ಅನುಕೂಲಕರ ಸಂಖ್ಯಾಬಲ ಹೊಂದಿದ್ದರೂ ಅದನ್ನು ರಾಜಕೀಯ ಗೆಲುವಾಗಿ ಪರಿವರ್ತಿಸಲು ವಿರೋಧ ಪಕ್ಷಗಳ ಒಕ್ಕೂಟ ಮತ್ತೊಮ್ಮೆ ವಿಫಲವಾಗಿದೆ ಎಂದು ಪೂನಾವಾಲಾ ಲೇವಡಿ ಮಾಡಿದ್ದಾರೆ. ಆಂತರಿಕ ಕಲಹದ ಕಾರಣದಿಂದಾಗಿಯೇ ಇಂಡಿಯಾ ಒಕ್ಕೂಟವು ಗೆಲ್ಲುವ ಪಂದ್ಯವನ್ನು ಕೈಚೆಲ್ಲಿ ಧೂಳೀಪಟವಾಗಿದೆ, ಎರಡೂ ಸ್ಥಾನಗಳನ್ನು ಸುಲಭವಾಗಿ ಗೆಲ್ಲುವಷ್ಟು ಸಂಖ್ಯೆ ಇದ್ದರೂ, ಕಾಂಗ್ರೆಸ್ ತನ್ನ ಮಿತ್ರಪಕ್ಷಗಳ ಬೆಂಬಲವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಮೈತ್ರಿಕೂಟದ ನಾಯಕರಲ್ಲಿದ್ದ ಅಸಮಾಧಾನವೇ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಜಾರ್ಖಂಡ್ನ ಎರಡೂ ಸ್ಥಾನಗಳು ಇಂಡಿಯಾ ಒಕ್ಕೂಟಕ್ಕೆ ಸಿಗಬೇಕಿತ್ತು. ಜೆಎಂಎಂ ತನ್ನ ಸ್ಥಾನವನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಮಾತ್ರ ಸೋತಿದೆ. ಏಕೆಂದರೆ ಜೆಎಂಎಂ, ಆರ್ಜೆಡಿ ಮತ್ತು ಎಡಪಕ್ಷಗಳು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವೇ ಬಂಡಾಯವೆದ್ದಿವೆ ಎಂದು ಪೂನಾವಾಲಾ ಆರೋಪಿಸಿದ್ದಾರೆ.