ಕೆಪ್ಲರ್ ಸಂಸ್ಥೆಯ ವರದಿಯ ಪ್ರಕಾರ, ಮೇ ತಿಂಗಳಲ್ಲಿ ಭಾರತವು ವೆನೆಜುವೆಲಾದಿಂದ ಪ್ರತಿದಿನ ಸರಾಸರಿ 4.17 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಏಪ್ರಿಲ್‌ನಲ್ಲಿ ಈ ಪ್ರಮಾಣ ಪ್ರತಿದಿನ 2.83 ಲಕ್ಷ ಬ್ಯಾರೆಲ್ ಆಗಿತ್ತು. ವೆನೆಜುವೆಲಾದ ಕಚ್ಚಾ ತೈಲವು ಹೆವಿ ಮತ್ತು ಹೈ-ಸಲ್ಫರ್ (ಭಾರವಾದ ಮತ್ತು ಗಂಧಕದ ಪ್ರಮಾಣ ಹೆಚ್ಚಿರುವ) ಗುಣಲಕ್ಷಣ ಹೊಂದಿದ್ದು, ಇದು ಭಾರತಕ್ಕೆ ಅಗ್ಗದ ದರದಲ್ಲಿ ಸಿಗುತ್ತಿದೆ. ಗುಜರಾತ್‌ನಲ್ಲಿರುವ ರಿಲಯನ್ಸ್‌ನಂತಹ ಭಾರತೀಯ ರಿಫೈನರಿಗಳು ಇಂತಹ ತೈಲವನ್ನು ಸುಲಭವಾಗಿ ಸಂಸ್ಕರಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವುದರಿಂದ ಭಾರತ ಖರೀದಿ ಪ್ರಮಾಣವನ್ನು ಹೆಚ್ಚಿಸಿದೆ. ಮೇ ತಿಂಗಳಲ್ಲಿ ಭಾರತದ ಒಟ್ಟು ಕಚ್ಚಾ ತೈಲ ಆಮದು ಪ್ರತಿದಿನ 49 ಲಕ್ಷ ಬ್ಯಾರೆಲ್‌ಗೆ ಏರಿಕೆಯಾಗಿದೆ. ಇದು ಏಪ್ರಿಲ್‌ಗೆ ಹೋಲಿಸಿದರೆ ಶೇಕಡ 8ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಇದು ಫೆಬ್ರವರಿಯಲ್ಲಿ ದಾಖಲಾಗಿದ್ದ ಪ್ರತಿದಿನ 52 ಲಕ್ಷ ಬ್ಯಾರೆಲ್ ಆಮದಿಗಿಂತ ಕಡಿಮೆಯಾಗಿದೆ. ಇನ್ನೊಂದೆಡೆ ಇರಾಕ್‌ನಿಂದ ಪೂರೈಕೆ ಭಾಗಶಃ ಪುನರಾರಂಭಗೊಂಡಿದ್ದರೂ, ಫೆಬ್ರವರಿಗೆ ಹೋಲಿಸಿದರೆ ಅದು ತೀರಾ ಅತ್ಯಲ್ಪವಾಗಿದೆ. ಫೆಬ್ರವರಿಯಲ್ಲಿ ಇರಾಕ್‌ನಿಂದ ಪ್ರತಿದಿನ 9.69 ಲಕ್ಷ ಬ್ಯಾರೆಲ್ ತೈಲ ಬರುತ್ತಿತ್ತು, ಆದರೆ ಮೇ ತಿಂಗಳಲ್ಲಿ ಇದು ಕೇವಲ 51 ಸಾವಿರ ಬ್ಯಾರೆಲ್‌ಗೆ ಕುಸಿದಿದೆ.