10 ನಿಮಿಷದ ಟೆಸ್ಟ್​ಗೆ 23 ಸಾವಿರ ರೂ., ಔಷಧಿ ಬೆಲೆ 42 ಸಾವಿರ...ಮೆಡಿಕಲ್​ ಬಿಲ್​ ನೋಡಿ ಭಾರತೀಯ ವೃದ್ಧ ಶಾಕ್​! Medical Bill

10 ನಿಮಿಷದ ಟೆಸ್ಟ್​ಗೆ 23 ಸಾವಿರ ರೂ., ಔಷಧಿ ಬೆಲೆ 42 ಸಾವಿರ...ಮೆಡಿಕಲ್​ ಬಿಲ್​ ನೋಡಿ ಭಾರತೀಯ ವೃದ್ಧ ಶಾಕ್​! Medical Bill
10 ನಿಮಿಷದ ಟೆಸ್ಟ್​ಗೆ 23 ಸಾವಿರ ರೂ., ಔಷಧಿ ಬೆಲೆ 42 ಸಾವಿರ...ಮೆಡಿಕಲ್​ ಬಿಲ್​ ನೋಡಿ ಭಾರತೀಯ ವೃದ್ಧ ಶಾಕ್​! Medical Bill
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದಲ್ಲಿ ಜಸ್ಟ್ 1 ಚೆಕಪ್, ಮಾತ್ರೆಗೆ 65 ಸಾವಿರ ರೂ. ಬಿಲ್
  • ಸಿಯಾಟಲ್‌ನಲ್ಲಿ ನೆಲೆಸಿರುವ ಭಾರತೀಯ ವೃದ್ಧನ ಕಣ್ಣೀರಿನ ಕಥೆ
  • ವಿದೇಶಿ ಬದುಕಿನ ಅಸಲಿ ಮುಖವಾಡ ಕಳಚಿದ ಒಂದೇ ಒಂದು ಪೋಸ್ಟ್
  • ಭಾರತದಲ್ಲಿ ನಿಮಿಷಗಳಲ್ಲಿ ಸಿಗುವ ಔಷಧಿಗೆ ಅಮೆರಿಕದಲ್ಲಿ 12 ದಿನ ಕಾಯಬೇಕು
Medical Bill : ವಿದೇಶ ಅಂದ ತಕ್ಷಣ ಹೆಚ್ಚಿನವರ ಮನಸ್ಸಿನಲ್ಲಿ ಅದೊಂದು ಅದ್ಭುತ ಲೋಕ, ಅಲ್ಲಿನ ಜೀವನ ಮಟ್ಟ ಭಾರತಕ್ಕಿಂತ ಅತ್ಯಂತ ಸುಧಾರಿತ ಮತ್ತು ಸುಖಮಯ ಎಂಬ ಕನಸಿರುತ್ತದೆ. ಅದರಲ್ಲೂ ಅಮೆರಿಕದಂತಹ ಮುಂದುವರಿದ ದೇಶಗಳಿಗೆ ಹೋಗಿ ನೆಲೆಸಲು ಜನ ಹಾತೊರೆಯುತ್ತಾರೆ, ಆದರೆ ಇವೆಲ್ಲವೂ ಕೇವಲ ಮೇಲ್ನೋಟದ ಭ್ರಮೆಗಳು ಮಾತ್ರ ಎಂಬುದನ್ನು ಇತ್ತೀಚಿನ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಸಾಬೀತುಪಡಿಸಿದೆ.
ಹೌದು, ಅಮೆರಿಕದ ಸಿಯಾಟಲ್‌ನಲ್ಲಿ ನೆಲೆಸಿರುವ ಭಾರತದ ಹಿರಿಯ ನಾಗರಿಕರೊಬ್ಬರು ಹಂಚಿಕೊಂಡಿರುವ ಹೃದಯಸ್ಪರ್ಶಿ ಅನುಭವವು, ಭಾರತ ಮತ್ತು ಅಮೆರಿಕದ ವೈದ್ಯಕೀಯ ಸೌಲಭ್ಯ ಹಾಗೂ ಜೀವನ ಶೈಲಿಯ ನಡುವಿರುವ ಆಕಾಶ-ಭೂಮಿಯಷ್ಟಿರುವ ವ್ಯತ್ಯಾಸವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ವರದಿಯ ಪ್ರಕಾರ, ಈ ಹಿರಿಯ ನಾಗರಿಕನ ಪತ್ನಿ ಭಾರತದಲ್ಲಿದ್ದಾಗ ಅನಾರೋಗ್ಯಕ್ಕೆ ಒಳಗಾಗಿದ್ದರು. ಭಾರತದ ವೈದ್ಯರು ನೀಡಿದ್ದ ಔಷಧೋಪಚಾರದಿಂದ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ, ಅವರು ಅಮೆರಿಕಕ್ಕೆ ಬಂದ ಎರಡು ತಿಂಗಳ ನಂತರ ಭಾರತದಿಂದ ತಂದಿದ್ದ ಮಾತ್ರೆಗಳು ಮುಗಿದುಹೋಗಿದ್ದವು. ಅನಿವಾರ್ಯವಾಗಿ ಅವರು ಅಮೆರಿಕದಲ್ಲಿ ವೈದ್ಯರನ್ನು ಭೇಟಿ ಮಾಡಬೇಕಾಗಿ ಬಂತು. ಆದರೆ, ಅಲ್ಲಿ ಚಿಕಿತ್ಸೆಗಾಗಿ ಖರ್ಚಾದ ಮೊತ್ತವನ್ನು ಕಂಡು ವೃದ್ಧ ದಂಪತಿಗಳು ಸಂಪೂರ್ಣವಾಗಿ ಶಾಕ್‌ಗೆ ಒಳಗಾಗಿದ್ದಾರೆ. ಅಮೆರಿಕದಲ್ಲಿ ಕೇವಲ ವೈದ್ಯರ ತಪಾಸಣಾ ಶುಲ್ಕಕ್ಕಾಗಿಯೇ ಬರೋಬ್ಬರಿ 23 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಯಿತು!
ವೈದ್ಯರ ಫೀಸ್ ಕಥೆ ಒಂದಡೆಯಾದರೆ, ಅವರು ಬರೆದುಕೊಟ್ಟ ಔಷಧಿಗಳನ್ನು ಖರೀದಿಸಲು ಮತ್ತೊಂದು ದೊಡ್ಡ ಆಘಾತ ಕಾಯುತ್ತಿತ್ತು. ಕೇವಲ ಮಾತ್ರೆಗಳಿಗಾಗಿಯೇ ದಂಪತಿ ಬರೋಬ್ಬರಿ 42 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗಿ ಬಂತು. ಅಲ್ಲಿಗೆ ಕೇವಲ ಒಂದು ಸಾಧಾರಣ ತಪಾಸಣೆ ಮತ್ತು ಔಷಧಿಗೆ ಒಟ್ಟು ಖರ್ಚು 65 ಸಾವಿರ ರೂಪಾಯಿಗಳ ಗಡಿಯನ್ನು ದಾಟಿತ್ತು. ಇಷ್ಟೊಂದು ಹಣ ನೀಡಿದರೂ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ, ವೈದ್ಯರು ಶಿಫಾರಸು ಮಾಡಿದ ಔಷಧಿಗಳು ಅಲ್ಲಿನ ಫಾರ್ಮಸಿಯಲ್ಲಿ ತಕ್ಷಣಕ್ಕೆ ಲಭ್ಯವಿರಲಿಲ್ಲ. ಆ ಮಾತ್ರೆ ಕೈ ಸೇರಲು ದಂಪತಿಗಳು ಬರೋಬ್ಬರಿ ಐದು ದಿನಗಳ ಕಾಲ ಕಾಯಬೇಕಾಯಿತು.
ಕೊನೆಗೂ ಐದು ದಿನಗಳ ನಂತರ ಕೈಗೆ ಬಂದ ಔಷಧದ ಬಾಕ್ಸ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆ ವೃದ್ಧರಿಗೆ ಮತ್ತೊಂದು ದೊಡ್ಡ ಆಶ್ಚರ್ಯ ಕಾದಿತ್ತು. ಅಷ್ಟೊಂದು ದುಬಾರಿ ಬೆಲೆಗೆ ಅಮೆರಿಕದಲ್ಲಿ ಕಷ್ಟಪಟ್ಟು ಪಡೆದ ಆ ಔಷಧ ಬೇರೆಲ್ಲೂ ತಯಾರಾಗಿದ್ದಲ್ಲ, ಬದಲಿಗೆ ಭಾರತದಲ್ಲೇ ಉತ್ಪಾದನೆಯಾದ ಔಷಧವಾಗಿತ್ತು. ಭಾರತದ ಯಾವುದೇ ಸಾಮಾನ್ಯ ಮೆಡಿಕಲ್ ಶಾಪ್‌ನಲ್ಲಿ ತಕ್ಷಣವೇ ಸಿಗುವ ಔಷಧಿಯನ್ನು ಇಲ್ಲಿ ಪಡೆಯಲು ನನಗೆ ಬರೋಬ್ಬರಿ 12 ದಿನಗಳು ಬೇಕಾದವು. ನನ್ನ ನಿವೃತ್ತಿಯ ನಂತರದ ಬಿಡುವಿನ ಜೀವನವನ್ನು ಭಾರತದಲ್ಲೇ ಕಳೆಯುವುದು ಅತ್ಯಂತ ದೊಡ್ಡ ಸೌಭಾಗ್ಯ ಎಂದು ಆ ವೃದ್ಧರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಭಾರತದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ ವೈದ್ಯಕೀಯ ಚಿಕಿತ್ಸೆ, ಜಗತ್ತಿನಲ್ಲೇ ಅತಿ ಅಗ್ಗದ ಮೊಬೈಲ್ ಡೇಟಾ, ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬರುವ ದಿನಸಿ ಡೆಲಿವರಿ ವ್ಯವಸ್ಥೆ, ತಜ್ಞ ವೈದ್ಯರ ಸುಲಭ ಲಭ್ಯತೆ, ಮನೆಗೇ ಬಂದು ತಪಾಸಣೆ ಮಾಡುವ ಸೌಲಭ್ಯ, ಕ್ರಾಂತಿಕಾರಿ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆ, ಮನೆಗೆಲಸದವರ ನೆರವು ಮತ್ತು ನೆರೆಹೊರೆಯವರೊಂದಿಗೆ ಇರುವ ಆಪ್ತ ಬಾಂಧವ್ಯವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತ ಕೇವಲ ಒಂದು ದೇಶವಲ್ಲ, ಅದು ಬದುಕನ್ನು ಸುಲಭವಾಗಿಸುವ ಅದ್ಭುತ ಸೌಲಭ್ಯಗಳ ದಿವ್ಯ ಲೋಕ ಎಂದು ಅವರು ಬಣ್ಣಿಸಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಭಾರತದ ಆರೋಗ್ಯ ವ್ಯವಸ್ಥೆಯು ಕಡುಬಡವರಿಗೂ ಮತ್ತು ಸಾಮಾನ್ಯ ಚಿಕಿತ್ಸೆಗಳಿಗೆ ಅತ್ಯಂತ ಅಗ್ಗ ಹಾಗೂ ಸುಲಭವಾಗಿ ಸಿಗುವಂತದ್ದಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅದೇ ಸಮಯದಲ್ಲಿ, ಅಮೆರಿಕದಲ್ಲಿ ವೈದ್ಯರ ಫೀಸ್, ಲ್ಯಾಬ್ ಟೆಸ್ಟ್ ಮತ್ತು ಔಷಧಿಗಳಿಗೆ ಪ್ರತ್ಯೇಕವಾಗಿ ಭಾರಿ ಹಣ ವಸೂಲಿ ಮಾಡುವುದರಿಂದ ಅಲ್ಲಿ 'ಮೆಡಿಕಲ್ ಇನ್ಶೂರೆನ್ಸ್' (ಆರೋಗ್ಯ ವಿಮೆ) ಎಷ್ಟು ಕಡ್ಡಾಯ ಎಂಬುದನ್ನು ಈ ಘಟನೆ ನೆನಪಿಸುತ್ತದೆ ಎಂದು ಕೆಲವರು ವಾದಿಸಿದ್ದಾರೆ. ಆದಾಗ್ಯೂ, ಅಮೆರಿಕದಲ್ಲಿನ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ನುರಿತ ಚಿಕಿತ್ಸೆಯಿಂದಾಗಿ ಅಲ್ಲಿ ವೆಚ್ಚ ಹೆಚ್ಚಾಗಿರುತ್ತದೆ, ಹೀಗಾಗಿ ಎರಡೂ ದೇಶಗಳನ್ನು ನೇರವಾಗಿ ಹೋಲಿಸುವುದು ಸರಿಯಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net