ಯುಜಿಸಿ ಸಮಾನತೆ ನಿಯಮದಲ್ಲಿ 'ಸವರ್ಣೀಯರಿಗೆ' ಸ್ಥಾನವಿಲ್ಲವೇ?ಆರೋಪದ ಅರ್ಜಿ ಆಲಿಸಲು ಒಪ್ಪಿದ ಸುಪ್ರೀಂ ಕೋರ್ಟ್! UGC

ಹೋರಾಟದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು, ಸುಪ್ರೀಂ ಕೋರ್ಟ್​
ಹೋರಾಟದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು, ಸುಪ್ರೀಂ ಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ಯುಜಿಸಿ ನೂತನ ನಿಯಮಕ್ಕೆ ಸವರ್ಣ ವಿದ್ಯಾರ್ಥಿಗಳ ವಿರೋಧ
  • ಅರ್ಜಿ ವಿಚಾರಣೆ ಮಾಡುವುದಾಗಿ ಹೇಳಿದ ಸುಪ್ರೀಂ ಕೋರ್ಟ್​
ನವದೆಹಲಿ: ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಹೊರಡಿಸಿರುವ ನಿಯಮಾವಳಿಯಲ್ಲಿ ದೂರು ನೀಡಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಇರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಬುಧವಾರ (ಜ.28) ಹೇಳಿದೆ.
ನಿಯಮಾವಳಿಗಳು ದೂರು ಪರಿಹಾರ ವ್ಯವಸ್ಥೆಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಹೊರಗಿಟ್ಟಿ ತಾರತಮ್ಯ ಉಂಟು ಮಾಡುವಂತಿದೆ. ನಿಯಮಾವಳಿಗಳು ಮುಖ್ಯವಾಗಿ ಎಸ್‌ಸಿ/ಎಸ್‌ಟಿ. ಒಬಿಸಿ, ಆರ್ಥಿಕವಾಗಿ ಹಿಂದುಳಿದವರು ಮತ್ತು ಅಂಗವೈಕಲ್ಯ ಹೊಂದಿರುವವರ ರಕ್ಷಣೆಗೆ ನಿಂತಿದ್ದು ಉಳಿದ ವರ್ಗಗಳಿಗೆ ಸಾಂಸ್ಥಿಕ ರಕ್ಷಣೆ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಈಗ ಇರುವಂತೆಯೇ ನಿಯಮ ಜಾರಿಗೆ ಬರದಂತೆ ತಡೆ ನೀಡಬೇಕು. ಜಾತಿ ಆಧಾರದಲ್ಲಿ ದೂರು ಪರಿಹಾರ ವ್ಯವಸ್ಥೆಯನ್ನು ಲಭ್ಯವಿಲ್ಲದಂತೆ ಮಾಡುವುದು ಅನುಮತಿಸಲಾಗದ ಸರ್ಕಾರಿ ತಾರತಮ್ಯ ಎಂದು ಘೋಷಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.
ಈ ನಿಯಮಾವಳಿಗಳ ವಿರುದ್ಧ ಸಾರ್ವಜನಿಕವಾಗಿಯೂ ಪ್ರತಿಭಟನೆಗಳು ನಡೆಯುತ್ತಿದ್ದು ಪ್ರಬಲ ಜಾತಿಗಳಿಗೆ ಸೇರಿದವರು, ಇವು ಏಕಪಕ್ಷೀಯವಾಗಿವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ವಿರುದ್ಧ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ. ನಿಯಮಾವಳಿಗಳನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮುಂದೆ ಅನೇಕ ಅರ್ಜಿಗಳು ಮತ್ತು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿವೆ.
ಪ್ರಸಕ್ತ ಅರ್ಜಿಯನ್ನು ತುರ್ತಾಗಿ ಆಲಿಸುವಂತೆ ಅರ್ಜಿದಾರರು ಪ್ರಸ್ತಾಪಿಸಿದರು. ಆಗ ಪೀಠವು, ಏನಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ, ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಮೊದಲು ಸೇರಲಿ, ನಂತರ ನಾವು ವಿಚಾರಣೆ ನಡೆಸುತ್ತೇವೆ ಎಂದು ಹೇಳಿತು. ಜನವರಿ 13ರಿಂದ ಜಾರಿಗೆ ಬಂದಿರುವ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮತೆಯ ಉತ್ತೇಜನ) ನಿಯಮಾವಳಿ- 2026 ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.
ನಿಯಮಾವಳಿಯ ಉದ್ದೇಶವು, ಧರ್ಮ, ಜಾತಿ, ಲಿಂಗ, ಜನ್ಮಸ್ಥಳ, ಅಂಗವೈಕಲ್ಯತೆ ಅಥವಾ ಇವುಗಳ ಆಧಾರದ ಮೇಲೆ ನಡೆಯುವ ಭೇದಭಾವವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಅಂಗವೈಕಲ್ಯ ಹೊಂದಿರುವವರು ಅಥವಾ ಇವರಲ್ಲಿ ಯಾರ ಮೇಲಾದರೂ ನಡೆಯುವ ಭೇದಭಾವವನ್ನು ತೊಡೆದುಹಾಕಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣ ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದಾಗಿದೆ.
ನಿಯಮಾವಳಿಗಳ ಪ್ರಕಾರ, ಹಿಂದುಳಿದ ವರ್ಗಗಳಿಗಾಗಿ ರೂಪಿಸಲಾದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ, ಉನ್ನತ ಶಿಕ್ಷಣ ಸಂಸ್ಥೆಗಳು ಸಮಾನ ಅವಕಾಶ ಕೇಂದ್ರಗಳು ಹಾಗೂ ಸಮಾನತಾ ಸಮಿತಿಗಳನ್ನು ಸ್ಥಾಪಿಸಬೇಕು ಮತ್ತು ಭೇದಭಾವ ಸಂಬಂಧಿತ ದೂರುಗಳನ್ನು ಪರಿಶೀಲಿಸಬೇಕು ಎನ್ನಲಾಗುತ್ತದೆ. ಆದರೆ ಈ ನಿಯಮದಲ್ಲಿ ಸಾಮಾನ್ಯ ವರ್ಗದ ಅಥವಾ ಸವರ್ಣೀಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ರಕ್ಷಣೆಯಿಲ್ಲ ಎಂಬ ಕೂಗು ಕೇಳಿಬರುತ್ತಿದ್ದ ಹಿನ್ನಲೆ ಸುಪ್ರೀಂ ಕೋರ್ಟ್​ಗೆ ಅರ್ಜಿಯನ್ನು ಸಲ್ಲಿಸಲಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net