'ಜನ ನಾಯಗನ್' ಪ್ರೊಡ್ಯೂಸರ್‌ಗೆ ದೆಹಲಿಯಲ್ಲಿ ತಮಿಳುನಾಡು ವಿಶೇಷ ಪ್ರತಿನಿಧಿ ಹುದ್ದೆ: ಪ್ರತಿಪಕ್ಷದಿಂದ ತೀವ್ರ ಟೀಕೆ!

Jana Nayagan
Jana Nayagan
Published on

ಪ್ರಮುಖ ಮುಖ್ಯಾಂಶಗಳು

  • 'ಜನ ನಾಯಕನ್' ನಿರ್ಮಾಪಕರಿಗೆ ದೆಹಲಿಯಲ್ಲಿ ಸರ್ಕಾರಿ ಹುದ್ದೆ; ವಿವಾದಕ್ಕೆ ಕಾರಣವಾದ ನೇಮಕ
  • ವಿಜಯ್ ಆಪ್ತನಿಗೆ ದೆಹಲಿ ಜವಾಬ್ದಾರಿ; ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಟೀಕೆ
  • ಸಿನಿಮಾ ನಿರ್ಮಾಪಕನಿಗೆ ವಿಶೇಷ ಪ್ರತಿನಿಧಿ ಹುದ್ದೆ; ಪ್ರತಿಪಕ್ಷದಿಂದ ಪ್ರಶ್ನೆಗಳ ಸುರಿಮಳೆ
ಚೆನ್ನೈ:ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅಭಿನಯದ 'ಜನ ನಾಯಗನ್'(Jana Nayagan) ಚಿತ್ರದ ನಿರ್ಮಾಪಕ ಕೆ. ವೆಂಕಟ ನಾರಾಯಣ ಅವರನ್ನು ದೆಹಲಿಯಲ್ಲಿನ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಒಂದು ವರ್ಷದ ಅವಧಿಗೆ ನೇಮಕ ಮಾಡಿದೆ. ಈ ನೇಮಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರತಿಪಕ್ಷದಿಂದ ಟೀಕೆ ವ್ಯಕ್ತವಾಗಿದೆ.
ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ವೆಂಕಟ ನಾರಾಯಣ ಅವರು ಹುದ್ದೆಯನ್ನು ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ನಿರ್ವಹಿಸಲಿದ್ದಾರೆ. ಅವರ ನೇಮಕಾತಿಯ ಸೇವಾ ನಿಯಮಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯ್ ಆಪ್ತರಾಗಿರುವ ನಿರ್ಮಾಪಕ

ಕೆ. ವೆಂಕಟ ನಾರಾಯಣ ಅವರು ವಿಜಯ್ ನಟಿಸಿರುವ 'ಜನ ನಾಯಕನ್' ಚಿತ್ರದ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಎಚ್. ವಿನೋತ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ವಿಜಯ್ ಅವರು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿದ ವೇಳೆ ವೆಂಕಟ ನಾರಾಯಣ ಕೂಡ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದರಿಂದ ಇಬ್ಬರ ನಡುವಿನ ಆಪ್ತ ಸಂಬಂಧದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. 'ಜನ ನಾಯಗನ್' ಚಿತ್ರವು ಇತ್ತೀಚಿನ ದಿನಗಳಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಯ ಪ್ರಮಾಣಪತ್ರ ವಿಳಂಬ ಹಾಗೂ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾದ ಆರೋಪದ ಕಾರಣವೂ ಸುದ್ದಿಯಲ್ಲಿತ್ತು.

ಪ್ರತಿಪಕ್ಷದಿಂದ ಟೀಕೆ

ಈ ನೇಮಕವನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ. ಡಿಎಂಕೆ ರಾಜ್ಯಸಭಾ ಸದಸ್ಯ ಪಿ. ವಿಲ್ಸನ್, ಸಿನಿಮಾ ನಿರ್ಮಾಪಕರನ್ನು ಇಂತಹ ಪ್ರಮುಖ ಆಡಳಿತಾತ್ಮಕ ಹುದ್ದೆಗೆ ನೇಮಿಸಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ದೆಹಲಿ ವಿಶೇಷ ಪ್ರತಿನಿಧಿ ಹುದ್ದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಮುಖ ಕೊಂಡಿಯಾಗಿದೆ. ಕೇಂದ್ರ ಸಚಿವರೊಂದಿಗೆ ಸಮನ್ವಯ ಸಾಧಿಸುವುದು, ಮುಖ್ಯಮಂತ್ರಿ ದೆಹಲಿ ಭೇಟಿಯ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುವುದು, ಕೇಂದ್ರ ಸರ್ಕಾರದ ನೀತಿಗಳ ಕುರಿತು ರಾಜ್ಯಕ್ಕೆ ಮಾಹಿತಿ ನೀಡುವುದು ಹಾಗೂ ಸಂಸತ್ ಅಧಿವೇಶನದ ವೇಳೆ ತಮಿಳುನಾಡಿನ ಸಂಸದರಿಗೆ ಅಗತ್ಯ ಮಾಹಿತಿ ಒದಗಿಸುವಂತಹ ಜವಾಬ್ದಾರಿಗಳು ಈ ಹುದ್ದೆಗೆ ಇವೆ ಎಂದು ಅವರು ಹೇಳಿದ್ದಾರೆ.

'ಹುದ್ದೆಯ ಘನತೆಗೆ ಧಕ್ಕೆ'

ಸರ್ಕಾರಕ್ಕೆ ತನ್ನ ಇಚ್ಛೆಯ ವ್ಯಕ್ತಿಯನ್ನು ನೇಮಕ ಮಾಡುವ ಅಧಿಕಾರ ಇದೆ. ಆದರೆ ರಾಜ್ಯದ ಆಡಳಿತಾತ್ಮಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಹುದ್ದೆಗೆ ನೇಮಕ ಮಾಡಬೇಕು ಎಂದು ವಿಲ್ಸನ್ ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾ ನಿರ್ಮಾಪಕರನ್ನು ಈ ಸ್ಥಾನಕ್ಕೆ ನೇಮಿಸಿರುವುದು ಹುದ್ದೆಯ ಘನತೆಯನ್ನು ಕುಗ್ಗಿಸುವಂತಿದ್ದು, ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯದ ಗೌರವಕ್ಕೂ ಧಕ್ಕೆಯಾಗಬಹುದು ಎಂದು ಅವರು ಆರೋಪಿಸಿದ್ದಾರೆ. ಆದರೆ, ಈ ಟೀಕೆಗಳಿಗೆ ತಮಿಳುನಾಡು ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net