ನನ್ನ ಕಷ್ಟದ ದಿನಗಳಲ್ಲಿ ಕೈಹಿಡಿದ ತಾಯಿಗೆ ದ್ರೋಹ ಮಾಡಲಾರೆ! ಬಂಡಾಯದ ಬಿರುಗಾಳಿಗೆ ಬ್ರೇಕ್ ಹಾಕಿದ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ! Shatrughan Sinha

ನನ್ನ ಕಷ್ಟದ ದಿನಗಳಲ್ಲಿ ಕೈಹಿಡಿದ ತಾಯಿಗೆ ದ್ರೋಹ ಮಾಡಲಾರೆ!ಬಂಡಾಯದ ಬಿರುಗಾಳಿಗೆ ಬ್ರೇಕ್ ಹಾಕಿದ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ!
ನನ್ನ ಕಷ್ಟದ ದಿನಗಳಲ್ಲಿ ಕೈಹಿಡಿದ ತಾಯಿಗೆ ದ್ರೋಹ ಮಾಡಲಾರೆ!ಬಂಡಾಯದ ಬಿರುಗಾಳಿಗೆ ಬ್ರೇಕ್ ಹಾಕಿದ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ!
Published on
ನವದೆಹಲಿ: ನನ್ನ ಅತ್ಯಂತ ಕಷ್ಟದ ದಿನಗಳಲ್ಲಿ ನನ್ನ ಕೈಹಿಡಿದು ನಡೆಸಿದವರು ಮಮತಾ ಬ್ಯಾನರ್ಜಿ ಸಹಾಯ ಮಾಡಿದ್ದಾರೆ. ಇಡೀ ಪಕ್ಷವೇ ಅವರ ವಿರುದ್ಧ ತಿರುಗಿಬಿದ್ದರೂ, ನಾನು ಮಾತ್ರ ಯಾವುದೇ ಕಾರಣಕ್ಕೂ ದೀದಿಯನ್ನು ಬಿಟ್ಟು ಕದಲುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ (TMC) ಹಿರಿಯ ಸಂಸದ ಹಾಗೂ ಬಾಲಿವುಡ್ ಖ್ಯಾತ ನಟ ಶತ್ರುಘ್ನ ಸಿನ್ಹಾ(Shatrughan Sinha) ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದಲ್ಲಿ ದಿನಕ್ಕೊಂದು ಮಹಾ ಟ್ವಿಸ್ಟ್ ಸಿಗುತ್ತಿದ್ದು, 20 ಸಂಸದರ ಬಂಡಾಯದ ಬಿರುಗಾಳಿಯ ನಡುವೆ ಶತ್ರುಘ್ನ ಸಿನ್ಹಾ ಅವರ ಈ ದಿಢೀರ್ ಹೇಳಿಕೆ ದೀದಿ ಪಾಳಯಕ್ಕೆ ಭಾರಿ ನಿರಾಳ ತಂದಿದೆ. ಬಂಡಾಯಗಾರರ ರಹಸ್ಯ ಪಟ್ಟಿಯಲ್ಲಿ ತಮ್ಮ ಹೆಸರು ಕೇಳಿಬಂದ ಬೆನ್ನಲ್ಲೇ ತೀವ್ರ ಆಕ್ರೋಶ ಹೊರಹಾಕಿರುವ ಸಿನ್ಹಾ, ತಾವೆಂದೂ ಮಮತಾ ಅವರಿಗೆ ದ್ರೋಹ ಬಗೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಕಷ್ಟಕ್ಕೆ ನಿಂತ ದೀದಿಗೆ ನಾನು ದ್ರೋಹ ಮಾಡಲಾರೆ!

ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ಜತೆ ಮಾತನಾಡಿದ ಅಸನ್ಸೋಲ್ ಲೋಕಸಭಾ ಕ್ಷೇತ್ರದ ಸಂಸದ ಶತ್ರುಘ್ನ ಸಿನ್ಹಾ, 2019ರ ಲೋಕಸಭಾ ಚುನಾವಣೆಯಲ್ಲಿ ನಾನು ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿದ್ದಾಗ, ಇಡೀ ರಾಜಕೀಯ ಲೋಕವೇ ನನ್ನನ್ನು ಕೈಬಿಟ್ಟಿತ್ತು. ಆಗ ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಇದೇ ಮಮತಾ ಆಗಿದ್ದರು. ನನ್ನನ್ನು ಅಸನ್ಸೋಲ್ ಕ್ಷೇತ್ರದಿಂದ ಕಣಕ್ಕಿಳಿಸಿ, ಸಂಸತ್ತಿಗೆ ಕಳುಹಿಸಿಕೊಟ್ಟ ಆ ತಾಯಿಯ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ ನಾನಲ್ಲ. ದೀದಿಗೆ ನನ್ನ ಬೆಂಬಲ ಅಗತ್ಯವಿರುವ ಈ ಸಂಕಷ್ಟದ ಸಮಯದಲ್ಲಿ ಅವರ ಕೈಬಿಟ್ಟು ಹೋಗುವುದು ಮಹಾ ದ್ರೋಹವಾಗುತ್ತದೆ. ಟಿಎಂಸಿ ಮತ್ತು ಮಮತಾ ಜತೆ ನಿಲ್ಲುವುದು ನನ್ನ ಪರಮ ಕರ್ತವ್ಯ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.
ಇದೇ ವೇಳೆ ತಮ್ಮ ಮೇಲಿನ ಬಂಡಾಯದ ಆರೋಪಗಳನ್ನು ಸಂಪೂರ್ಣ ತಳ್ಳಿಹಾಕಿದ ಟಿಎಂಸಿ ಸಂಸದ, ನಾನು ಬಂಡಾಯಗಾರರ ಪಟ್ಟಿಗೆ ಸಹಿ ಮಾಡಿದ್ದೇನೆ ಎಂಬುದೆಲ್ಲಾ ಶುದ್ಧ ಸುಳ್ಳು ಮತ್ತು ವ್ಯವಸ್ಥಿತ ಪಿತೂರಿ. ನಿಜ ಹೇಳುವುದೇ ಬಂಡಾಯ ಎಂದಾದರೆ, ನಾನು ಬಂಡಾಯಗಾರನೇ ಹೊರತು ಪಕ್ಷಕ್ಕೆ ದ್ರೋಹ ಬಗೆಯುವವನಲ್ಲ. ಬಂಡಾಯದ ಹಾದಿ ಹಿಡಿದಿರುವವರೆಲ್ಲರೂ ನನ್ನ ವೈಯಕ್ತಿಕ ಸ್ನೇಹಿತರೇ ಇರಬಹುದು. ಆದರೆ ನನ್ನ ನಿಲುವು ಮಾತ್ರ ಸ್ಪಷ್ಟ. ಬಿಜೆಪಿಯ ಹಿರಿಯ ನಾಯಕರು ಸೇರಿದಂತೆ ಹಲವರು ನನ್ನನ್ನು ತಮ್ಮ ಪಕ್ಷಕ್ಕೆ ಬರುವಂತೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ, ಅವರೆಲ್ಲರಿಗೂ ನನ್ನ ಧನ್ಯವಾದಗಳು. ಆದರೆ ನಾನು ಮಾತ್ರ ಕೊನೆಯವರೆಗೂ ದೀದಿ ಅವರೊಂದಿಗೇ ಇರುತ್ತೇನೆ ಎಂದು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲೇ ಇಲ್ಲದ ‘ಶಾರ್ಟ್‌ಗನ್’: ದೀದಿ ಕೋಟೆಗೆ ಸಿಕ್ಕ ದೊಡ್ಡ ರಿಲೀಫ್!

ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ 20 ಬಂಡಾಯ ಸಂಸದರ ಪಟ್ಟಿಯಲ್ಲಿ ಶತ್ರುಘ್ನ ಸಿನ್ಹಾ ಅವರ ಹೆಸರೂ ಪ್ರಮುಖವಾಗಿ ಕೇಳಿಬಂದಿತ್ತು. ಆದರೆ ನಂಬಲರ್ಹ ಮೂಲಗಳ ಪ್ರಕಾರ, ದೆಹಲಿಯಲ್ಲಿ ಎದ್ದಿರುವ ಈ ರಾಜಕೀಯ ಹೈಡ್ರಾಮಾದ ಸಮಯದಲ್ಲಿ ಶತ್ರುಘ್ನ ಸಿನ್ಹಾ ಅವರು ದೆಹಲಿಯಲ್ಲೇ ಇರಲಿಲ್ಲ. ಹೀಗಿರುವಾಗ ಅವರು ಬಂಡಾಯದ ಪತ್ರಕ್ಕೆ ಸಹಿ ಹಾಕಲು ಹೇಗೆ ಸಾಧ್ಯ ಎಂಬ ಸತ್ಯ ಈಗ ಬಯಲಾಗಿದೆ.
ಟಿಎಂಸಿ ಪಕ್ಷದ ಒಟ್ಟು 28 ಲೋಕಸಭಾ ಸಂಸದರ ಪೈಕಿ ಬಹುತೇಕರು ಮಮತಾ ವಿರುದ್ಧ ಬಹಿರಂಗವಾಗಿಯೇ ಯುದ್ಧ ಸಾರಿದ್ದಾರೆ. ಇತ್ತ ಲೋಕಸಭೆ ಮಾತ್ರವಲ್ಲದೆ ರಾಜ್ಯಸಭೆಯಲ್ಲೂ ದೀದಿಗೆ ಭಾರಿ ಹಿನ್ನಡೆಯಾಗುತ್ತಿದ್ದು, ಇತ್ತೀಚೆಗಷ್ಟೇ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಕಳಪೆ ಪ್ರದರ್ಶನವನ್ನು ಖಂಡಿಸಿ ಪ್ರಕಾಶ್ ಚಿಕ್ ಬಾರೈಕ್ ಸೇರಿದಂತೆ ಮೂವರು ರಾಜ್ಯಸಭಾ ಸಂಸದರು ರಾಜೀನಾಮೆ ನೀಡಿದ್ದಾರೆ. ಪಕ್ಷದ ಅಸ್ತಿತ್ವವೇ ಅಪಾಯದಲ್ಲಿರುವ ಇಂತಹ ಭೀಕರ ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಶತ್ರುಘ್ನ ಸಿನ್ಹಾ ಅವರಂತಹ ದೈತ್ಯ ನಾಯಕ ದೀದಿ ಪರವಾಗಿ ಬ್ಯಾಟ್ ಬೀಸಿರುವುದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net