ಬ್ರಿಟಿಷರ ಬಳಿ ಐದು ಬಾರಿ ಕ್ಷಮೆಯಾಚನೆಗೆ ಪತ್ರ ಬರೆದಿದ್ದು ನಿಜ! ಆದರೆ... ನ್ಯಾಯಾಲಯದಲ್ಲಿ ಒಪ್ಪಿಕೊಂಡ ಸಾವರ್ಕರ್ ಮೊಮ್ಮಗ | Savarkar

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದಾಗ ಐದು ಬಾರಿ ಕ್ಷಮೆಯಾಚಿಸಿ ಬ್ರಿಟಿಷರ ಸರ್ಕಾರಕ್ಕೆ ಪತ್ರ ಬರೆದಿದ್ದು ನಿಜ, ಆದರೆ ಅದನ್ನು ಅವರೊಬ್ಬರೇ ಮಾಡಿಲ್ಲ, ಸಾಕಷ್ಟು ಕೈದಿಗಳು ಪತ್ರ ಬರೆದಿದ್ದರು ಎಂದು ಸಾವರ್ಕರ್ ಮೊಮ್ಮಗ ಸತ್ಯಕಿ ಸಾವರ್ಕರ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಲಂಡನ್ ಭೇಟಿಯ ಸಂದರ್ಭದಲ್ಲಿ ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಮೊಮ್ಮಗ ಸತ್ಯಕಿ ಸಾವರ್ಕರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಈ ಪ್ರಕರಣದ ವಿಚಾರಣೆ ಪುಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇತ್ತೀಚೆಗೆ ವಿಚಾರಣೆಯ ಸಮಯದಲ್ಲಿ ಸತ್ಯಕಿ ಸಾವರ್ಕರ್, ರಾಹುಲ್ ಗಾಂಧಿಯವರ ವಕೀಲ ಮಿಲಿಂದ್ ಪವಾರ್ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿದ್ದ ಸಮಯದಲ್ಲಿ ಸಾವರ್ಕರ್ ಬ್ರಿಟಿಷ್ ಸರ್ಕಾರಕ್ಕೆ ಐದು ಬಾರಿ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಆದಾಗ್ಯೂ, ಆ ಅವಧಿಯಲ್ಲಿ ಸಾವರ್ಕರ್ ಮಾತ್ರವಲ್ಲದೆ ಇತರ ಅನೇಕ ರಾಜಕೀಯ ಕೈದಿಗಳು ಅಂತಹ ವಿನಂತಿಗಳನ್ನು ಬ್ರಿಟಿಷ್ ಸರ್ಕಾರಕ್ಕೆ ಮಾಡಿದ್ದರು. ಜೈಲಿನಿಂದ ಹೊರಬಂದು ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ತಂತ್ರದ ಕೆಲಸದ ಭಾಗವಾಗಿ ಪತ್ರ ಬರೆದಿದ್ದರು ಎಂದು ಸತ್ಯಕಿ ತಿಳಿಸಿದ್ದಾರೆ.
ಅಲ್ಲದೇ ಗೋವಿನ ಬಗ್ಗೆ ಸಾವರ್ಕರ್ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, ತಮ್ಮ ತಾತ ಗೋವನ್ನು ಎಂದಿಗೂ ದೇವರಂತೆ ಪೂಜಿಸಲಿಲ್ಲ, ಆದರೆ ಅದನ್ನು ಉಪಯುಕ್ತ ಪ್ರಾಣಿ ಎಂದು ಮಾತ್ರ ಪರಿಗಣಿಸಿದ್ದರು. ಮತ್ತು ಅದರ ವೈಜ್ಞಾನಿಕ ವಿಧಾನವನ್ನು ನಂಬಿದ್ದರು ಎಂದು ಹೇಳಿದ್ದಾರೆ.
ಮುಂದುವರೆದು ಭಾರತೀಯರು ಬ್ರಿಟಿಷ್ ಸೈನ್ಯಕ್ಕೆ ಸೇರಬೇಕೆಂದು ನೀಡಿದ ಕರೆ ಬಗ್ಗೆಯೂ ತಿಳಿಸಿದ್ದು, ಭಾರತೀಯ ಯುವಕರಿಗೆ ಮಿಲಿಟರಿ ತರಬೇತಿ ಮತ್ತು ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ಅನುಭವವನ್ನು ನೀಡಿದರೆ, ಸ್ವಾತಂತ್ರ್ಯದ ನಂತರ ದೇಶವನ್ನು ರಕ್ಷಿಸಲು ನಮ್ಮದೇ ಆದ ಸೈನ್ಯವನ್ನು ನಾವು ಹೊಂದಿರುತ್ತೇವೆ ಎಂಬ ದೂರದೃಷ್ಟಿಯಿಂದ ಸಾವರ್ಕರ್ ಆ ಕರೆಯನ್ನು ನೀಡಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇನ್ನೂ ಮಾನನಷ್ಟ ಪ್ರಕರಣದಲ್ಲಿ ಸತ್ಯಕಿ ಸಾವರ್ಕರ್ ಅವರ ಪಾಟಿಸವಾಲು ಜೂನ್ 1 ರಂದು ಮತ್ತೆ ಮುಂದುವರಿಯಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net