ರಾಷ್ಟ್ರೀಯ ಚಿಹ್ನೆಗಳಿಗೆ ಅಪಮಾನ ಮಾಡುವವರಿಗೆ ದೇಶದಲ್ಲಿ ಜಾಗವಿಲ್ಲ: ಸಿಎಂ ಯೋಗಿ ಆದಿತ್ಯನಾಥ್ ಖಡಕ್ ವಾರ್ನಿಂಗ್! | Yogi Adityanath
Yogi Adityanath | ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Published on:
Copied
Follow Us
ಭಾರತದಲ್ಲಿ ವಾಸಿಸುವ ಯಾವುದೇ ವ್ಯಕ್ತಿಯೂ ದೇಶದ ರಾಷ್ಟ್ರೀಯ ಚಿಹ್ನೆಗಳು, ಮಹಾಪುರುಷರು, ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯಗೀತೆಗೆ ಅಪಮಾನ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ.
ಕಾಕೋರಿ ರೈಲು ಸಾಹಸದ 101ನೇ ವಾರ್ಷಿಕೋತ್ಸವದ ಅಂಗವಾಗಿ ಲಖನೌದಲ್ಲಿ ಆಯೋಜಿಸಲಾಗಿದ್ದ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಯೋಗಿ, ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರಗೀತೆಗೆ ಅಪಮಾನ ಮಾಡುವುದನ್ನು ಜಾಮೀನು ರಹಿತ ಹಾಗೂ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಚಿಹ್ನೆಗಳಿಗೆ ಹೆಚ್ಚಿನ ಗೌರವ ತಂದುಕೊಟ್ಟಿದ್ದಾರೆ. ಹೀಗಾಗಿ ದೇಶದ ಚಿಹ್ನೆಗಳು ಮತ್ತು ಮಹಾಪುರುಷರನ್ನು ತೆಗಳುತ್ತಾ ಯಾರೂ ಭಾರತದಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
1925ರ ಕಾಕೋರಿ ಘಟನೆಯಲ್ಲಿ ಬ್ರಿಟಿಷ್ ಆಡಳಿತದ ಅಡಿಪಾಯವನ್ನೇ ಅಲುಗಾಡಿಸಿದ ರಾಮ್ ಪ್ರಸಾದ್ ಬಿಸ್ಮಿಲ್, ಠಾಕೂರ್ ರೋಶನ್ ಸಿಂಗ್ ಮತ್ತು ಅಶ್ಫಾಕುಲ್ಲಾ ಖಾನ್ ಅವರಂತಹ ಮಹಾನ್ ಕ್ರಾಂತಿಕಾರಿಗಳನ್ನು ಸ್ಮರಿಸಿದ ಯೋಗಿ, ಈ ವರ್ಷ ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷಗಳನ್ನು ಪೂರೈಸುತ್ತಿದೆ ಎಂದರು.
ಇಂದು ಕಾಕೋರಿ ರೈಲು ಸಾಹಸದ 101ನೇ ಪವಿತ್ರ ವಾರ್ಷಿಕೋತ್ಸವವಾಗಿದೆ. ಈ ಶುಭ ಸಂದರ್ಭದಲ್ಲಿ ಮಹಾನ್ ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸಲು ಬಿಜೆಪಿ ದೇಶಾದ್ಯಂತ ತಿರಂಗಾ ಯಾತ್ರೆಗಳನ್ನು ಆರಂಭಿಸುತ್ತಿದೆ ಎಂದು ತಿಳಿಸಿದರು. ಸ್ವಾತಂತ್ರ್ಯದ ನಂತರ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ತ್ಯಾಗವನ್ನು ಸ್ಮರಿಸಿದ ಅವರು, ಈ ತಿರಂಗಾ ಯಾತ್ರೆಯು ಆ ಎಲ್ಲಾ ಹುತಾತ್ಮರಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ ಮತ್ತು ಪ್ರಧಾನಿ ಮೋದಿಯವರ ದೇಶವೇ ಮೊದಲು ಎಂಬ ಮಂತ್ರವನ್ನು ಮುನ್ನಡೆಸುವ ಸಂಕಲ್ಪವಾಗಿದೆ ಎಂದು ಬಣ್ಣಿಸಿದರು.
ಯುವಶಕ್ತಿಗೆ ಕರೆ!..
ನಮ್ಮ ಯುವಜನತೆ ಅತ್ಯಂತ ಪ್ರತಿಭಾವಂತರು, ಶಕ್ತಿಯ ಸಂಕೇತ ಮತ್ತು ದೇಶ ಎದುರಿಸುವ ಪ್ರತಿಯೊಂದು ಸವಾಲನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಯುವಶಕ್ತಿಗೆ ಸೂಕ್ತ ವೇದಿಕೆ ಸಿಗಬೇಕು, ಅವರು ತಮ್ಮ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ದೇಶ ಮತ್ತು ಸಮಾಜದ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಯಾತ್ರೆಯಲ್ಲಿ ಸುಮಾರು 25,000 ದಿಂದ 30,000 ಯುವಕರು ಭಾಗವಹಿಸುವ ನಿರೀಕ್ಷೆಯಿತ್ತು ಎಂದು ತಿಳಿಸಿದ ಸಿಎಂ, ನನಗೆ ಬೆಳಿಗ್ಗೆಯಿಂದಲೇ ವರದಿಗಳು ಬರುತ್ತಿದ್ದವು. ಬೆಳಿಗ್ಗೆ 8:30ರ ವೇಳೆಗೆ 25,000ಕ್ಕೂ ಹೆಚ್ಚು ಯುವಕರು ಇಲ್ಲಿ ನೆರೆದಿದ್ದರು, ಈಗ ಆ ಸಂಖ್ಯೆ 30,000 ದಾಟಿದೆ ಎಂದು ತಿಳಿಯಲು ಸಂತಸವಾಯಿತು ಎಂದರು. ಈ ಬೃಹತ್ ಜನಸ್ತೋಮವು ದೇಶಪ್ರೇಮ ಹಾಗೂ ದೇಶಕ್ಕಾಗಿ ಪ್ರಾಣ ಕೊಟ್ಟ ಕ್ರಾಂತಿಕಾರಿಗಳಿಗೆ ಸಲ್ಲಿಸುವ ಕೃತಜ್ಞತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಸ್ವಾತಂತ್ರ್ಯ ದಿನಾಚರಣೆಯ ಹರ್ ಘರ್ ತಿರಂಗಾ ಅಭಿಯಾನಕ್ಕೆ ಜನತೆ ಕೈಜೋಡಿಸಬೇಕೆಂದು ಕರೆ ನೀಡಿದ ಯೋಗಿ ಆದಿತ್ಯಾನಾಥ್, ಹಿಂದೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜನರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಹೋರಾಟ ನಡೆಸಬೇಕಾಗಿತ್ತು, ಕೋರ್ಟ್ಗೆ ಅಲೆಯಬೇಕಾಗಿತ್ತು. ಆದರೆ ಪ್ರಧಾನಿ ಮೋದಿ ಅವರು ಇಂದು 140 ಕೋಟಿ ಭಾರತೀಯರಿಗೂ ತಮ್ಮ ಮನೆಗಳ ಮೇಲೆ ಹೆಮ್ಮೆಯಿಂದ ರಾಷ್ಟ್ರಧ್ವಜ ಹಾರಿಸುವ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.
ಸಂವಿಧಾನ ಶಿಲ್ಪಿಗಳಾದ ಡಾ. ಬಿ.ಆರ್. ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್ ಹಾಗೂ ದೇಶದ ಏಕತೆಯ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೂ ಯೋಗಿ ಆದಿತ್ಯನಾಥ್ ನಮನ ಸಲ್ಲಿಸಿದರು(ಏಜೆನ್ಸೀಸ್).