ಹಿಂದೂ ಮಹಾಸಾಗಾರದಲ್ಲಿ ಇರಾನ್ ನೌಕೆ ಪತನ; ಸಂಘರ್ಷ ನಮ್ಮ ಹಿತ್ತಲನ್ನು ತಲುಪಿದೆ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ | Rahul Gandhi

ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ
ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ
Published on
ನವದೆಹಲಿ: ಇರಾನ್ ಯುದ್ಧನೌಕೆ ಐರಿಸ್ ದೇನಾವನ್ನು ಅಮೆರಿಕಾದ ಜಲಾಂತರ್ಗಾಮಿ ನೌಕೆ ಹಿಂದೂ ಮಹಾಸಾಗಾರದಲ್ಲಿ ಹೊಡೆದುರುಳಿಸಿದ ಬಳಿಕ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಭಾರತದ ಇಂಧನ ಬಿಕ್ಕಟ್ಟಿಗೆ ಭಾರಿ ತೊಂದರೆ ಮಾಡುತ್ತದೆ ಎಂದು ಎಚ್ಚರಿಸಿರುವ ಅವರು, ಸಂಘರ್ಷವು ನಮ್ಮ ಹಿತ್ತಲನ್ನು ತಲುಪಿದೆ. ಆದರೆ ಪ್ರಧಾನಿ ಈ ಬಗ್ಗೆ ಏನನ್ನೂ ಹೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಗತ್ತು ಪ್ರಕ್ಷುಬ್ಧ ಹಂತವನ್ನು ಪ್ರವೇಶಿಸುತ್ತಿದೆ. ಬಿರುಗಾಳಿಯ ಸಮುದ್ರಗಳು ಮುಂದಿವೆ. ಭಾರತದ ತೈಲ ಸರಬರಾಜುಗಳು ಅಪಾಯದಲ್ಲಿವೆ, ನಮ್ಮ ಆಮದುಗಳಲ್ಲಿ 40% ಕ್ಕಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತವೆ. ಎಲ್‌ಪಿಜಿ ಮತ್ತು ಎಲ್‌ಎನ್‌ಜಿಗೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ.
ಸಂಘರ್ಷವು ನಮ್ಮ ಹಿತ್ತಲನ್ನು ತಲುಪಿದೆ. ಇರಾನ್ ಯುದ್ಧನೌಕೆ ಹಿಂದೂ ಮಹಾಸಾಗರದಲ್ಲಿ ಮುಳುಗಿದೆ. ಆದರೂ ಪ್ರಧಾನಿ ಏನನ್ನೂ ಹೇಳಿಲ್ಲ. ಇಂತಹ ಕ್ಷಣದಲ್ಲಿ, ನಮಗೆ ಚಕ್ರವನ್ನು ಮುನ್ನಡೆಸುವ ಸ್ಥಿರವಾದ ಕೈ ಬೇಕು. ಆದರೆ ಭಾರತವು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನು ಬಿಟ್ಟುಕೊಟ್ಟ ರಾಜಿ ಮಾಡಿಕೊಂಡ ಪ್ರಧಾನಿಯನ್ನು ಹೊಂದಿದೆ ಎಂದು ಕಿಡಿಕಾರಿದ್ದಾರೆ.
ಬುಧವಾರ ಮುಂಜಾನೆ ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಲಾದ ಮಾರ್ಕ್ -48 ಟಾರ್ಪಿಡೊವನ್ನು ಬಳಸಿಕೊಂಡು ಅಮೆರಿಕ ನೌಕಾಪಡೆಯು ಹಿಂದೂ ಮಹಾಸಾಗರದಲ್ಲಿ ಇರಾನಿನ ಮೌಡ್ಜ್-ಕ್ಲಾಸ್ ಫ್ರಿಗೇಟ್ ಐರಿಸ್ ದೇನಾವನ್ನು ಹೊಡೆದುರಳಿಸಿದ್ದು, ಸುಮಾರು 80ಕ್ಕೂ ಹೆಚ್ಚು ಇರಾನಿ ನೌಕಪಡೆ ಸೈನಿಕರು ಸೇರಿ ಪ್ರಜೆಗಳು ಮೃತಪಟ್ಟಿದ್ದಾರೆ.
ಇನ್ನೂ ಈ ದಾಳಿಯನ್ನು ಖಂಡಿಸಿರುವ ಇರಾನ್, ಘಟನೆಯನ್ನು ಸಮುದ್ರದಲ್ಲಿ ನಡೆದ ದೌರ್ಜನ್ಯ ಎಂದು ಕರೆದಿದೆ. ಇದಕ್ಕೆ ಅಮೆರಿಕ ತಕ್ಕ ಪ್ರತಿಕ್ರಿಯೆಯನ್ನು ಎದುರಿಸುತ್ತದೆ ಎಂದು ಎಚ್ಚರಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net