

ತುಮಕೂರು: ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ನಂಬಿಸಲು ಯತ್ನಿಸಿದ ಮಗಳೇ,ಆಸ್ತಿ ಮತ್ತು ಹಣದ ಆಸೆಗಾಗಿ ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದಿರುವ(killed her own mother)ಬೆಚ್ಚಿಬೀಳಿಸುವಘಟನೆ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದಲ್ಲಿ ನಡೆದಿದೆ.
ಚಿತೆ ಏರುವ ಮುನ್ನ ಬಯಲಾದ ರಹಸ್ಯ
52 ವರ್ಷದ ಬಿ.ಪುಷ್ಪಾವತಿ ಎಂಬುವವರ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆಗಳೂ ನಡೆದಿದ್ದವು.ಅಣ್ಣ ಅನಿಲ್ ಕುಮಾರ್ ಅವರು ತಂಗಿಯ ಮುಖವನ್ನು ಕೊನೆಯ ಬಾರಿ ನೋಡಲು ಹೋದಾಗ,ಮೂಗಿನ ಬಳಿ ರಕ್ತದ ಕಲೆಗಳು ಕಾಣಿಸಿಕೊಂಡಿವೆ."ಹೃದಯಾಘಾತವಾದರೆ ರಕ್ತ ಏಕೆ ಬರಬೇಕು?"ಎಂಬ ಅಣ್ಣನ ಸಣ್ಣ ಅನುಮಾನ,ಅಂತಿಮವಾಗಿ ಕೊಲೆಯ ರಹಸ್ಯವನ್ನು ಹೊರಹಾಕಿದೆ.
ಸಂಬಂಧಿಕರು'ಸೊಳ್ಳೆ ಕಚ್ಚಿರಬಹುದು'ಎಂದು ಹಾರಿಕೆ ಉತ್ತರ ನೀಡಿದರೂ,ಅನುಮಾನಗೊಂಡ ಅನಿಲ್ ಕುಮಾರ್ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.ಚಿತೆ ಏರಬೇಕಿದ್ದ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ,ಪುಷ್ಪಾವತಿಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂಬುದು ದೃಢಪಟ್ಟಿದೆ.
40 ಲಕ್ಷ ರೂಪಾಯಿಗಾಗಿ ಹೆತ್ತವಳ ಬಲಿ!
ಪೊಲೀಸರ ತನಿಖೆಯ ವೇಳೆ ಮಗಳು ಸುಚಿತ್ರಾ ಸುರೇಶ್(30) ಮತ್ತು ಆಕೆಯ ಪತಿ ಸುರೇಶ್ ಕುಮಾರ್ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.ಇತ್ತೀಚೆಗಷ್ಟೇ ಪುಷ್ಪಾವತಿಯವರು ತಮ್ಮ ಆಸ್ತಿಯೊಂದನ್ನು ಮಾರಿ 40 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.ಈ ಹಣದ ಮೇಲಿದ್ದ ಕಣ್ಣು,ಮಗಳನ್ನು ಕೊಲೆಗಾರ್ತಿಯನ್ನಾಗಿ ಮಾಡಿದೆ.ಫೆಬ್ರವರಿ 11 ಮತ್ತು 12ರ ನಡುವಿನ ರಾತ್ರಿ,ಪುಷ್ಪಾವತಿ ಗಾಢ ನಿದ್ರೆಯಲ್ಲಿದ್ದಾಗ ದಂಪತಿಗಳು ದಿಂಬಿನಿಂದ ಉಸಿರುಗಟ್ಟಿಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದುಪೊಲೀಸರು ತಿಳಿಸಿದ್ದಾರೆ.