ಸದ್ಯ ಮಾತನಾಡಲು ಇದು ಸೂಕ್ತ ವಿಷಯವಲ್ಲ!...ಎನ್‌ಡಿಎ ಸೇರ್ಪಡೆಯ ವರದಿಗಳಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟ ಶರದ್​ ಪವಾರ್​ | Sharad Pawar

Sharad Pawar > ಸದ್ಯ ಮಾತನಾಡಲು ಇದು ಸೂಕ್ತ ವಿಷಯವಲ್ಲ!...ಎನ್‌ಡಿಎ ಸೇರ್ಪಡೆಯ ವರದಿಗಳಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟ ಶರದ್​ ಪವಾರ್​
Sharad Pawar > ಸದ್ಯ ಮಾತನಾಡಲು ಇದು ಸೂಕ್ತ ವಿಷಯವಲ್ಲ!...ಎನ್‌ಡಿಎ ಸೇರ್ಪಡೆಯ ವರದಿಗಳಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟ ಶರದ್​ ಪವಾರ್​
Published on
ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್‌ ಪವಾರ್ ಬಣ) ಪಕ್ಷ ಮತ್ತೆ ಇಬ್ಭಾಗವಾಗಲಿದೆ ಎಂಬ ವರದಿಗಳು ದಟ್ಟವಾಗುತ್ತಿರುವ ಬೆನ್ನಲ್ಲೇ, ಪಕ್ಷದ ಮುಖ್ಯಸ್ಥರಾದ ಶರದ್ ಪವಾರ್ (Sharad Pawar) ಶನಿವಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ಕಾಯ್ದುಕೊಂಡಿದ್ದಾರೆ. ತಮಗೆ ಎದುರಾದ ಪ್ರಶ್ನೆಗಳನ್ನು ಅತ್ಯಂತ ಚಾಣಾಕ್ಷತನದಿಂದ ತಳ್ಳಿಹಾಕಿದ ಅವರು, ಪ್ರಸ್ತುತ ಮಾತನಾಡಲು ಇದು ಸೂಕ್ತವಾದ ವಿಷಯವಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.
ಹಿರಿಯ ನಾಯಕ ಶರದ್ ಪವಾರ್​​ರ ಈಗಿನ ಪ್ರತಿಕ್ರಿಯೆಯು, ಜೂನ್ ತಿಂಗಳಲ್ಲಿ ಅವರು ತಳೆದಿದ್ದ ಖಡಕ್ ನಿಲುವಿಗಿಂತ ಸಂಪೂರ್ಣ ಭಿನ್ನವಾಗಿದೆ. ಜೂನ್‌ನಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳ ವದಂತಿಗಳನ್ನು ಅತ್ಯಂತ ಆತ್ಮವಿಶ್ವಾಸದಿಂದ ತಳ್ಳಿಹಾಕಿದ್ದ ಶರದ್ ಪವಾರ್, ಶಿವಸೇನಾ (ಯುಬಿಟಿ) ನಂತಹ ಪ್ರತಿಸ್ಪರ್ಧಿ ಬಣಗಳು ಒಡೆದಿರಬಹುದು, ಆದರೆ ತಮ್ಮ ಪಾಳಯ ಸಂಪೂರ್ಣವಾಗಿ ಅಖಂಡವಾಗಿದೆ ಎಂದಿದ್ದರು.

ಹಾಸ್ಯ ಚಟಾಕಿ ಹಾರಿಸಿದ ಸಂಸದೆ ಸುಪ್ರಿಯಾ ಸುಳೆ

ಪ್ರಸ್ತುತ ಲೋಕಸಭೆಯಲ್ಲಿ 8 ಮತ್ತು ರಾಜ್ಯಸಭೆಯಲ್ಲಿ 1 ಸ್ಥಾನವನ್ನು ಹೊಂದಿರುವ ಶರದ್ ಪವಾರ್ ನೇತೃತ್ವದ ಬಣದ ಬೆಂಬಲ ಅಥವಾ ತಟಸ್ಥ ನಿಲುವು ಈ ಮಸೂದೆಯನ್ನು ಸುಲಭವಾಗಿ ಪಾಸ್ ಮಾಡಲು ಸರ್ಕಾರಕ್ಕೆ ಅತ್ಯಂತ ನಿರ್ಣಾಯಕವಾಗಬಹುದು. ಈ ಬಗ್ಗೆ ಮಾತನಾಡಿರುವ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, ಒಂದು ವೇಳೆ ದೇಶದ ಎಲ್ಲಾ ರಾಜ್ಯಗಳಲ್ಲೂ ಸಮಾನವಾಗಿ ಶೇಕಡಾ 50 ರಷ್ಟು ಸೀಟುಗಳನ್ನು ಹೆಚ್ಚಿಸುವ ತಳಹದಿಯ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆದರೆ ಅದನ್ನು ವಿರೋಧಿಸಲು ಬಲವಾದ ಕಾರಣಗಳಿರುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ತಮ್ಮ ಪಕ್ಷವು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಮತ್ತು ಇಂಡಿಯಾ ಒಕ್ಕೂಟದ ಆಂತರಿಕ ಸಮಾಲೋಚನೆಯ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ತಾವು ಎನ್‌ಡಿಎ ಮೈತ್ರಿಕೂಟ ಸೇರುತ್ತಿದ್ದಾರೆಂಬ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಮಾಧ್ಯಮಗಳು ಕಳೆದ 12 ವರ್ಷಗಳಿಂದಲೂ ನಾನು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ಸೂಚನೆಗಳನ್ನು ನೀಡುತ್ತಲೇ ಇವೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಸುಪ್ರಿಯಾ ಸುಳೆ ಎಕ್ಸ್ ಪೋಸ್ಟ್‌!...

ಕ್ಷೇತ್ರ ಪುನರ್ವಿಂಗಡಣೆಯ ವಿಷಯದಲ್ಲಿ ಎನ್​ಸಿಪಿ ನಿಲುವಿನ ಕುರಿತು ಇತ್ತೀಚೆಗೆ ಮಾಧ್ಯಮಗಳ ಕೆಲವು ವಿಭಾಗಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಕೇವಲ ಊಹಾಪೋಹಗಳಿಂದ ಕೂಡಿವೆ. ಈ ವಿಷಯದ ಕುರಿತು ನಾನಾಗಲಿ ಅಥವಾ ನಮ್ಮ ಪಕ್ಷವಾಗಲಿ ಯಾವುದೇ ಮಾಧ್ಯಮ ಸಂಸ್ಥೆಯೊಂದಿಗೆ ಅಧಿಕೃತವಾಗಿ ಚರ್ಚಿಸಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಸಂವಿಧಾನಾತ್ಮಕ ಪ್ರಾಮುಖ್ಯತೆಯ ಪ್ರತಿಯೊಂದು ವಿಷಯದಂತೆಯೇ, ನಮ್ಮ ಪಕ್ಷದ ನಿಲುವನ್ನು ಇಂಡಿಯಾ ಮೈತ್ರಿಕೂಟದೊಂದಿಗೆ ಚರ್ಚಿಸಿದ ನಂತರವೇ ನಿರ್ಧರಿಸಲಾಗುತ್ತದೆ ಎಂದಿದ್ದರು.
ಕೇಂದ್ರ ಸರ್ಕಾರವು ಪರಿಷ್ಕೃತ ಕ್ಷೇತ್ರ ಮರುವಿಂಗಡಣೆ ಶಾಸನವನ್ನು ಸಂಸತ್ತಿನಲ್ಲಿ ಅಧಿಕೃತವಾಗಿ ಮಂಡಿಸುವವರೆಗೆ ಯಾವುದೇ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಹೇಳಿದ್ದಾರೆ.

ವದಂತಿಗಳಿಗೆ ರೆಕ್ಕೆಪುಕ್ಕ ಬರಲು ಕಾರಣವಾದ ಆ ರಹಸ್ಯ ಸಭೆಗಳು

ಮುಂಬೈನಲ್ಲಿ ಬುಧವಾರ ತಡರಾತ್ರಿ ನಡೆದ ಕೆಲವು ಪ್ರಮುಖ ಸಭೆಗಳ ನಂತರ ಈ ರಾಜಕೀಯ ವದಂತಿಗಳು ತೀವ್ರ ವೇಗವನ್ನು ಪಡೆದುಕೊಂಡಿವೆ. ಎನ್‌ಸಿಪಿ ನಾಯಕ ಜಯಂತ್ ಪಾಟೀಲ್, ಆಡಳಿತ ಪಕ್ಷದ ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ತಡರಾತ್ರಿಯ ಸಭೆಗಳು ನಡೆದಿದ್ದವು. ಆದರೆ, ಈ ಸಭೆಗಳು ಕೇವಲ ಸ್ಥಳೀಯ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ್ದವೇ ಹೊರತು ಯಾವುದೇ ರಾಜಕೀಯ ಮರುಜೋಡಣೆಯ ಭಾಗವಾಗಿರಲಿಲ್ಲ ಎಂದು ಎನ್‌ಸಿಪಿ(ಎಸ್‌ಪಿ) ಸಮರ್ಥಿಸಿಕೊಂಡಿದೆ.
ಆದಾಗ್ಯೂ, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಯನ್ನು ಪಾಸ್ ಮಾಡಲು ಕೇಂದ್ರ ಸರ್ಕಾರಕ್ಕೆ ಸಂಸತ್ತಿನಲ್ಲಿ ಅಗತ್ಯ ಸಂಖ್ಯಾಬಲದ ಅಗತ್ಯವಿದ್ದು, ಇದಕ್ಕಾಗಿ ಶರದ್ ಪವಾರ್ ಬಣವನ್ನು ತನ್ನತ್ತ ಸೆಳೆದುಕೊಳ್ಳಲು ಎನ್‌ಡಿಎ ತೆರೆಮರೆಯ ಕಸರತ್ತು ನಡೆಸುತ್ತಿದೆ ಎಂಬ ರಾಜಕೀಯ ಚರ್ಚೆಗಳು ಸದ್ಯ ದಟ್ಟವಾಗಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net