ಜಾರ್ಖಂಡ್ ಕ್ರಾಸ್ ವೋಟಿಂಗ್ ಬೆನ್ನಲ್ಲೇ ಕಾಂಗ್ರೆಸ್-ಆರ್‌ಜೆಡಿ ಬಹಿರಂಗ ಯುದ್ಧ!..ಯಾರು, ಯಾರಿಗೆ ಏನೆಂದರು..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ | Jharkhand Rajya Sabha

Jharkhand Rajya Sabha | ಕಾಂಗ್ರೆಸ್-ಆರ್‌ಜೆಡಿ ಬಹಿರಂಗ ಯುದ್ಧ!.
Jharkhand Rajya Sabha | ಕಾಂಗ್ರೆಸ್-ಆರ್‌ಜೆಡಿ ಬಹಿರಂಗ ಯುದ್ಧ!.
Published on
Jharkhand Rajya Sabha: ಜಾರ್ಖಂಡ್ ರಾಜ್ಯಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಇಂಡಿಯಾ (I.N.D.I.A) ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವಿನ ಆಂತರಿಕ ಕಲಹ ಬೀದಿಗೆ ಬಂದಿದೆ. ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾಣಿ ಗೆಲುವಿಗೆ ಕಾರಣವಾದ ಅಡ್ಡ ಮತದಾನ, ಈಗ ಮೈತ್ರಿಕೂಟದಲ್ಲಿ ಬಿರುಗಾಳಿ ಎಬ್ಬಿಸಿದೆ. ಜಂಟಿ ಅಭ್ಯರ್ಥಿ ಪ್ರಣವ್ ಝಾ ಅಚ್ಚರಿಯ ಸೋಲಿನ ನಂತರ, ಕಾಂಗ್ರೆಸ್ ತನ್ನದೇ ಮಿತ್ರಪಕ್ಷಗಳ ವಿರುದ್ಧ ವಿಶ್ವಾಸದ್ರೋಹದ ಗಂಭೀರ ಆರೋಪ ಮಾಡಿದೆ.

ಮಿತ್ರಪಕ್ಷಗಳಿಂದಲೇ ದ್ರೋಹವಾಯ್ತು ಎಂದ ಕೈ ನಾಯಕರು

ಫಲಿತಾಂಶದ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಜಾರ್ಖಂಡ್ ಕಾಂಗ್ರೆಸ್ ನಾಯಕ ರಾಜೇಶ್ ಠಾಕೂರ್, ತಮಗೆ ಕನಿಷ್ಠ 26 ಮತಗಳು ಬೀಳುವ ನಿರೀಕ್ಷೆಯಿತ್ತು ಆದರೆ ಬಂದಿದ್ದು ಕೇವಲ 21 ಮತಗಳು ಮಾತ್ರ ಎಂದು ಹೇಳಿದ್ದಾರೆ. ನಮ್ಮ ಮೈತ್ರಿಕೂಟದ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ನ 16, ಜೆಎಂಎಂನ 4, ಆರ್‌ಜೆಡಿಯ 4 ಮತ್ತು ಸಿಪಿಐ(ಎಂಎಲ್)ನ 2 ಮತಗಳು ನಮಗೆ ಸಿಗಬೇಕಿತ್ತು. ಆದರೆ ನಮಗೆ ಆರ್‌ಜೆಡಿ ಮತ್ತು ಎಡಪಕ್ಷಗಳ ಮತಗಳು ಬಂದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ನಂಬಿದ ಜಾಗದಲ್ಲೇ ನಮಗೆ ದೊಡ್ಡ ವಿಶ್ವಾಸದ್ರೋಹವಾಗಿದೆ. ಈ ಬಗ್ಗೆ ಮೈತ್ರಿಕೂಟದ ಪ್ರತಿಯೊಬ್ಬರೂ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಠಾಕೂರ್ ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಂದೆಡೆ, ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಕೆ. ರಾಜು ಅವರು ಆರ್‌ಜೆಡಿ ಮತ್ತು ಎಡಪಕ್ಷಗಳ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, ಈ ಪಕ್ಷಗಳ ಶಾಸಕರು ಹಣದ ಆಮಿಷಕ್ಕೆ ಒಳಗಾಗಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ನ ಎಲ್ಲಾ 16 ಶಾಸಕರು ಪಕ್ಷದ ಅಭ್ಯರ್ಥಿಗೇ ನಿಷ್ಠರಾಗಿ ಮತ ಚಲಾಯಿಸಿದ್ದು, ಮಿತ್ರಪಕ್ಷಗಳ ಕ್ರಾಸ್ ವೋಟಿಂಗ್‌ನಿಂದಾಗಿಯೇ ಪ್ರಣವ್ ಝಾ ಸೋಲುವಂತಾಯಿತು ಎಂದಿದ್ದಾರೆ.

ಕಾಂಗ್ರೆಸ್‌ಗೆ ಆರ್‌ಜೆಡಿ ತಿರುಗೇಟು!..

ಕಾಂಗ್ರೆಸ್ ಮಾಡುತ್ತಿರುವ ಎಲ್ಲಾ ಆರೋಪಗಳನ್ನು ರಾಷ್ಟ್ರೀಯ ಜನತಾ ದಳ (RJD) ಸಂಪೂರ್ಣವಾಗಿ ತಳ್ಳಿಹಾಕಿದೆ. ತನ್ನದೇ ಶಾಸಕರನ್ನು ಒಟ್ಟಾಗಿ ಇಟ್ಟುಕೊಳ್ಳಲು ವಿಫಲವಾಗಿರುವ ಕಾಂಗ್ರೆಸ್, ಈಗ ಸೋಲಿನ ಹತಾಶೆಯಿಂದ ನಮ್ಮ ಮೇಲೆ ಗೂಬೆ ಕೂರಿಸುತ್ತಿದೆ ಎಂದು ತಿರುಗೇಟು ನೀಡಿದೆ. ಮೈತ್ರಿ ಪಕ್ಷಗಳ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುವ ಮೊದಲು ಕಾಂಗ್ರೆಸ್ ತನ್ನೊಳಗಿನ ಬಿರುಕನ್ನು ಸರಿಪಡಿಸಿಕೊಳ್ಳಲಿ ಎಂದು ಸಲಹೆ ನೀಡಿದೆ.
ಇದೇ ವೇಳೆ ಹಳೆಯ ಇತಿಹಾಸ ಕೆದಕಿರುವ ಆರ್‌ಜೆಡಿ, ಕಳೆದ ಮಾರ್ಚ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಲವು ಶಾಸಕರೇ ಬಹಿರಂಗವಾಗಿ ಬಿಜೆಪಿಗೆ ಮತ ಹಾಕಿದ್ದರು ಅಥವಾ ಗೈರುಹಾಜರಾಗಿದ್ದರು. ಅಂತಹ ಶಾಸಕರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಇದುವರೆಗೆ ಏನು ಕ್ರಮ ಕೈಗೊಂಡಿದೆ..? ಅಂತಹ ಬಂಡಾಯ ನಾಯಕರು ಇಂದಿಗೂ ಕೈ ನಾಯಕರ ಪಕ್ಕದಲ್ಲೇ ಓಡಾಡಿಕೊಂಡಿದ್ದಾರೆ ಎಂದು ನೆನಪಿಸುವ ಮೂಲಕ ಕಾಂಗ್ರೆಸ್ ನಾಯಕತ್ವವನ್ನು ಆರ್‌ಜೆಡಿ ತರಾಟೆಗೆ ತೆಗೆದುಕೊಂಡಿದೆ.

ನಾಲ್ಕನೇ ಬಾರಿಗೆ ರಾಜ್ಯಸಭೆಗೆ: ನತ್ವಾಣಿ ಐತಿಹಾಸಿಕ ಸಾಧನೆ

ಈ ಐತಿಹಾಸಿಕ ಗೆಲುವಿನೊಂದಿಗೆ ಪರಿಮಳ್ ನತ್ವಾಣಿ ನಾಲ್ಕನೇ ಅವಧಿಗೆ ರಾಜ್ಯಸಭೆಯನ್ನು ಪ್ರತಿನಿಧಿಸುವ ಅಪರೂಪದ ದಾಖಲೆ ಬರೆದಿದ್ದಾರೆ. ದೇಶದ ಸಂಸದೀಯ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಕಾಲ ಪಕ್ಷೇತರ ಸದಸ್ಯರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಈ ಹಿಂದೆ 2008 ರಿಂದ 2020 ರವರೆಗೆ ಜಾರ್ಖಂಡ್‌ನಿಂದಲೇ ಸತತ ಎರಡು ಬಾರಿ ಪಕ್ಷೇತರ ಸಂಸದರಾಗಿದ್ದ ಇವರು, ಆನಂತರ ಆಂಧ್ರಪ್ರದೇಶದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದರು. ಇದೀಗ ಮತ್ತೆ ತಾವು ಕರ್ಮಭೂಮಿ ಎಂದು ಕರೆಯುವ ಜಾರ್ಖಂಡ್‌ಗೆ ಮರಳಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net