹಾಂಗ್​ಕಾಂಗ್​, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ ಮಾರುಕಟ್ಟೆಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತೀಜಿವನದಲ್ಲಿ ಅವರು ಡೆಲ್​, ಅಡೋಬ್​, ವಿಪ್ರೋ ಟೆಕ್ನಾಲಜೀಸ್​ನಂತಹ ಜಾಗತಿಕ ಮಟ್ಟದ ಸಂಸ್ಥೆಗಳಲ್ಲಿ ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಬ್ರಾಂಡ್​ಸ್ಕೇಪ್ಸ್​ ವರ್ಲ್ಡ್​ವೈಡ್​ನ ಹಿರಿಯ ಉಪಾಧ್ಯಕ್ಷರಾಗಿದ್ದಾರೆ.

ಭಾರತಕ್ಕೆ ಆತಂಕಕ್ಕಿಂತ ಅವಕಾಶ ಹೆಚ್ಚು

ಮುಂದುವರಿದ ದೇಶಗಳೊಂದಿಗೆ ಪೈಪೋಟಿ ನೀಡುತ್ತಿರುವ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. ಜಾಗತಿಕ ದೈತ್ಯ ಕಂಪನಿಗಳಿಗೆ ಪ್ರತಿಸ್ಪರ್ಧೆ ನೀಡುವ ಕಲೆಯನ್ನೂ ಕರಗತ ಮಾಡಿಕೊಳ್ಳುತ್ತಿದೆ. ಇದನ್ನು ಎನ್​ಕ್ಯಾಷ್​ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕೃತಕ ಬುದ್ಧಿಮತ್ತೆಯತ್ತ ದೃಷ್ಟಿ ಹರಿಸಿದೆ. ಡಿಜಿಟಲ್​ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿಂದಾಗಿ ಎಐ ವಲಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಅವಕಾಶ ಇದೆ. ಇದನ್ನಾಧರಿಸಿ ಕೇಂದ್ರವು "ಇಂಡಿಯಾ ಎಐ ಮಿಷನ್​' ಪ್ರಾಜೆಕ್ಟ್​ಗೆ 10 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ವಾಗ್ದಾನ ಮಾಡಿದೆ. ದೇಶಾದ್ಯಂತ ಹರಡಿರುವ ಐಟಿ ಪರಿಣಿತರು, ನುರಿತ ತಂತ್ರಜ್ಞರು, ದೇಸಿ ಕಂಪನಿಗಳ ಸಹಕಾರದಲ್ಲಿ ಈ ಕೆಲಸ ಆಗಬಬೇಕಿದೆ. ವಿಕಸಿತ ಭಾರತ ಹಾಗೂ ಭವಿಷ್ಯದಲ್ಲಿ ಯುವಜನರನ್ನು ತಂತ್ರಜ್ಞಾನದಲ್ಲಿ ಪರಿಣಿತರನ್ನಾಗಿಸಲು ಈ ಯೋಜನೆಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಇಂಜಿನಿಯರಿಂಗ್​ ಕ್ಷೇತ್ರವೊಂದರಿಂದಲೇ ಹೊಸ ಹೊಸ ಶಾಖೆಗಳ ಮೂಲಕ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಔದ್ಯೋಗಿಕ ರಂಗದಲ್ಲೂ ಸಾಕಷ್ಟು ಬದಲಾವಣೆ ಕಾಣಲು ಎಐ ಮೊರೆ ಹೋಗಬೇಕಿದೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ, ಜನರ ಅವಶ್ಯಕತೆ ವಿಸ್ತರಿಸುತ್ತಿರುವುದರಿಂದ ಹೊಸ ಉದ್ಯೋಗ ಸೃಷ್ಟಿಯಾಗಲಿವೆ. ಇವುಗಳನ್ನು ಬಾಚಿಕೊಳ್ಳಲು ಯುವಜನರನ್ನು ಎಐ ಸಾಕ್ಷರರನ್ನಾಗಿ ಸಜ್ಜುಗೊಳಿಸಬೇಕಿದೆ. ಕಂಪನಿಗಳು ಭವಿಷ್ಯದಲ್ಲಿ ಎಐ ತಿಳಿದಿವರಿಗೆ ಉದ್ಯೋಗ ನೀಡುವುದು ದಿಟ.
ಕೈಬರಹದ ದಾಖಲೆ ಲಭ್ಯವಿದ್ದ ಜಮಾನದಲ್ಲಿ ಕಂಪ್ಯೂಟರ್​/ಇಂಟರ್​ನೆಟ್​ ಬಂತು. ನಂತರ ಲ್ಯಾಪ್​ಟಾಪ್​, ಸ್ಮಾರ್ಟ್​ ಪೋನ್​ ಮೂಲಕ ಡಿಜಿಟಲ್​ ಸೌಲಭ್ಯವನ್ನೂ ಪಡೆದಿದ್ದೇವೆ. ಈಗ ಎಐ ಹೊಸ ಆವಿಷ್ಕಾರ ರೂಪದಲ್ಲಿ ಬಂದಿದ್ದು, ಜನರ ಕೆಲಸವನ್ನು ಹಗುರ ಮಾಡಲಿದೆ. ಹೊಸ ಟೂಲ್​ಗಳು ಉದ್ಯೋಗ ಕಸಿಯುತ್ತವೆ ಎಂಬ ತಪ್ಪುಪರಿಕಲ್ಪನೆ ಹೋಗಲಾಡಿಸಿದರೆ ಎಐ ಆಪ್ತವಾಗಲಿದೆ. ಐಟಿ ಕ್ಷೇತ್ರದಲ್ಲಿ ಮುಂದಿರುವ ಭಾರತ, ಎಐನಲ್ಲೂ ಜಾಗತಿಕ ದೈತ್ಯನಾಗುವ ಎಲ್ಲ ಅವಕಾಶಗಳು ಇವೆ.

| ರವೀಂದ್ರ ವರ್ಣ ಎಐ ತಜ್ಞ, ಬ್ರ್ಯಾಂಡ್ ​ಸ್ಕೇಪ್ಸ್​ ವರ್ಲ್ಡ್​ವೈಡ್​ ಸಿಟಿಒ, ಹಿರಿಯ ಉಪಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net