ಪದವಿ ಪಡೆದಿದ್ರೂ ಕೆಲಸ ಸಿಗದಿರಲು ಕಾರಣವೇನು? ನಿರುದ್ಯೋಗಿ ಯುವಕ ಕೊಟ್ಟ ಉತ್ತರ ಸಖತ್​ ವೈರಲ್...Jobs

ಪದವಿ ಪಡೆದಿದ್ರೂ ಕೆಲಸ ಸಿಗದಿರಲು ಕಾರಣವೇನು? ನಿರುದ್ಯೋಗಿ ಯುವಕ ಕೊಟ್ಟ ಉತ್ತರ ಸಖತ್​ ವೈರಲ್...Jobs
ಪದವಿ ಪಡೆದಿದ್ರೂ ಕೆಲಸ ಸಿಗದಿರಲು ಕಾರಣವೇನು? ನಿರುದ್ಯೋಗಿ ಯುವಕ ಕೊಟ್ಟ ಉತ್ತರ ಸಖತ್​ ವೈರಲ್...Jobs
Published on

ಪ್ರಮುಖ ಮುಖ್ಯಾಂಶಗಳು

  • ಎರಡೂವರೆ ತಿಂಗಳಿಂದ ಉದ್ಯೋಗವಿಲ್ಲದೆ ಕಷ್ಟಪಡುತ್ತಿರುವ ಶುಭ್ ಎಂಬ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ನಿರುದ್ಯೋಗದಿಂದ ಉಂಟಾಗುವ ಮಾನಸಿಕ ಆಯಾಸ ಮತ್ತು ಮೆಟ್ರೋ ನಗರಗಳಲ್ಲಿ ಎದುರಾಗುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಯುವಕನ ಆತಂಕ
  • ಉದ್ಯೋಗಾವಕಾಶಗಳನ್ನು ಬೇಗ ಪಡೆಯಲು ವೃತ್ತಿಪರ ಜಾಲ ಮತ್ತು ನೆಟ್‌ವರ್ಕಿಂಗ್ ಬೆಳೆಸಿಕೊಳ್ಳುವುದು ಅಗತ್ಯ ಎಂದು ಸಲಹೆ
  • ಸ್ವಯಂ ಕಲಿಕೆಗಿಂತ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ಸಿಗುವ ಪ್ರಾಯೋಗಿಕ ಅನುಭವ ಅತ್ಯಂತ ಮಹತ್ವದ್ದು ಎಂದು ಯುವಕ
ನವದೆಹಲಿ: ಜೀವನಕ್ಕೆ ಆಸರೆಯಾಗಿದ್ದ ಉದ್ಯೋಗವನ್ನು ( Jobs ) ಕಳೆದುಕೊಳ್ಳುವುದು ಆ ವ್ಯಕ್ತಿಯ ವೃತ್ತಿಜೀವನದ ಮೇಲೆ ಮಾತ್ರವಲ್ಲದೆ, ಮಾನಸಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆಯೂ ತೀವ್ರವಾದ ಪರಿಣಾಮ ಬೀರುತ್ತದೆ. ಸುಮಾರು ಎರಡೂವರೆ ತಿಂಗಳಿಂದ ನಿರುದ್ಯೋಗಿಯಾಗಿರುವ ಶುಭ್ ಎಂಬ ಯುವಕನೊಬ್ಬ ತನ್ನ ಕಷ್ಟದ ಪರಿಸ್ಥಿತಿಯನ್ನು ವಿವರಿಸುತ್ತಾ ಆತಂಕ ವ್ಯಕ್ತಪಡಿಸಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.
ನಿರುದ್ಯೋಗದಿಂದ ಉಂಟಾಗುವ ಮಾನಸಿಕ ಆಯಾಸ, ಆರ್ಥಿಕ ಬಿಕ್ಕಟ್ಟು ಮತ್ತು ವೃತ್ತಿಪರ ಜಗತ್ತಿನೊಂದಿಗೆ ಸಂಪರ್ಕ ಕಡಿತಗೊಳ್ಳುವುದರಿಂದ ಎದುರಾಗುವ ಸವಾಲುಗಳನ್ನು ಶುಭ್​ ಅವರು ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಉದ್ಯೋಗ ತೊರೆದಾಗಿನಿಂದ ಪ್ರತಿದಿನವು ಏಕತಾನತೆಯಿಂದ ಕೂಡಿದ್ದು ನೀರಸವಾಗಿದೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ದೈನಂದಿನ ದಿನಚರಿಯಲ್ಲಿ ಯಾವುದೇ ಉತ್ಸಾಹವಿಲ್ಲದಿರುವುದು ತಮಗೆ ತೀವ್ರ ಮಾನಸಿಕ ಒತ್ತಡವನ್ನುಂಟುಮಾಡುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮೆಟ್ರೋ ನಗರಗಳಲ್ಲಿ ಉದ್ಯೋಗವಿಲ್ಲದೆ ಬದುಕುವುದು ಎಷ್ಟು ಕಷ್ಟ ಎಂಬುದನ್ನು ವಿವರಿಸಿರುವ ಶುಭ್, ತಿಂಗಳ ಕೊನೆಯಲ್ಲಿ ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಇತ್ಯಾದಿ ದೈನಂದಿನ ಖರ್ಚುಗಳಿಗಾಗಿ ತಾವೇ ಕೂಡಿಟ್ಟ ಹಣವನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದಿದ್ದಾರೆ. ನಿಯಮಿತ ಆದಾಯವಿಲ್ಲದೆ ದೊಡ್ಡ ನಗರಗಳಲ್ಲಿ ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿದ್ದು, ಈ ಆರ್ಥಿಕ ಹೊರೆಯು ಮಾನಸಿಕ ಯಾತನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳಿದ್ದರೂ ಸಹ, ಸರಿಯಾದ ನೆಟ್‌ವರ್ಕಿಂಗ್ ಅಥವಾ ವೃತ್ತಿಪರ ಸಂಪರ್ಕವಿದ್ದಾಗ ಮಾತ್ರ ಅವಕಾಶಗಳು ಬೇಗ ದೊರೆಯುತ್ತವೆ ಎಂದು ಶುಭ್​ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಜೂನಿಯರ್‌ಗಳು ಮತ್ತು ಉದ್ಯೋಗಿಗಳು ತಮ್ಮ ವೃತ್ತಿಪರ ಜಾಲವನ್ನು ಬೆಳೆಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದು, ತಾವೂ ಕೂಡ ತಮಗೆ ತಿಳಿದಿರುವವರನ್ನು ಸಂಪರ್ಕಿಸಿದ್ದರೂ ಇದುವರೆಗೆ ಸರಿಯಾದ ಉದ್ಯೋಗ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಸ್ವಯಂ-ಕಲಿಕೆ ಮತ್ತು ಕಂಪನಿಯಲ್ಲಿ ಕೆಲಸ ಮಾಡುವಾಗ ಸಿಗುವ ಪ್ರಾಯೋಗಿಕ ಅನುಭವದ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಶುಭ್ ಸ್ಪಷ್ಟಪಡಿಸಿದ್ದಾರೆ. ನೀವು ಕಂಪನಿಯೊಂದರ ಭಾಗವಾದಾಗ ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುತ್ತೀರಿ, ಅಭ್ಯಾಸ ಮಾಡುತ್ತೀರಿ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೀರಿ, ಪುಸ್ತಕಗಳಲ್ಲಿ ಎಷ್ಟು ಓದಿದರೂ ಅಥವಾ ಬರೆದರೂ ಆ ಅನುಭವ ಸಿಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನೈಜ ಪ್ರಾಯೋಗಿಕ ಜ್ಞಾನವು ಕೇವಲ ಕೆಲಸ ಮಾಡುವುದರಿಂದ ಮಾತ್ರ ಬರುತ್ತದೆ ಎಂದು ಹೇಳಿರುವ ಶುಭ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ವ್ಯಾಪಕವಾಗಿ ಪ್ರತಿಕ್ರಿಯಿಸಿದ್ದಾರೆ.
ನೆಟಿಗರು ಶುಭ್ ಅವರ ಪರಿಸ್ಥಿತಿಗೆ ಸಾಂತ್ವನ ಹೇಳಿದ್ದು, "ಅಣ್ಣಾ, ನಿಮ್ಮ ಪರಿಸ್ಥಿತಿಯನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ" ಎಂದು ಒಬ್ಬರು ಬರೆದರೆ, ಮತ್ತೊಬ್ಬರು "ಪಾಸಿಟಿವ್​ ಆಗಿರಿ, ಎಲ್ಲರಿಗೂ ದೇವರು ಉತ್ತಮ ಯೋಜನೆಯನ್ನು ಇರಿಸಿಕೊಂಡಿರುತ್ತಾನೆ" ಎಂದು ಧೈರ್ಯ ತುಂಬಿದ್ದಾರೆ. "ನಾನೂ ಕೂಡ ಈಗ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ" ಎಂದು ಮತ್ತೊಬ್ಬರು ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ, ಶುಭ್ ಅವರ ಈ ಅನುಭವವು ಇತ್ತೀಚಿನ ದಿನಗಳಲ್ಲಿ ನಿರುದ್ಯೋಗದಿಂದ ಬಳಲುತ್ತಿರುವ ಅನೇಕ ಯುವಕರ ನೈಜ ಸ್ಥಿತಿಯ ಕನ್ನಡಿಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net