ಕೊಲೊಂಬೊ: ಟಿ20 ವಿಶ್ವಕಪ್‌ನ ಮಹಾ ಕಾದಾಟದಲ್ಲಿ ಭಾರತೀಯ ಆರಂಭಿಕ ಆಟಗಾರ ಇಶಾನ್ ಕಿಶನ್(Ishan Kishan) ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆದಿದ್ದಾರೆ. ಅಭಿಷೇಕ್ ಶರ್ಮಾ (0) ಆರಂಭದಲ್ಲೇ ವಿಕೆಟ್ ಒಪ್ಪಿಸಿ ಆಘಾತ ನೀಡಿದರೂ, ಕಿಶನ್ ಮಾತ್ರ ಎದೆಗುಂದದೆ ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದರು.
ಪಾಕ್ ಬೌಲರ್ ಕಾಡಿದ ಇಶಾನ್ ಕಿಶನ್, ಕೇವಲ 40 ಎಸೆತಗಳಲ್ಲಿ 77 ರನ್ ಸಿಡಿಸುವ ಮೂಲಕ ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟು ಅಂತಿಮವಾಗಿ ಸೈಮ್ ಅಯೂಬ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.
ವೇಗದ ಅರ್ಧಶತಕ
ಕಿಶನ್ ಕೇವಲ 27 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಇದು ಭಾರತ-ಪಾಕ್ ಟಿ20 ಕಾದಾಟಗಳ ಇತಿಹಾಸದಲ್ಲೇ ಮೂರನೇ ಅತ್ಯಂತ ವೇಗದ ಫಿಫ್ಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಬೌಂಡರಿಗಳ ಸುರಿಮಳೆ: ಕಿಶನ್ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಮತ್ತು 3 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.
ಇಶಾನ್ ಕಿಶನ್ ಪವರ್‌ಪ್ಲೇ ಅವಧಿಯಲ್ಲಿ ಚಚ್ಚಿದ 42 ರನ್, ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿ ಬ್ಯಾಟರ್ ಒಬ್ಬರು ಗಳಿಸಿದ ಗರಿಷ್ಠ ರನ್ ಎಂಬ ದಾಖಲೆ ನಿರ್ಮಿಸಿದೆ. ಈ ಹಿಂದೆ ಶುಬ್ಮನ್ ಗಿಲ್ (35 ರನ್) ಹೆಸರಲ್ಲಿದ್ದ ದಾಖಲೆಯನ್ನು ಕಿಶನ್ ಅಳಿಸಿಹಾಕಿದ್ದಾರೆ.
ವಿವಾದ ಮತ್ತು ಗಾಯದ ಆತಂಕ
ಪಂದ್ಯದ ಮಧ್ಯೆ ರಿವರ್ಸ್ ಸ್ವೀಪ್ ಹೊಡೆಯಲು ಹೋಗಿ ಇಶಾನ್ ಕಿಶನ್ ಸ್ಲಿಪ್ ಆಗಿ ಕಾಲು ನೋವು ಅನುಭವಿಸಿದರು. ಕೆಲಕಾಲ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದರು. ನೋವಿನ ನಡುವೆಯೂ ಆಟ ಮುಂದುವರಿಸಿದ ಅವರು ಸೈಮ್ ಅಯೂಬ್ ಎಸೆದ ಚೆಂಡನ್ನು ಅರಿಯುವಲ್ಲಿ ವಿಫಲರಾಗಿ ವಿಕೆಟ್ ಒಪ್ಪಿಸಿದರು.
ಪ್ರಸ್ತುತ ಕ್ರೀಡಾಂಗಣದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ನಡೆಸುತ್ತಿದ್ದು, ಭಾರತ ಬೃಹತ್ ಮೊತ್ತದತ್ತ ಹೆಜ್ಜೆ ಹಾಕುತ್ತಿದೆ,(ಏಜೆನ್ಸೀಸ್).