ಪಕ್ಷದಲ್ಲಿ ಒಂದೋ ಸೋದರಳಿಯನಾದರೂ ಇರಲಿ, ಇಲ್ಲವೇ ನಾವಾದರೂ ಇರುತ್ತೇವೆ! ದೀದಿಗೆ ಡೆಡ್‌ಲೈನ್ ಕೊಟ್ಟ ಟಿಎಂಸಿಯ ಹಿರಿಯ ಸಂಸದ! Kalyan Banerjee Rebels

ಪಕ್ಷದಲ್ಲಿ ಒಂದೋ ಸೋದರಳಿಯನಾದರೂ ಇರಲಿ, ಇಲ್ಲವೇ ನಾವಾದರೂ ಇರುತ್ತೇವೆ! ದೀದಿಗೆ ಡೆಡ್‌ಲೈನ್ ಕೊಟ್ಟ ಟಿಎಂಸಿಯ ಹಿರಿಯ ಸಂಸದ!
ಪಕ್ಷದಲ್ಲಿ ಒಂದೋ ಸೋದರಳಿಯನಾದರೂ ಇರಲಿ, ಇಲ್ಲವೇ ನಾವಾದರೂ ಇರುತ್ತೇವೆ! ದೀದಿಗೆ ಡೆಡ್‌ಲೈನ್ ಕೊಟ್ಟ ಟಿಎಂಸಿಯ ಹಿರಿಯ ಸಂಸದ!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಭಿನ್ನಮತ ಸ್ಪೋಟಗೊಂಡಿದೆ. ಪಕ್ಷದಲ್ಲಿ ಆ ಅಹಂಕಾರಿ ಸೋದರಳಿಯನಾದರೂ ಇರಬೇಕು, ಇಲ್ಲವೇ ನಾವಾದರೂ ಇರಬೇಕು ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ(Kalyan Banerjee Rebels) ಅವರು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ನೇರ ಸವಾಲು ಹಾಕಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಅಹಂಕಾರದ ನಡವಳಿಕೆಯಿಂದ ತೀವ್ರ ಬೇಸತ್ತಿರುವ ಕಲ್ಯಾಣ್ ಬ್ಯಾನರ್ಜಿ, ಕೋಲ್ಕತ್ತಾ ಸಹಿ ಫೋರ್ಜರಿ ಪ್ರಕರಣದಿಂದ ದಿಢೀರ್ ಎಂದು ಹಿಂದೆ ಸರಿದಿದ್ದಾರೆ. ಹಿರಿಯ ನಾಯಕರ ಈ ಮುನಿಸು ದೀದಿ ಕೋಟೆಯಲ್ಲಿ ನಡುಕ ಹುಟ್ಟಿಸಿದೆ.

ಮಧ್ಯರಾತ್ರಿಯ ಆ ಒಂದು ಫೋನ್ ಕಾಲ್; ಹಿರಿಯ ವಕೀಲನಿಗೆ ಘೋರ ಅಪಮಾನ!

ಆನಂದಬಜಾರ್ ಪತ್ರಿಕೆಯ ವರದಿಯ ಪ್ರಕಾರ, ಬುಧವಾರ ಮಧ್ಯರಾತ್ರಿ 12:30ರ ಸುಮಾರಿಗೆ ನಡೆದ ಒಂದು ಘಟನೆ ಈ ಇಡೀ ಜಗಳಕ್ಕೆ ಕಿಡಿ ಹೊತ್ತಿಸಿದೆ. ಕಲ್ಯಾಣ್ ಬ್ಯಾನರ್ಜಿ ಅವರ ಮಗ ಪ್ರಭನ್ಯ ಬ್ಯಾನರ್ಜಿ ಅವರಿಗೆ ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ವಲಯದಿಂದ ಒಂದು ಫೋನ್ ಕರೆ ಬಂದಿತ್ತು. ಆ ಕರೆಯಲ್ಲಿ, ಕೋಲ್ಕತ್ತಾ ಸಹಿ ಫೋರ್ಜರಿ ಕೇಸ್‌ನ ಜವಾಬ್ದಾರಿಯನ್ನು ಹಿರಿಯ ವಕೀಲರ ಬದಲಿಗೆ ಜೂನಿಯರ್ ವಕೀಲ ಅಯನ್ ಭಟ್ಟಾಚಾರ್ಯ ಅವರಿಗೆ ವಹಿಸಲಾಗುತ್ತಿದೆ ಎಂದು ಅತ್ಯಂತ ಉದಾಸೀನವಾಗಿ ತಿಳಿಸಲಾಯಿತು.
ಕಳೆದ 45 ವರ್ಷಗಳಿಂದ ವಕೀಲಿ ವೃತ್ತಿ ಮಾಡಿಕೊಂಡಿರುವ ಹಾಗೂ ಟಿಎಂಸಿ ಪಕ್ಷವನ್ನು ಮೊದಲಿನಿಂದಲೂ ಕಟ್ಟಿ ಬೆಳೆಸಿದ ಕಲ್ಯಾಣ್ ಬ್ಯಾನರ್ಜಿ ಅವರಿಗೆ ಇದು ತಮ್ಮ ಆತ್ಮಗೌರವಕ್ಕೆ ಆದ ಘೋರ ಅಪಮಾನ ಎಂದು ಭಾಸವಾಗಿದೆ. ಬುಧವಾರವಷ್ಟೇ ಕೋರ್ಟ್‌ನಲ್ಲಿ ಅಭಿಷೇಕ್ ಪರವಾಗಿ ಕಲ್ಯಾಣ್ ಭರ್ಜರಿ ವಾದ ಮಂಡಿಸಿದ್ದರು. ಆದರೂ ತಮ್ಮ ಗಮನಕ್ಕೆ ತರದೆ ಈ ರೀತಿ ನಿರ್ಧಾರ ಕೈಗೊಂಡಿದ್ದಕ್ಕೆ ಕೆಂಡಾಮಂಡಲವಾದ ಕಲ್ಯಾಣ್ ಬ್ಯಾನರ್ಜಿ, ಅವರ ಮಗ ಮತ್ತು ಇಡೀ ಜೂನಿಯರ್ ವಕೀಲರ ತಂಡ ಅಭಿಷೇಕ್ ಬ್ಯಾನರ್ಜಿ ಅವರ ಕೇಸ್‌ನಿಂದ ಸಂಪೂರ್ಣವಾಗಿ ಹೊರನಡೆದಿದ್ದಾರೆ.

"ಅಭಿಷೇಕ್ ಆಟ ಮುಗಿದಿದೆ": ದೀದಿಗೆ ಕಲ್ಯಾಣ್ ಖಡಕ್ ವಾರ್ನಿಂಗ್!

ಕೇಸ್‌ನಿಂದ ಹೊರಬಂದ ಬೆನ್ನಲ್ಲೇ ಕಲ್ಯಾಣ್ ಬ್ಯಾನರ್ಜಿ ಅವರು ನೇರವಾಗಿ ಮಮತಾ ಅವರಿಗೆ ಅಂತಿಮ ಎಚ್ಚರಿಕೆ ರವಾನಿಸಿದ್ದಾರೆ. ನನಗೆ ಸುದೀರ್ಘ ರಾಜಕೀಯ ಮತ್ತು ಕಾನೂನು ಅನುಭವವಿದೆ. ಇಂತಹ ಮರ್ಯಾದೆಯಿಲ್ಲದ, ಅಹಂಕಾರದ ವರ್ತನೆಯನ್ನು ನಾನು ಸಹಿಸುವುದಿಲ್ಲ. ನಾನು ದೀದಿಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಪಕ್ಷದಲ್ಲಿ ಅಭಿಷೇಕ್ ಇರಬೇಕು, ಇಲ್ಲವೇ ನಾವು ಇರಬೇಕು. ಆ ಡೈಮಂಡ್ ಹಾರ್ಬರ್ ಸಂಸದನಿಗೆ ರಾಜಕೀಯ ಆಟ ಮುಗಿದಿದೆ, ಆದರೂ ಅವನ ಅಹಂಕಾರ ಮಾತ್ರ ಆಕಾಶದಲ್ಲಿದೆ ಎಂದು ಗುಡುಗಿದ್ದಾರೆ.
ಟಿಎಂಸಿ ಪಕ್ಷದಲ್ಲಿ ಹಳೇ ತಲೆಮಾರಿನ ನಾಯಕರು ಮತ್ತು ಅಭಿಷೇಕ್ ಬ್ಯಾನರ್ಜಿ ಅವರ ಹೊಸ ತಲೆಮಾರಿನ ನಾಯಕರ ನಡುವೆ ಕಳೆದ ಹಲವು ದಿನಗಳಿಂದ ಶೀತಲ ಸಮರ ನಡೆಯುತ್ತಿತ್ತು. ಆದರೆ ಕಲ್ಯಾಣ್ ಬ್ಯಾನರ್ಜಿ ಅವರ ಈ ಬಹಿರಂಗ ಬಂಡಾಯವು ಪಕ್ಷ ಇಬ್ಬಾಗವಾಗುವ ಮುನ್ಸೂಚನೆ ನೀಡಿದೆ.

ಕೋರ್ಟ್‌ನಿಂದ ಸಿಗದ ರಿಲೀಫ್: ಭವಾನಿ ಭವನಕ್ಕೆ ಅಭಿಷೇಕ್ ಓಟ!

ಒಂದೆಡೆ ಪಕ್ಷದ ಒಳಗಿನ ಜಗಳ ಬೀದಿಗೆ ಬಂದಿದ್ದರೆ, ಇನ್ನೊಂದೆಡೆ ಕಾನೂನಿನ ಮರುಕಳ ಕುತ್ತಿಗೆಗೆ ಬಿದ್ದಿದೆ. ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಕೌಶಿಕ್ ಚಂದ್ ಅವರು ಅಭಿಷೇಕ್ ಬ್ಯಾನರ್ಜಿಗೆ ಯಾವುದೇ ರೀತಿಯ ರಿಲೀಫ್ ನೀಡಲು ನಿರಾಕರಿಸಿದ್ದಾರೆ. ಸಿಐಡಿ ನೀಡಿರುವ ಸಮನ್ಸ್‌ಗೆ ಗೌರವ ಕೊಟ್ಟು, ದೆಹಲಿಯಿಂದ ವಾಪಸ್ ಬಂದ ತಕ್ಷಣವೇ ಅಂದರೆ ಇಂದು ಸಂಜೆ 6 ಗಂಟೆಯ ಒಳಗಾಗಿ ಕೋಲ್ಕತ್ತಾದ ಸಿಐಡಿ ಪ್ರಧಾನ ಕಚೇರಿಯಾದ ಭವಾನಿ ಭವನಕ್ಕೆ ಹಾಜರಾಗಬೇಕು ಎಂದು ಹೈಕೋರ್ಟ್ ಕಠಿಣ ಆದೇಶ ಹೊರಡಿಸಿದೆ.
ಮುಂದಿನ ಎರಡು ವಾರಗಳ ಕಾಲ ಅಭಿಷೇಕ್ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಕೋರ್ಟ್ ರಕ್ಷಣೆ ನೀಡಿದೆಯಾದರೂ, ಇತ್ತ ಸ್ವಂತ ಮನೆಯಲ್ಲೇ ಎದ್ದಿರುವ ಬಂಡಾಯದ ಮಹಾ ಬಿರುಗಾಳಿಯನ್ನು ತಡೆಯುವುದು ಮಮತಾ ಬ್ಯಾನರ್ಜಿ ಅವರಿಗೆ ಹಿಮಾಲಯದಷ್ಟೇ ದೊಡ್ಡ ಸವಾಲಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net