ವಿಶ್ವಕಪ್‌ನಲ್ಲಿ ಭಾರತದ ವಿಜಯದುಂಧುಬಿ: ಪಾಕ್ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ | India win

ವಿಶ್ವಕಪ್‌ನಲ್ಲಿ ಭಾರತದ ವಿಜಯದುಂಧುಬಿ: ಪಾಕ್ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ
ವಿಶ್ವಕಪ್‌ನಲ್ಲಿ ಭಾರತದ ವಿಜಯದುಂಧುಬಿ: ಪಾಕ್ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ
Published on
ಕೊಲಂಬೊ: 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತವು(India win) ಪಾಕಿಸ್ತಾನವನ್ನು 61 ರನ್‌ಗಳ ಭಾರಿ ಅಂತರದಿಂದ ಮಣಿಸಿದೆ. ಶ್ರೀಲಂಕಾದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಅಧಿಪತ್ಯವನ್ನು ಮುಂದುವರಿಸಿದ್ದು, ವಿಶ್ವಕಪ್ ಇತಿಹಾಸದಲ್ಲಿ ಬದ್ಧ ವೈರಿಯ ವಿರುದ್ಧ ಮತ್ತೊಂದು ಐತಿಹಾಸಿಕ ಜಯ ದಾಖಲಿಸಿದೆ.

ಇಶಾನ್ ಕಿಶನ್ ಆರ್ಭಟ: ಭಾರತಕ್ಕೆ ಬೃಹತ್ ಮೊತ್ತ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಅಭಿಷೇಕ್ ಶರ್ಮಾ (0) ಮೊದಲ ಓವರ್‌ನಲ್ಲೇ ಪೆವಿಲಿಯನ್ ಸೇರಿದರು. ಆದರೆ ನಂತರ ಬಂದ ಇಶಾನ್ ಕಿಶನ್ ಪಾಕ್ ಬೌಲರ್‌ಗಳ ಮೇಲೆ ಸಿಡಿಲಬ್ಬರದ ದಾಳಿ ನಡೆಸಿದರು. ಕೇವಲ 40 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 77 ರನ್ ಸಿಡಿಸಿದ ಕಿಶನ್, ಭಾರತದ ಮೊತ್ತವನ್ನು ಹೆಚ್ಚಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ (32) ಮತ್ತು ಶಿವಂ ದುಬೆ (27) ಉಪಯುಕ್ತ ಕೊಡುಗೆ ನೀಡಿದ್ದರಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 175/7 ರನ್ ಕಲೆಹಾಕಿತು.

ಭಾರತೀಯ ಬೌಲರ್‌ಗಳ ಮಾರಕ ದಾಳಿ

176 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಭಾರತದ ವೇಗಿಗಳು ಆರಂಭದಲ್ಲೇ ನಡುಕ ಹುಟ್ಟಿಸಿದರು. ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಆರಂಭಿಕ ಓವರ್‌ಗಳಲ್ಲೇ ವಿಕೆಟ್ ಪಡೆಯುವ ಮೂಲಕ ಪಾಕ್ ಬ್ಯಾಟರ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ (5) ಅಕ್ಷರ್ ಪಟೇಲ್ ಸ್ಪಿನ್ ಬಲೆಗೆ ಬಿದ್ದರು.
ಮಧ್ಯಮ ಓವರ್‌ಗಳಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಸ್ಪಿನ್ ಮೋಡಿ ಮಾಡಿದರು. ಪಾಕ್ ಪರ ಉಸ್ಮಾನ್ ಖಾನ್ (44) ಏಕಾಂಗಿ ಹೋರಾಟ ನಡೆಸಿದರೂ, ಉಳಿದವರಿಂದ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ 18 ಓವರ್‌ಗಳಲ್ಲಿ 114 ರನ್‌ಗಳಿಗೆ ಸರ್ವಪತನ ಕಂಡಿತು. ವರುಣ್ ಚಕ್ರವರ್ತಿ 2 ವಿಕೆಟ್ ಪಡೆದು ಮಿಂಚಿದರೆ, ಅಕ್ಷರ್ ಮತ್ತು ಬುಮ್ರಾ ತಲಾ 2 ವಿಕೆಟ್ ಕಬಳಿಸಿದರು,(ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net