ರೈತರೇ ಗಮನಿಸಿ: ಮಳೆಗಾಲದಲ್ಲಿ ನಿಮ್ಮ ಬೆಳೆ ಕಾಪಾಡಲು ಹೀಗಿರಲಿ ವೈಜ್ಞಾನಿಕ ನಿರ್ವಹಣೆ...Rain and Crop Management

ಡಾ. ಆರ್. ಜಿ. ಗೊಲ್ಲರ್, ನಿವೃತ್ತ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಕರ್ನಾಟಕ ಸರ್ಕಾರ ( Rain and Crop Management )
ಡಾ. ಆರ್. ಜಿ. ಗೊಲ್ಲರ್, ನಿವೃತ್ತ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಕರ್ನಾಟಕ ಸರ್ಕಾರ ( Rain and Crop Management )
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ರಾಜ್ಯದ ರೈತರಿಗೆ ಕೃಷಿ ತಜ್ಞ ಡಾ. ಆರ್. ಜಿ. ಗೊಲ್ಲರ್ ಮಹತ್ವದ ಸಲಹೆ
  • ಮುಂಗಾರು ಬೆಳೆ ರಕ್ಷಣೆಗೆ ಇಲ್ಲಿದೆ ಕೃಷಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರ 'ಬೀಜ ಮಂತ್ರ'
  • ತೇವಾಂಶ ಬಾಧೆ ಹಾಗೂ ಪೋಷಕಾಂಶ ನಿರ್ವಹಣೆಯ ಸಂಪೂರ್ಣ ಗೈಡ್ ಇಲ್ಲಿದೆ...
  • ಪ್ರತಿ ಎರಡು ವಾರಕ್ಕೊಮ್ಮೆ ಪೋಷಕಾಂಶಗಳ ಸಿಂಪಡಣೆಯೇ ರೈತರ ರಕ್ಷಾಕವಚ
ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆ ಚುರುಕಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ, ಬದಲಾಗುತ್ತಿರುವ ಈ ವಾತಾವರಣದಲ್ಲಿ ರೈತರು ಮೈಮರೆತು ಚೀಲಗಟ್ಟಲೆ ಯೂರಿಯಾ ಗೊಬ್ಬರ ಬಳಸುವುದು ಖಂಡಿತಾ ಬೇಡ ಎಂದು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಡಾ. ಆರ್. ಜಿ. ಗೊಲ್ಲರ್ ಅವರು ಎಚ್ಚರಿಸಿದ್ದಾರೆ. ಮಣ್ಣಿನ ತೇವಾಂಶ ಮತ್ತು ಬೆಳೆಯ ಹಂತವನ್ನು ಆಧರಿಸಿ ವೈಜ್ಞಾನಿಕವಾಗಿ ಬೆಳೆ ನಿರ್ವಹಣೆ ( Rain and Crop Management ) ಮಾಡುವುದು ಈ ಸಂಕಷ್ಟದ ಸಮಯದಲ್ಲಿ ಅತ್ಯಂತ ಅಗತ್ಯವಾಗಿದ್ದು, ರೈತರು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳ ವಿವರ ಇಲ್ಲಿದೆ.
ಪ್ರಸ್ತುತ ಬಿತ್ತನೆಯಾಗಿ 13 ರಿಂದ 25 ದಿನಗಳ ಹಂತದಲ್ಲಿರುವ ಬೆಳೆಗೆ ಮಳೆಯಿಂದಾಗಿ ಹೆಚ್ಚಿನ ತೇವಾಂಶ ಬಾಧೆ (ನೀರು ನಿಲ್ಲುವುದು) ಕಂಡುಬಂದರೆ, ತಕ್ಷಣವೇ ಪೋಷಕಾಂಶಗಳ ನಿರ್ವಹಣೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಪ್ರತಿ ಲೀಟರ್ ನೀರಿಗೆ 2-3 ಗ್ರಾಂ 19:19:19 (19 ಆಲ್) ಮತ್ತು 3 ಮಿಲೀ ಲಘು ಪೋಷಕಾಂಶಗಳ ಮಿಶ್ರಣವನ್ನು (Micro-nutrients) ಬೆರೆಸಿ ಸಿಂಪಡಣೆ ಮಾಡಬೇಕು. ಮಳೆಯಿಂದಾಗಿ ಕನಿಷ್ಠ ಒಂದು ಅಥವಾ ಎರಡು ಗಂಟೆಗಳ ಕಾಲ ಬಿಡುವು ಸಿಕ್ಕಾಗ ಈ ಸಿಂಪಡಣೆ ಮಾಡಿದರೆ ಬೆಳೆಗೆ ಹೆಚ್ಚು ಉತ್ತಮ ಫಲಿತಾಂಶ ಸಿಗುತ್ತದೆ. ಒಂದು ವೇಳೆ ಮಳೆಯಾಗದ ಪ್ರದೇಶಗಳಲ್ಲಿ ಇದೇ ಹಂತದ ಬೆಳೆ ಇದ್ದರೆ, ತಕ್ಷಣವೇ ಮಧ್ಯಂತರ ಬೇಸಾಯ (ಎಡೆ ಹೊಡೆಯುವುದು) ಮಾಡುವುದು ಅತ್ಯಗತ್ಯ.
ಇನ್ನು ಬಿತ್ತನೆಯಾಗಿ 35 ರಿಂದ 40 ದಿನಗಳ ಹಂತ ತಲುಪಿರುವ ಬೆಳೆಗಳಲ್ಲಿ ತೇವಾಂಶದ ಕೊರತೆ ಕಂಡುಬಂದರೆ, ವಿಶೇಷ ಪೋಷಕಾಂಶಗಳ ದ್ರಾವಣವನ್ನು ನೀಡಬೇಕು. ಇದಕ್ಕಾಗಿ ಪ್ರತಿ ಲೀಟರ್ ನೀರಿಗೆ 1-3 ಗ್ರಾಂ 13:0:45, 1-3 ಗ್ರಾಂ 19 ಆಲ್ ಮತ್ತು 2-3 ಮಿಲೀ ಲಘು ಪೋಷಕಾಂಶಗಳ ಮಿಶ್ರಣವನ್ನು ಬೆರೆಸಿ ಸಿಂಪಡಣೆ ಹಾಗೂ ಬುಡಕ್ಕೆ ಸುರಿಯುವ (ಡ್ರೆಂಚಿಂಗ್) ಎರಡೂ ಕಾರ್ಯಗಳನ್ನು ಏಕಕಾಲದಲ್ಲಿ ಮಾಡಬೇಕು. ಈ ಪ್ರಕ್ರಿಯೆಗೆ ಪ್ರತಿ ಎಕರೆಗೆ ಕನಿಷ್ಠ 400 ಲೀಟರ್ ದ್ರಾವಣವನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ. ಒಂದು ವೇಳೆ ಈ ಹಂತದಲ್ಲಿ ಮಳೆ ಹೆಚ್ಚಾಗಿದ್ದರೆ, ಹೆಸರು, ಉದ್ದು ಮತ್ತು ಸೋಯಾ ಅವರೆ ಬೆಳೆಗಳಲ್ಲಿ ಕಾಣಿಸಿಕೊಳ್ಳುವ 'ಕುಂಕುಮ ಅಥವಾ ತುಕ್ಕು ರೋಗ'ದ ಬಾಧೆ ತಡೆಯಲು ಪ್ರತಿ ಲೀಟರ್ ನೀರಿಗೆ 1 ಮಿಲೀ ಹೆಕ್ಸಾಕೊನಾಜೋ಼ಲ್ ಬೆರೆಸಿ ಸಿಂಪಡಿಸಬೇಕು.
ಇದೇ ವೇಳೆ ಗೋವಿನಜೋಳದ ಬೆಳೆಗಾರರೂ ಸಹ ತೇವಾಂಶಕ್ಕೆ ತಕ್ಕಂತೆ ಪೋಷಕಾಂಶಗಳನ್ನು ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು ಮತ್ತು ಅಗತ್ಯವಿದ್ದಲ್ಲಿ ಡ್ರೆಂಚಿಂಗ್ ಮಾಡಬೇಕು. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಸಾಲು ಬಿಟ್ಟು ಸಾಲಿಗೆ ನೀರು ಹಾಯಿಸುವ ಪದ್ಧತಿ ಅನುಸರಿಸಬೇಕು. ಬೆಳೆಗಳು ದೊಡ್ಡದಾಗಿದ್ದಲ್ಲಿ, ನೇಗಿಲು ಬಳಸಿ ಎಡೆ ಹೊಡೆಯುವ ಮೂಲಕ ಸಾಲುಗಳ ನಡುವೆ ಮಣ್ಣನ್ನು ಸಡಿಲಗೊಳಿಸಿ, ಮಳೆ ನೀರು ಭೂಮಿಯಲ್ಲಿ ಸುಲಭವಾಗಿ ಇಂಗುವಂತೆ ವ್ಯವಸ್ಥೆ ಮಾಡಿಕೊಳ್ಳುವುದು ಭೂಮಿಯ ತೇವಾಂಶ ಕಾಪಾಡಲು ನೆರವಾಗುತ್ತದೆ. ತೋಟದಲ್ಲಿ ಕೀಟಗಳ ಬಾಧೆಯನ್ನು ಸೂಕ್ಷ್ಮವಾಗಿ ಗಮನಿಸಿ ಕೀಟನಾಶಕ ಬಳಸಬೇಕಾಗಿದ್ದು, ಯಾವುದೇ ಕಾರಣಕ್ಕೂ ಅಪಾಯಕಾರಿ 'ಪೈರೆಥ್ರಾಯಿಡ್ ಯುಕ್ತ' ಕೀಟನಾಶಕಗಳನ್ನು ಬಳಸಬಾರದು.
ಒಟ್ಟಾರೆಯಾಗಿ ಹೇಳುವುದಾದರೆ, ಮಣ್ಣಿನ ತೇವಾಂಶ ಮತ್ತು ಬೆಳೆಯ ಪ್ರಸ್ತುತ ಹಂತವನ್ನು ನೋಡಿಕೊಂಡು ಪ್ರತಿ ಎರಡು ವಾರಗಳಿಗೊಮ್ಮೆ ಅಗತ್ಯಕ್ಕನುಗುಣವಾಗಿ ಪೋಷಕಾಂಶಗಳನ್ನು ಬೆರೆಸಿ ಸಿಂಪಡಣೆ ಹಾಗೂ ಡ್ರೆಂಚಿಂಗ್ ಮಾಡುವುದೇ ಈ ಸಂಕಷ್ಟ ಕಾಲದಲ್ಲಿ ಬೆಳೆ ನಿರ್ವಹಣೆಯ ಮೂಲ 'ಬೀಜ ಮಂತ್ರ'ವಾಗಿದೆ. "ಪರಿಹಾರಗಳು ಕೇವಲ ತಾತ್ಕಾಲಿಕ ಪರಿಹಾರಗಳೇ ಹೊರತು ಅವು ಆದಾಯಗಳಲ್ಲ" ಎಂಬುದನ್ನು ರೈತರು ಸದಾ ನೆನಪಿನಲ್ಲಿಡಬೇಕು. ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೃಷಿ ವಲಯದ ಅನುಭವಸ್ಥ ಹಾಗೂ ಪ್ರಾಮಾಣಿಕ ಸಲಹೆ ನೀಡುವ ಕೃಷಿ ತಜ್ಞರು ಮತ್ತು ವಿಶೇಷಜ್ಞರ ಅಧಿಕೃತ ಸಲಹೆಯನ್ನು ಪಡೆದೇ ಮುನ್ನಡೆಯುವುದು ಸೂಕ್ತ ಎಂದು ಡಾ. ಆರ್. ಜಿ. ಗೊಲ್ಲರ್ ರೈತರಲ್ಲಿ ವಿನಂತಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net