ಭೂಪೇನ್ ಬೋರಾ ಬಳಿಕ ಅಸ್ಸಾಂನಲ್ಲಿ ಕಾಂಗ್ರೆಸ್​​ಗೆ ಮತ್ತೊಂದು ಶಾಕ್; ಬಿಜೆಪಿ ಸೇರ್ಪಡೆಯಾದ ಮೂವರು ಕಾಂಗ್ರೆಸ್ ಶಾಸಕರು | Congress

ಮೂವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ
ಮೂವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ
Published on
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಂತೆ ಭೂಪೇನ್ ಬೋರಾ ಬಳಿಕ ಇಂದು(ಮಾ. 05) ಕಾಂಗ್ರೆಸ್​ಗೆ(Congress) ಮತ್ತೊಂದು ಹಿನ್ನಡೆ ಸಂಭವಿಸಿದ್ದು, ಹಾಲಿ ಮೂವರು ಕಾಂಗ್ರೆಸ್ ಶಾಸಕರು ಆಡಳಿತರೂಢ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಫೆ. 22ರಂದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿ ಸೇರ್ಪಡೆ ಬಳಿಕ ಇಂದು, ಕಾಂಗ್ರೆಸ್ ಶಾಸಕರಾದ ಕಮಲಾಖ್ಯ ದೇ ಪುರಕಾಯಸ್ಥ, ಸಶಿಕಾಂತ ದಾಸ್ ಹಾಗೂ ಬಸಂತ ದಾಸ್ ಅವರು ಇತರ ಇಬ್ಬರು ನಾಯಕರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ ಅವರು ಕೇಂದ್ರ ಸಚಿವೆ ಪಬಿತ್ರ ಮಾರ್ಗರಿಟಾ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.
ಈ ಕುರಿತು ಮಾತನಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಇಂದು ಬಿಜೆಪಿ ಸೇರ್ಪಡೆಯಾಗಿರುವ ಶಾಸಕರು ಕಳೆದ ಎರಡು ವರ್ಷಗಳಿಂದ ವಿಧಾನಸಭೆಯಲ್ಲಿ ತಮ್ಮ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ. ಇಂದು ಅವರು ಔಪಚಾರಿಕವಾಗಿ ಪಕ್ಷಕ್ಕೆ ಸೇರಿದ್ದಾರೆ, ನಾನು ಅವರನ್ನು ಬಿಜೆಪಿಗೆ ಸ್ವಾಗತಿಸುತ್ತೇನೆ ಎಂದಿದ್ದಾರೆ.
ಸೇರ್ಪಡೆಯಾಗಿರುವ ಹಾಲಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆ ಚರ್ಚಿಸಿಲ್ಲ, ಆದರೆ ಪಕ್ಷದ ರಾಜ್ಯ ಚುನಾವಣಾ ಸಮಿತಿ ಅದನ್ನು ಪರಿಗಣಿಸುತ್ತದೆ. ಅವರ ಹೆಸರುಗಳು ಸಮಿತಿಯಲ್ಲಿ ಇರುತ್ತವೆ, ಆದರೆ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಂಸದೀಯ ಮಂಡಳಿಯು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಚುನಾವಣಾ ಟಿಕೆಟ್‌ಗಾಗಿ ಬಿಜೆಪಿಗೆ ಸೇರಬಾರದು ಎಂದು ಈಗಾಗಲೇ ಅವರಿಗೆ ತಿಳಿಸಲಾಗಿದೆ. ಅವರು ಬೇಷರತ್ತಾಗಿ ಬಿಜೆಪಿಗೆ ಸೇರಿದ್ದಾರೆ. ಮತ್ತು ಹೊಸ ಅಥವಾ ಹಳೆಯ ಸದಸ್ಯರು ಎಂಬುದಿಲ್ಲ. ಪಕ್ಷದೊಳಗೆ ನಾವೆಲ್ಲರೂ ಒಂದೇ. ಆದರೆ ಅದೇ ಸಮಯದಲ್ಲಿ ಟಿಕೆಟ್ ಪಡೆಯಲು ಯಾವುದೇ ಅಡ್ಡಿಯಿಲ್ಲ. ಮತ್ತು ಅವರ ನಿರೀಕ್ಷೆಗಳ ಆಧಾರದ ಮೇಲೆ ಅದನ್ನು ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ವಿರೋಧ ಪಕ್ಷ ಕಾಂಗ್ರೆಸ್ ತನ್ನ 42 ಸ್ಥಾನಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಎಜಿಪಿ, ಬಿಪಿಎಫ್ ಹಾಗೂ ಯುಪಿಪಿಎಲ್ ಇನ್ನೂ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿಲ್ಲ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net