ಜಾರ್ಖಂಡ್‌ ವಿದ್ಯಾರ್ಥಿಗಳ ಜೊತೆ 6ನೇ ಹಂತದ ಮಾತುಕತೆ ಶುರು!...ಮಕ್ಕಳ ಭವಿಷ್ಯವೇ ನಮಗೆ ಮುಖ್ಯ ಎಂದ ಖರ್ಗೆ | Jharkhand Protest

Jharkhand Protest | ಜಾರ್ಖಂಡ್‌ ವಿದ್ಯಾರ್ಥಿಗಳ ಜೊತೆ 6ನೇ ಹಂತದ ಮಾತುಕತೆ ಶುರು!
Jharkhand Protest | ಜಾರ್ಖಂಡ್‌ ವಿದ್ಯಾರ್ಥಿಗಳ ಜೊತೆ 6ನೇ ಹಂತದ ಮಾತುಕತೆ ಶುರು!
Published on

ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಸ್ತುತ ಸರ್ಕಾರದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ನಾಯಕರ ನಡುವೆ ಆರನೇ ಹಂತದ ಮಾತುಕತೆ ರಾಂಚಿಯ ಸರ್ಕಾರಿ ಅತಿಥಿಗೃಹದಲ್ಲಿ ನಡೆಯುತ್ತಿದೆ. ಈ ಚರ್ಚೆಯಲ್ಲಿ ಎಡಪಂಥೀಯ ಬೆಂಬಲಿತ ಐಸಾ (AISA) ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದಾರೆ.

ಪರೀಕ್ಷಾ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.  ಕಳೆದ ಎರಡು ವಾರಗಳಿಂದ ತೀವ್ರಸ್ವರೂಪ ಪಡೆದುಕೊಂಡಿರುವ ಈ ಪ್ರತಿಭಟನೆಯನ್ನು ಶಮನಗೊಳಿಸಲು ಈಗಾಗಲೇ ನಡೆದ ಐದು ಹಂತದ ಚರ್ಚೆಗಳು ಯಾವುದೇ ಫಲ ನೀಡಿಲ್ಲ. ಆದಾಗ್ಯೂ, ವಿದ್ಯಾರ್ಥಿಗಳ ಕಳಕಳಿ ಹಾಗೂ ಬೇಡಿಕೆಗಳು ಸಮಂಜಸವಾಗಿವೆ ಎಂದು ಜಾರ್ಖಂಡ್ ಸರ್ಕಾರದ ಸಚಿವರೊಬ್ಬರು ಒಪ್ಪಿಕೊಂಡಿದ್ದಾರೆ. 
ವಿದ್ಯಾರ್ಥಿಗಳ ಬೇಡಿಕೆಗಳು ಹಾಗೂ ಅವರೊಂದಿಗೆ ನಡೆದ ಚರ್ಚೆಯ ಮುಖ್ಯಾಂಶಗಳನ್ನು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಗಮನಕ್ಕೆ ತರಲಾಗಿದೆ ಎಂದು ರಾಜ್ಯ ಸಚಿವೆ ದೀಪಿಕಾ ಪಾಂಡೆ ಸಿಂಗ್ ತಿಳಿಸಿದ್ದಾರೆ. ನಿನ್ನೆ ಮುಖ್ಯಮಂತ್ರಿ ಸೊರೇನ್ ಅವರೊಂದಿಗೆ ನಡೆದ ಸಭೆಯ ವೇಳೆ, ವಿದ್ಯಾರ್ಥಿಗಳೊಂದಿಗೆ ಮತ್ತಷ್ಟು ಹಂತದ ಚರ್ಚೆಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಇನ್ನೊಬ್ಬ ಸಚಿವ ಸಂಜಯ್ ಪ್ರಸಾದ್ ಯಾದವ್ ಹೇಳಿದ್ದಾರೆ.
ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಧರಣಿ ಸತ್ಯಾಗ್ರಹ ಇಂದು 16ನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 2 ರಂದು ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ನಡೆಸಿದ್ದ 14ನೇ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿದೆ. ಇದರೊಂದಿಗೆ, ಈ ಪರೀಕ್ಷಾ ಅಕ್ರಮಗಳ ಕುರಿತು ಸಿಬಿಐ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸಬೇಕೆಂದು ಅವರು ಪಟ್ಟು ಹಿಡಿದಿದ್ದಾರೆ.

ವಿದ್ಯಾರ್ಥಿಗಳ ಪರ ನಿಂತ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದು, ವಿದ್ಯಾರ್ಥಿಗಳು ಎಲ್ಲೇ ಸಮಸ್ಯೆ ಎದುರಿಸಿದರೂ ತಾವು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.  ನಮ್ಮ ಪಕ್ಷದ ಅಥವಾ ಮೈತ್ರಿಕೂಟದ ಮುಖ್ಯಮಂತ್ರಿ ಆಡಳಿತ ನಡೆಸುತ್ತಿರುವ ರಾಜ್ಯವೇ ಆಗಿದ್ದರೂ, ವ್ಯವಸ್ಥೆಯನ್ನು ಸರಿಪಡಿಸುವಂತೆ ನಾವು ಅವರಿಗೆ ಸೂಚಿಸುತ್ತೇವೆ ಎಂದು ನಿರ್ಧರಿಸಿದ್ದೇವೆ. ನಮ್ಮ ಮಕ್ಕಳ ಹಿತಾಸಕ್ತಿಯೇ ನಮಗೆ ಮುಖ್ಯ, ಯಾರು ನಮ್ಮ ಪರವಾಗಿದ್ದಾರೆ ಅಥವಾ ವಿರುದ್ಧವಾಗಿದ್ದಾರೆ ಎಂಬುದು ಆದ್ಯತೆಯಲ್ಲ ಎಂದು ಖರ್ಗೆ ಹೇಳಿದ್ದಾರೆ.
ರಾಹುಲ್ ಗಾಂಧಿ ಕೂಡ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ್ದು, ಕೇಂದ್ರದಲ್ಲಿರಲಿ ಅಥವಾ ಜಾರ್ಖಂಡ್‌ನಲ್ಲಿರಲಿ, ಎಲ್ಲಾ ಸರ್ಕಾರಗಳು ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ಈ ವಿಷಯದಲ್ಲಿ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ನಿಜಕ್ಕೂ ಕಾಳಜಿಯಿದ್ದರೆ ಜಾರ್ಖಂಡ್‌ನ ಮೈತ್ರಿ ಸರ್ಕಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಲು ಅವರು ಸೂಚಿಸಲಿ ಎಂದು ಕೇಂದ್ರ ಸಚಿವ ಸಂಜಯ್ ಸೇಠ್ ಎನ್‍ಡಿಟಿವಿಗೆ ತಿಳಿಸಿದ್ದಾರೆ. 

ರಾಂಚಿಯಲ್ಲಿ ನಡೆದ ಹಿಂದಿನ ಹಂತದ ಮಾತುಕತೆಗಳು

ಪ್ರತಿಭಟನೆಯನ್ನು ಅಂತ್ಯಗೊಳಿಸಲು ಜಾರ್ಖಂಡ್ ಸರ್ಕಾರ ರಾಂಚಿಯಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಇದುವರೆಗೆ ಐದು ಹಂತದ ಚರ್ಚೆಗಳನ್ನು ನಡೆಸಿದೆ. ಆದಾಗ್ಯೂ, ಯಾವುದೇ ಮಾತುಕತೆಯಿಂದ ಸಕಾರಾತ್ಮಕ ಫಲಿತಾಂಶ ಬಾರದ ಕಾರಣ ಬಿಕ್ಕಟ್ಟು ಮುಂದುವರಿದಿದೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಡೆದ ಮೊದಲ ಹಂತದ ಮಾತುಕತೆಯಲ್ಲಿ, ಸರ್ಕಾರಿ ಸಮಿತಿಯು ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ ನಾಯಕ ದೇವೇಂದ್ರ ನಾಥ್ ಮಹತೋ ನೇತೃತ್ವದ ಪ್ರತಿಭಟನಾಕಾರರ ತಂಡವನ್ನು ಭೇಟಿಯಾಗಿತ್ತು. ತದನಂತರ, ಸರ್ಕಾರಿ ಸಮಿತಿಯು ಕಾಂಗ್ರೆಸ್ ಬೆಂಬಲಿತ ಮೂರು ವಿದ್ಯಾರ್ಥಿ ಸಂಘಟನೆಗಳ ನಿಯೋಗಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿತು. ಶನಿವಾರ ಜಿಪಿಎಸ್‍ಸಿ-ಜೆಎಸ್‍ಎಸ್‍ಸಿ ಅಭ್ಯರ್ಥಿಗಳ ನ್ಯಾಯ ವೇದಿಕೆಯ ನಿಯೋಗದೊಂದಿಗೂ ಮತ್ತೊಂದು ಹಂತದ ಚರ್ಚೆ ನಡೆಯಿತು.ಕಳೆದ ಒಂದು ವಾರದಿಂದ ಸತತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೇವೇಂದ್ರ ನಾಥ್ ಮಹತೋ, ಎಲ್ಲಾ ವಿದ್ಯಾರ್ಥಿ ಸಂಘಟನೆಗಳ ಬೇಡಿಕೆ ಒಂದೇ ಆಗಿದೆ, ಸರ್ಕಾರ ತಕ್ಷಣವೇ ಈ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net