ಕಮಲ ಪಾಳಯದ ಇನ್‌ಸೈಡ್ ಗೇಮ್!...ಎನ್‌ಸಿಪಿ ಮರುಜೋಡಣೆಯ ಹಿಂದೆ ಅಡಗಿದೆ ಬಿಜೆಪಿಯ ದೀರ್ಘಾವಧಿ ರಾಜಕೀಯ ಲೆಕ್ಕಾಚಾರ | NCP Reunification

NCP Reunification | ಎನ್‌ಸಿಪಿ ಮರುಜೋಡಣೆಯ ಹಿಂದೆ ಅಡಗಿದೆ ಬಿಜೆಪಿಯ ದೀರ್ಘಾವಧಿ ರಾಜಕೀಯ ಲೆಕ್ಕಾಚಾರ
NCP Reunification | ಎನ್‌ಸಿಪಿ ಮರುಜೋಡಣೆಯ ಹಿಂದೆ ಅಡಗಿದೆ ಬಿಜೆಪಿಯ ದೀರ್ಘಾವಧಿ ರಾಜಕೀಯ ಲೆಕ್ಕಾಚಾರ
Published on
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗುತ್ತಿದ್ದು, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಎರಡು ಬಣಗಳು ಮತ್ತೆ ಒಂದಾಗಿ(NCP Reunification), ತದನಂತರ ಎನ್‌ಡಿಎ ಮೈತ್ರಿಕೂಟದ ಜೊತೆ ಕೈಜೋಡಿಸುವ ಚರ್ಚೆಗಳು ವೇಗ ಪಡೆದುಕೊಂಡಿವೆ
2023 ರ ಜುಲೈನಲ್ಲಿ ಅಜಿತ್ ಪವಾರ್ ಅನೇಕ ಶಾಸಕರೊಂದಿಗೆ ಶರದ್ ಪವಾರ್ ನೇತೃತ್ವದ ಮೂಲ ಪಕ್ಷದಿಂದ ಹೊರಬಂದು, ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರದೊಂದಿಗೆ ಕೈಜೋಡಿಸಿದಾಗ ಎನ್‌ಸಿಪಿ ಅಧಿಕೃತವಾಗಿ ಇಭ್ಭಾಗವಾಗಿತ್ತು. ತದನಂತರ ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನೇ ಅಸಲಿ ಎನ್‌ಸಿಪಿ ಎಂದು ಗುರುತಿಸಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಿತ್ತು.
ಸದ್ಯ ಶರದ್ ಪವಾರ್ ನೇತೃತ್ವದ ಬಣವು ಎನ್‌ಸಿಪಿ (ಶರದ್‌ಚಂದ್ರ ಪವಾರ್)ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದ್ದು, ಉಭಯ ಬಣಗಳು ಪ್ರತ್ಯೇಕವಾಗಿಯೇ ರಾಜಕೀಯ ನಡೆಸುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಇವರ ನಡುವೆ ಮತ್ತೆ ಒಂದಾಗುವ ಮಾತುಕತೆಗಳು ದಟ್ಟವಾಗಿವೆ.

ಬಿಜೆಪಿಯ ಷರತ್ತೇನು..?

ಈ ಇಡೀ ಬೆಳವಣಿಗೆಯ ಹಿಂದೆ ಬಿಜೆಪಿ ಇದೆ ಎನ್ನಲಾಗಿದ್ದು, ಶರದ್ ಪವಾರ್ ಅವರನ್ನಾಗಲಿ ಅಥವಾ ಅವರ ಪ್ರಮುಖ ನಾಯಕರನ್ನಾಗಲಿ ವೈಯಕ್ತಿಕ ನೆಲೆಯಲ್ಲೋ ಅಥವಾ ಪ್ರತ್ಯೇಕ ಗುಂಪಾಗಿಯೋ ಎನ್‌ಡಿಎ ಮೈತ್ರಿಕೂಟದೊಳಗೆ ಸೇರಿಸಿಕೊಳ್ಳಲು ಕೇಸರಿ ಪಾಳಯಕ್ಕೆ ಯಾವುದೇ ಆಸಕ್ತಿಯಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಶರದ್ ಪವಾರ್ ಬಣವು ಎನ್‌ಡಿಎ ಜೊತೆ ಅಧಿಕೃತವಾಗಿ ಮೈತ್ರಿ ಮಾಡಿಕೊಳ್ಳಬೇಕಾದರೆ, ಸದ್ಯ ಇಬ್ಭಾಗವಾಗಿರುವ ಎನ್‌ಸಿಪಿಯ ಎರಡು ಬಣಗಳು ಮೊದಲು ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ಬಗೆಹರಿಸಿಕೊಂಡು ಒಂದೇ ಪಕ್ಷವಾಗಿ ವಿಲೀನಗೊಳ್ಳಬೇಕು ಎಂಬುದು ಬಿಜೆಪಿಯ ಮುಖ್ಯ ಷರತ್ತಾಗಿದೆ. ಇಡೀ ಎನ್‌ಸಿಪಿ ಒಂದಾಗಿ ಮೈತ್ರಿಕೂಟಕ್ಕೆ ಬಂದರೆ ಮಾತ್ರ ಅದಕ್ಕೆ ಮೈತ್ರಿಯ ಮಾನ್ಯತೆ ಸಿಗಲಿದೆ.

ಕೇಂದ್ರ ಸಚಿವರಾಗ್ತಾರಾ ಅಜಿತ್​ ಪುತ್ರ..?

ರಾಜ್ಯದಲ್ಲಿ ಈಗಾಗಲೇ ಆಡಳಿತ ಹಂಚಿಕೊಂಡಿರುವ ಅಜಿತ್​ ಪವಾರ್​ ಬಣವು ಕೇಂದ್ರ ರಾಜಕಾರಣದಲ್ಲೂ ತನ್ನ ಹಕ್ಕನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪಾರ್ಥ್ ಪವಾರ್​ರನ್ನು ಮುಂಬರುವ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಚಿವರನ್ನಾಗಿ ಮಾಡಬೇಕು ಎಂಬುದು ಪಕ್ಷದ ಕಾರ್ಯಕರ್ತರ ಆಶಯವಾಗಿದೆ ಎಂದು ಎನ್‌ಸಿಪಿ ವಕ್ತಾರ ಉಮೇಶ್ ಪಾಟೀಲ್ ತಿಳಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾಗಿ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯವನ್ನು ನಿರೀಕ್ಷಿಸುವುದು ಸಹಜ ಎಂದಿರುವ ಅವರು, ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದಕ್ಕೆ ಪಾರ್ಥ್ ಪವಾರ್ ಹಾಗೂ ಎನ್‌ಸಿಪಿ ಅಧ್ಯಕ್ಷೆಯಾಗಿರುವ ಸುನೇತ್ರಾ ಪವಾರ್ ಅವರ ಒಪ್ಪಿಗೆಯೂ ಮುಖ್ಯವಾಗಿರುತ್ತದೆ ಎಂದು ಹೇಳಿದ್ದಾರೆ. ಪಕ್ಷದೊಳಗೆ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳ ವದಂತಿಗಳು ಕೇಳಿಬರುತ್ತಿದ್ದರೂ, ಹಿರಿಯ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟ್ಕರೆ ಇವುಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಈ ಎಲ್ಲ ರಾಜಕೀಯ ಲೆಕ್ಕಾಚಾರಗಳು ಹಠಾತ್​ ವೇಗ ಪಡೆದುಕೊಳ್ಳಲು ಸಂಸತ್ತಿನ ಮುಂಗಾರು ಅಧಿವೇಶನ ಮತ್ತು ಅಲ್ಲಿ ಮಂಡನೆಯಾಗಲಿರುವ ಸಂವಿಧಾನದ 131ನೇ ತಿದ್ದುಪಡಿ ಮಸೂದೆಯೇ ಪ್ರಮುಖ ಕಾರಣವಾಗಿದೆ. ಕೇಂದ್ರ ಸರ್ಕಾರವು ಲೋಕಸಭೆಯ ಸೀಟುಗಳ ಸಂಖ್ಯೆಯನ್ನು 850 ಕ್ಕೆ ಹೆಚ್ಚಿಸುವ ಮತ್ತು ದೇಶಾದ್ಯಂತ ಕ್ಷೇತ್ರಗಳ ಪುನರ್ವಿಂಗಡಣೆಗೆ ಚಾಲನೆ ನೀಡುವ ಮಹತ್ವದ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಿದೆ.

ಹಾಸ್ಯ ಚಟಾಕಿ ಹಾರಿಸಿದ ಸಂಸದೆ ಸುಪ್ರಿಯಾ ಸುಳೆ

ಪ್ರಸ್ತುತ ಲೋಕಸಭೆಯಲ್ಲಿ 8 ಮತ್ತು ರಾಜ್ಯಸಭೆಯಲ್ಲಿ 1 ಸ್ಥಾನವನ್ನು ಹೊಂದಿರುವ ಶರದ್ ಪವಾರ್ ನೇತೃತ್ವದ ಬಣದ ಬೆಂಬಲ ಅಥವಾ ತಟಸ್ಥ ನಿಲುವು ಈ ಮಸೂದೆಯನ್ನು ಸುಲಭವಾಗಿ ಪಾಸ್ ಮಾಡಲು ಸರ್ಕಾರಕ್ಕೆ ಅತ್ಯಂತ ನಿರ್ಣಾಯಕವಾಗಬಹುದು. ಈ ಬಗ್ಗೆ ಮಾತನಾಡಿರುವ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, ಒಂದು ವೇಳೆ ದೇಶದ ಎಲ್ಲಾ ರಾಜ್ಯಗಳಲ್ಲೂ ಸಮಾನವಾಗಿ ಶೇಕಡಾ 50 ರಷ್ಟು ಸೀಟುಗಳನ್ನು ಹೆಚ್ಚಿಸುವ ತಳಹದಿಯ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆದರೆ ಅದನ್ನು ವಿರೋಧಿಸಲು ಬಲವಾದ ಕಾರಣಗಳಿರುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ತಮ್ಮ ಪಕ್ಷವು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಮತ್ತು ಇಂಡಿಯಾ ಒಕ್ಕೂಟದ ಆಂತರಿಕ ಸಮಾಲೋಚನೆಯ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ತಾವು ಎನ್‌ಡಿಎ ಮೈತ್ರಿಕೂಟ ಸೇರುತ್ತಿದ್ದಾರೆಂಬ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಮಾಧ್ಯಮಗಳು ಕಳೆದ 12 ವರ್ಷಗಳಿಂದಲೂ ನಾನು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ಸೂಚನೆಗಳನ್ನು ನೀಡುತ್ತಲೇ ಇವೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಶರದ್​​ ಬಣದ ನಿರಂತರ ಭೇಟಿ!..

ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಳ್ಳಲು ಮತ್ತೊಂದು ಪ್ರಮುಖ ಕಾರಣವೆಂದರೆ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರ ಅಧಿಕೃತ ನಿವಾಸದಲ್ಲಿ ಉಭಯ ಎನ್‌ಸಿಪಿ ಬಣಗಳ ನಾಯಕರ ನಡುವೆ ನಡೆದ ತಡರಾತ್ರಿಯ ರಹಸ್ಯ ಸಭೆ. ಆದರೆ ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ತಂತ್ರವಿಲ್ಲ, ಬದಲಿಗೆ ಕೇವಲ ಸ್ಥಳೀಯ ಆಡಳಿತಾತ್ಮಕ ವಿಷಯಗಳ ಚರ್ಚೆಯಷ್ಟೇ ಇತ್ತು ಎಂದು ನಾಯಕರು ಸಮರ್ಥಿಸಿಕೊಂಡಿದ್ದಾರೆ. ಹಿರಿಯ ಎನ್‌ಸಿಪಿ(ಎಸ್‌ಪಿ) ನಾಯಕ ಜಯಂತ್ ಪಾಟೀಲ್ ತಾವು ಸಾಂಗ್ಲಿ ಜಿಲ್ಲೆಯ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಕೆಲಸದ ನಿಮಿತ್ತ ಫಡ್ನವೀಸ್ ಅವರನ್ನು ಭೇಟಿಯಾಗಿದ್ದಾಗಿ ಖಚಿತಪಡಿಸಿದ್ದಾರೆ.
ಜಯಂತ್ ಪಾಟೀಲ್ ನಿನ್ನೆ ಡಿಸಿಎಂ ಏಕನಾಥ್ ಶಿಂಧೆಯನ್ನೂ ಭೇಟಿಯಾಗಿ, ಉರುನ್-ಇಸ್ಲಾಂಪುರ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಆನಂದರಾವ್ ಮಲ್ಗುಂಡೆ ಮತ್ತು ಕೌನ್ಸಿಲರ್ ಸುನಿಲ್ ಮಲ್ಗುಂಡೆ ಮೇಲಿರುವ ಪ್ರಕರಣಕ್ಕೆ ಸಂಬಂಧಿಸಿದ ಅನರ್ಹತೆ ವಿಷಯದಲ್ಲಿ ಮಧ್ಯಸ್ಥಿಕೆವಹಿಸುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಕಳೆದ ವಾರ ಶರದ್ ಪವಾರ್ ಅವರೇ ಸ್ವತಃ ತಮ್ಮ ಶಾಸಕರ ಸಭೆಯನ್ನು ಶಿಂಧೆ ಕಚೇರಿಯಲ್ಲಿ ನಡೆಸಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಆ ಸ್ಥಳದ ಆಯ್ಕೆ ಕೇವಲ ಕಾಕತಾಳೀಯ ಅಷ್ಟೇ ಎಂದು ಸುಪ್ರಿಯಾ ಸುಳೆ ಸ್ಪಷ್ಟನೆ ನೀಡಿದ್ದಾರೆ. ತಳಮಟ್ಟದಲ್ಲಿ ಸಭೆಗಳು ಮತ್ತು ಆಡಳಿತಾತ್ಮಕ ಭೇಟಿಗಳು ನಿರಂತರವಾಗಿ ನಡೆಯುತ್ತಿರುವುದು ಮಹಾರಾಷ್ಟ್ರ ರಾಜಕಾರಣದ ಮುಂದಿನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net