ಭಾರತೀಯ ಸೇನೆಗೆ 100 ಕಾಮಿಕಾಜೆ ಡ್ರೋನ್‌ಗಳ ಸೇರ್ಪಡೆ: ಗಡಿ ಕಾಯಲು ಬಂತು ಅಗ್ನಿವೇಗ್! ಚೀನಾ-ಪಾಕ್ ಗಡಿಯಲ್ಲಿ ಹೊಸ ‘ಗೇಮ್ ಚೇಂಜರ್’! Kamikaze Drones

ಭಾರತೀಯ ಸೇನೆಗೆ 100 ಕಾಮಿಕಾಜೆ ಡ್ರೋನ್‌ಗಳ ಸೇರ್ಪಡೆ: ಗಡಿ ಕಾಯಲು ಬಂತು ಅಗ್ನಿವೇಗ್ ಡ್ರೋನ್! ಚೀನಾ-ಪಾಕ್ ಗಡಿಯಲ್ಲಿ ಹೊಸ ‘ಗೇಮ್ ಚೇಂಜರ್’!
ಭಾರತೀಯ ಸೇನೆಗೆ 100 ಕಾಮಿಕಾಜೆ ಡ್ರೋನ್‌ಗಳ ಸೇರ್ಪಡೆ: ಗಡಿ ಕಾಯಲು ಬಂತು ಅಗ್ನಿವೇಗ್ ಡ್ರೋನ್! ಚೀನಾ-ಪಾಕ್ ಗಡಿಯಲ್ಲಿ ಹೊಸ ‘ಗೇಮ್ ಚೇಂಜರ್’!
Published on
ನವದೆಹಲಿ: ಭಾರತೀಯ ಸೇನೆಯು ಆಧುನಿಕ ಯುದ್ಧ ರಂಗದಲ್ಲಿ ಶತ್ರುಗಳ ಹೆಡೆಮುರಿ ಕಟ್ಟಲು ಅತ್ಯಂತ ಬಲಿಷ್ಠವಾದ ಆತ್ಮಹತ್ಯಾ ಬಾಂಬರ್ ಪಡೆಗಳನ್ನು ತನ್ನದಾಗಿಸಿಕೊಂಡಿದೆ. ಹೌದು, ದೇಶೀಯವಾಗಿ ಅಭಿವೃದ್ಧಿಪಡಿಸಲಾದ 100 ಕ್ಕೂ ಹೆಚ್ಚು ಅತ್ಯಾಧುನಿಕ ಪೀಸ್‌ಕೀಪರ್ (ಅಗ್ನಿವೇಗ್) ಟರ್ಬೋಜೆಟ್ ಚಾಲಿತ ಕಾಮಿಕಾಜೆ (Kamikaze Drones) ಡ್ರೋನ್‌ಗಳು ಈಗ ಅಧಿಕೃತವಾಗಿ ಭಾರತೀಯ ಸೇನೆಯ ಸೈನ್ಯವನ್ನು ಸೇರಿಕೊಂಡಿವೆ. 
ಭಾರತದ ರಕ್ಷಣಾ ವಲಯದ ಪ್ರಮುಖ ಸಂಸ್ಥೆಯಾದ ಎಸ್‌ಎಂಪಿಪಿ (SMPP) ಈ ಡ್ರೋನ್‌ಗಳನ್ನು ವಿನ್ಯಾಸಗೊಳಿಸಿ ಯಶಸ್ವಿಯಾಗಿ ಪೂರೈಸಿದೆ. ಈ ಮಹತ್ವದ ಸೇರ್ಪಡೆಯು ಗಡಿ ನಿಯಂತ್ರಣ ರೇಖೆ (LoC) ಮತ್ತು ವಾಸ್ತವ ನಿಯಂತ್ರಣ ರೇಖೆ (LAC) ಯಲ್ಲಿ ಭಾರತೀಯ ಸೇನೆಯ ವೈಮಾನಿಕ ಶಕ್ತಿಯನ್ನು ದುಪ್ಪಟ್ಟುಗೊಳಿಸಿದೆ.

ಏನಿದು ‘ಕಾಮಿಕಾಜೆ’ ಅಗ್ನಿವೇಗ್ ಡ್ರೋನ್? ಇದರ ವಿಶೇಷತೆ ಏನು?

ಸಾಮಾನ್ಯ ಡ್ರೋನ್‌ಗಳು ಗಡಿಯಲ್ಲಿ ಕೇವಲ ನಿಗಾ ಇಟ್ಟು ಅಥವಾ ಶತ್ರುಗಳ ನೆಲೆಗಳನ್ನು ವಿಡಿಯೋ ಮಾಡಿ ವಾಪಸ್ ಬರುತ್ತವೆ. ಆದರೆ, ಈ ಕಾಮಿಕಾಜೆ ಅಥವಾ ಲಾಯ್ಟರಿಂಗ್ ಮುನಿಷನ್ ಎಂದು ಕರೆಯಲಾಗುವ ಡ್ರೋನ್‌ಗಳ ಗುಣವೇ ಬೇರೆಯಾಗಿದೆ. ಇವು ತಾವೇ ಸ್ವತಃ ಜೀವರೂಪಿ ಬಾಂಬ್‌ಗಳಂತೆ ಕೆಲಸ ಮಾಡುತ್ತವೆ. ಒಮ್ಮೆ ಇವುಗಳಿಗೆ ಶತ್ರುಗಳ ನೆಲೆಯನ್ನು ಗುರಿಯಾಗಿಸಿ ಹಾರಿಸಿದರೆ, ಇವು ಶತ್ರುಗಳ ಬಂಕರ್ ಅಥವಾ ಯುದ್ಧ ವಾಹನಗಳ ಮೇಲೆ ನೇರವಾಗಿ ಹೋಗಿ ಅಪ್ಪಳಿಸಿ, ತಮ್ಮನ್ನು ತಾವೇ ಸ್ಫೋಟಿಸಿಕೊಳ್ಳುತ್ತವೆ. ಅಂದರೆ, ಇವು ವಾಪಸ್ ಬರದೇ ಶತ್ರುಗಳೊಂದಿಗೆ ತಾವೂ ನಾಶವಾಗುವ ಒನ್-ವೇ ಅಸ್ತ್ರಗಳಾಗಿವೆ.

ಶತ್ರು ದೇಶಗಳ ನಡುಕ ಹುಟ್ಟಿಸಲಿವೆ ಈ 4 ಪ್ರಮುಖ ಶಕ್ತಿಗಳು

ವೇಗ ಮತ್ತು ರೇಂಜ್: ದೇಶೀಯ ಟರ್ಬೋಜೆಟ್ ಎಂಜಿನ್ ಹೊಂದಿರುವ ಈ ಅಗ್ನಿವೇಗ್ ಡ್ರೋನ್‌ಗಳು ಗಂಟೆಗೆ ಬರೋಬ್ಬರಿ 450 ಕಿಲೋಮೀಟರ್ ವೇಗದಲ್ಲಿ ಹಾರಬಲ್ಲವು. ಅಲ್ಲದೆ, ಶತ್ರುಗಳ ಗಡಿಯೊಳಗೆ ಸುಮಾರು 180 ಕಿಲೋಮೀಟರ್ ಆಳಕ್ಕೆ ನುಗ್ಗಿ ಧಾಳಿ ಮಾಡುವ ಅದ್ಭುತ ಸಾಮರ್ಥ್ಯ ಇವುಗಳಿಗಿದೆ.
ಅಪ್ರತಿಮ ನಿಖರತೆ: ಈ ಡ್ರೋನ್‌ಗಳ ದಾಳಿಯ ನಿಖರತೆ ಎಷ್ಟಿದೆಯೆಂದರೆ, ಇದರ ಸರ್ಕ್ಯುಲರ್ ಎರರ್ ಪ್ರೋಬಬಲ್ 5 ಮೀಟರ್‌ಗಿಂತಲೂ ಕಡಿಮೆ ಇದೆ. ಅಂದರೆ, ನಿಗದಿಪಡಿಸಿದ ನಿಖರವಾದ ಜಾಗದಿಂದ ಕೇವಲ 5 ಮೀಟರ್ ವ್ಯಾಪ್ತಿಯೊಳಗೆ ಶತ್ರುಗಳ ತಲೆಯ ಮೇಲೆಯೇ ನೇರವಾಗಿ ಬಾಂಬ್ ಹಾಕಿದಂತೆ ಇದು ಅಪ್ಪಳಿಸುತ್ತದೆ.
ಜಾಮಿಂಗ್ ನಿರೋಧಕ ತಂತ್ರಜ್ಞಾನ: ಇಂದಿನ ಆಧುನಿಕ ಯುದ್ಧಗಳಲ್ಲಿ ವೈರಿಗಳು ರೇಡಾರ್ ಅಥವಾ ಎಲೆಕ್ಟ್ರಾನಿಕ್ ಜಾಮಿಂಗ್ ಮೂಲಕ ಡ್ರೋನ್‌ಗಳ ಸಿಗ್ನಲ್ ಕಟ್ ಮಾಡಲು ನೋಡುತ್ತಾರೆ. ಆದರೆ, ಅಗ್ನಿವೇಗ್ ಡ್ರೋನ್ ಯಾವುದೇ ಎಲೆಕ್ಟ್ರಾನಿಕ್ ಜಾಮಿಂಗ್ ಅಥವಾ ಸ್ಪೂಫಿಂಗ್ ತಂತ್ರಜ್ಞಾನಕ್ಕೆ ಕಣ್ತಪ್ಪಿಸಿ ಸ್ವಯಂಚಾಲಿತವಾಗಿ ಗುರಿಯನ್ನು ಪತ್ತೆಹಚ್ಚಿ ಧ್ವಂಸಗೊಳಿಸುತ್ತದೆ.
ಸೈನಿಕರ ಜೀವಕ್ಕೆ ಸುರಕ್ಷತೆ: ಶತ್ರುಗಳ ಭದ್ರ ಕೋಟೆಯನ್ನು ಭೇದಿಸಲು ಈಗ ಭಾರತೀಯ ಸೇನೆ ತನ್ನ ಸೈನಿಕರನ್ನಾಗಲಿ ಅಥವಾ ಕೋಟ್ಯಂತರ ರೂಪಾಯಿ ಬೆಲೆಬಾಳುವ ಯುದ್ಧ ವಿಮಾನಗಳನ್ನಾಗಲಿ ಅಪಾಯಕ್ಕೆ ದೂಡುವ ಅಗತ್ಯವಿಲ್ಲ. ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಡ್ರೋನ್‌ಗಳನ್ನು ಬಳಸಿ ದೊಡ್ಡ ಮಟ್ಟದ ಹಾನಿ ಉಂಟುಮಾಡಬಹುದು.
ತರಬೇತಿ ಯೂನಿಟ್‌ಗಳು ಸೇರಿದಂತೆ ಒಟ್ಟು 106 ಸಿಸ್ಟಮ್‌ಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳಲಾಗಿದ್ದು, ಇದು ಭಾರತದ ಆತ್ಮನಿರ್ಭರ ಭಾರತ ಮತ್ತು ದೇಶೀಯ ರಕ್ಷಣಾ ಉತ್ಪಾದನಾ ವಲಯಕ್ಕೆ ಭಾರಿ ಯಶಸ್ಸನ್ನು ತಂದುಕೊಟ್ಟಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net