ಮಹಿಳೆಯರ ಸಲ್ವಾರ್​ ಎಳೆಯುವುದು, ಎದೆಯನ್ನು ಒತ್ತುವುದು ಅತ್ಯಾ*ಚಾರದ ಯತ್ನವಲ್ಲವೇ? ಪಾಟ್ನಾ ಹೈಕೋರ್ಟ್​ ತೀರ್ಪಿಗೆ ಸುಪ್ರೀಂ ಕೋರ್ಟ್​ ಗರಂ! Supreme Court on Women Safety

ಹೈಕೋರ್ಟ್ ತೀರ್ಪನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ಹೈಕೋರ್ಟ್ ತೀರ್ಪನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು, ಎದೆಯನ್ನು ಒತ್ತುವುದು ಅತ್ಯಾಚಾರದ ಯತ್ನವಲ್ಲ ಎಂದಿದ್ದ ಪಾಟ್ನಾ ಹೈಕೋರ್ಟ್
  • ಹೈಕೋರ್ಟ್ ತೀರ್ಪನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
  • ಸಿಜೆಐ ಸೂರ್ಯ ಕಾಂತ್ ಅವರ ಖಡಕ್ ಪ್ರತಿಕ್ರಿಯೆ ಮತ್ತು ಸುಪ್ರೀಂ ಕೋರ್ಟ್‌ನ ಹೊಸ ನಿಯಮಗಳ ಸಂಪೂರ್ಣ ಮಾಹಿತಿ
ನವದೆಹಲಿ: ಮಹಿಳೆಯರ ಸುರಕ್ಷತೆ ಮತ್ತು ನ್ಯಾಯಾಂಗದ ಸೂಕ್ಷ್ಮತೆಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ (ಜು.14) ಅತ್ಯಂತ ಮಹತ್ವದ ಮತ್ತು ಖಡಕ್ ಹೆಜ್ಜೆಯನ್ನಿಟ್ಟಿದೆ. ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು ಆಕೆಯ ಎದೆಯನ್ನು ಒತ್ತುವುದು ಅತ್ಯಾಚಾರದ ಪ್ರಯತ್ನವಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂ ಕೋರ್ಟ್ (Supreme Court on Women Safety) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಇಂತಹ ತೀರ್ಪುಗಳನ್ನು ನೀಡುವಾಗ ಕನಿಷ್ಟ ಸಂಶೋಧನೆ, ವಿವೆಚನೆ ಇರುವುದಿಲ್ಲವೇ ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಕಿಡಿಕಾರಿದ್ದು ಯಾಕೆ?

ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಕೆಳ ಹಂತದ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳು ಅನುಸರಿಸುತ್ತಿರುವ ಧೋರಣೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ (Suo Motu) ವಿಚಾರಣೆ ಕೈಗೆತ್ತಿಕೊಂಡಿತ್ತು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠದ ಮುಂದೆ ಹಿರಿಯ ವಕೀಲೆ ಶೋಭಾ ಗುಪ್ತಾ ಅವರು ಪಾಟ್ನಾ ಹೈಕೋರ್ಟ್‌ನ ಈ ಇತ್ತೀಚಿನ ತೀರ್ಪನ್ನು ಪ್ರಸ್ತಾಪಿಸಿದರು.
ಈ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ, ಸೂರ್ಯ ಕಾಂತ್​, ಅಂತಹ ತೀರ್ಪುಗಳನ್ನು ನೀಡುವ ಮುನ್ನ ಸಂಪೂರ್ಣ ಸಂಶೋಧನೆಯ ಕೊರತೆಯಿರುವುದು ಎದ್ದು ಕಾಣುತ್ತಿದೆ. ಅಲ್ಲಿನ ಸಿಬ್ಬಂದಿ ಏನನ್ನೂ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಾಟ್ನಾ ಹೈಕೋರ್ಟ್‌ನ ಈ ಅವಲೋಕನಗಳ ವಿರುದ್ಧ ಶೀಘ್ರದಲ್ಲೇ ವಿವರವಾದ ಆದೇಶವನ್ನು ಹೊರಡಿಸುವುದಾಗಿ ನ್ಯಾಯಪೀಠ ಹೇಳಿದೆ.

ಹೈಕೋರ್ಟ್‌ಗಳು ನೀಡಿದ್ದ 'ಶಾಕಿಂಗ್' ತೀರ್ಪುಗಳು!

ಇತ್ತೀಚೆಗಷ್ಟೇ ಅಲಹಾಬಾದ್ ಹೈಕೋರ್ಟ್ ಕೂಡ ಇಂತಹದೇ ಒಂದು ತೀರ್ಪು ನೀಡಿತ್ತು. ಅಪ್ರಾಪ್ತ ಬಾಲಕಿಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮದ ದಾರವನ್ನು ಎಳೆಯುವುದು ಅತ್ಯಾಚಾರದ ಯತ್ನವಲ್ಲ ಎಂದು ಹೇಳಿತ್ತು. ಈ ಪ್ರಕರಣದ ಬೆನ್ನಲ್ಲೇ ಈಗ ಪಾಟ್ನಾ ಹೈಕೋರ್ಟ್‌ನ ಮತ್ತೊಂದು ತೀರ್ಪು ಮುಂಚೂಣಿಗೆ ಬಂದಿದೆ.
ಪಾಟ್ನಾ ಹೈಕೋರ್ಟ್‌ನ ವಿಚಿತ್ರ ತರ್ಕ:
2008 ರ ಹಳೆಯ ಪ್ರಕರಣವೊಂದರಲ್ಲಿ, ಬಿಹಾರದ ಅಮರ್‌ಪುರದಲ್ಲಿ ಫೋಟೋ ಸ್ಟುಡಿಯೋ ಮಾಲೀಕನೊಬ್ಬ ಯುವತಿಯನ್ನು ಒಳಗಿನಿಂದ ಚಿಲಕ ಹಾಕಿ ಕೂಡಿಹಾಕಿದ್ದ. ಆಕೆಯ ಸಲ್ವಾರ್ ತೆಗೆಯಲು ಯತ್ನಿಸಿ, ಎದೆಯನ್ನು ಒತ್ತಿ ದೈಹಿಕ ಕಿರುಕುಳ ನೀಡಿದ್ದ. ವಿಚಾರಣಾ ನ್ಯಾಯಾಲಯ ಇದಕ್ಕೆ ಶಿಕ್ಷೆ ವಿಧಿಸಿತ್ತಾದರೂ, ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿತ್ತು.
ಹೈಕೋರ್ಟ್ ಪ್ರಕಾರ, ಅಲ್ಲಿ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ, ಹಾಗಾಗಿ ಅದನ್ನು ಐಪಿಸಿ ಸೆಕ್ಷನ್ 375/376 ರ ಅಡಿಯಲ್ಲಿ ಅತ್ಯಾಚಾರದ ಯತ್ನ ಎಂದು ಕರೆಯಲು ಸಾಧ್ಯವಿಲ್ಲ. ಬದಲಿಗೆ, ಅದು ಕೇವಲ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಕೃತ್ಯವಷ್ಟೇ ಎಂದು ಹೈಕೋರ್ಟ್ ತರ್ಕಿಸಿತ್ತು. ನ್ಯಾಯಾಲಯಗಳ ಈ ರೀತಿಯ ಸಾಂಪ್ರದಾಯಿಕ ಮತ್ತು ಸೂಕ್ಷ್ಮತೆಯಿಲ್ಲದ ಧೋರಣೆಗೆ ಈಗ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ.

ದೇಶದ ಎಲ್ಲಾ ಕೋರ್ಟ್‌ ಹಾಗೂ ಪೊಲೀಸ್ ಠಾಣೆಗಳಿಗೆ ಸುಪ್ರೀಂ ಖಡಕ್ ರೂಲ್ಸ್!

ಲೈಂಗಿಕ ಅಪರಾಧಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಂಗವು ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ತಜ್ಞರ ಸಮಿತಿ ಸಿದ್ಧಪಡಿಸಿದ ವಿಶೇಷ ಕೈಪಿಡಿಯನ್ನು ಸುಪ್ರೀಂ ಕೋರ್ಟ್ ಈಗ ಅಂಗೀಕರಿಸಿದೆ.
ಕಟ್ಟುನಿಟ್ಟಿನ ಆದೇಶ:
ದೇಶದ ಯಾವುದೇ ನ್ಯಾಯಾಲಯ ಇಂತಹ ಪ್ರಕರಣಗಳಲ್ಲಿ ತೀರ್ಪು ನೀಡುವಾಗ ಈ ಕೈಪಿಡಿಯಲ್ಲಿರುವ ಅಧಿಕೃತ ಮತ್ತು ಸೂಕ್ಷ್ಮ ಸಂವೇದನೆಯ ಅಭಿವ್ಯಕ್ತಿ ಹಾಗೂ ಪರಿಭಾಷೆಯನ್ನೇ ಬಳಸಬೇಕು.

ಪೊಲೀಸರಿಗೂ ವಾರ್ನಿಂಗ್:

ಎಫ್‌ಐಆರ್ ದಾಖಲಿಸುವಾಗ ಮತ್ತು ಚಾರ್ಜ್ ಶೀಟ್ ಸಲ್ಲಿಸುವಾಗ ಪೊಲೀಸರು ಕೂಡ ಇದೇ ನಿಯಮಗಳನ್ನು ಪಾಲಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಕೇವಲ ತಾಂತ್ರಿಕ ಕಾನೂನುಗಳ ಕನ್ನಡಕದಿಂದ ನೋಡದೇ, ಮಾನವೀಯ ಮತ್ತು ಸೂಕ್ಷ್ಮ ಮನೋಭಾವದಿಂದ ನೋಡಬೇಕಾದ ಅಗತ್ಯವನ್ನು ಸುಪ್ರೀಂ ಕೋರ್ಟ್‌ನ ಈ ನಡೆ ಮತ್ತೊಮ್ಮೆ ಸಾಬೀತುಪಡಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net