ಅಸ್ಸಾಂನ ಜೋರ್ಹತ್‌ನಲ್ಲಿ ಭಾರತೀಯ ವಾಯುಪಡೆಯ AN-32 ಸಾರಿಗೆ ವಿಮಾನ ಪತನ: ಐವರು ಸಿಬ್ಬಂದಿ ಸಾವು | Indian Air Force
ಘಟನೆಯ ಸ್ಥಳ
Published on:
Copied
Follow Us
ಗುವಾಹಟಿ: ಅಸ್ಸಾಂನ ಜೋರ್ಹತ್‌ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಶನಿವಾರ(ಜೂ. 13) ಬೆಳಗ್ಗೆ ಭಾರತೀಯ ವಾಯುಪಡೆಯ(Indian Air Force) ಎಎನ್ -32 ಸಾರಿಗೆ ವಿಮಾನ ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ ವಾಯುಪಡೆಯ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಐಎಎಫ್ ಮಾಹಿತಿ ನೀಡಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಎಎನ್ -32 ವಿಮಾನವು ಜೋಹರ್ತ್ನ ವಾಯುಪಡೆ ನಿಲ್ದಾಣದ ಆವರಣದಲ್ಲಿ ಪತನಗೊಂಡು, ಬಳಿಕ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ತಕ್ಷಣ ಅಗ್ನಿಶಾಮಕ ತಂಡ ಬೆಂಕಿಯನ್ನು ನಂದಿಸಿದೆ. ದುರಂತದಲ್ಲಿ ಐವರು ಸಿಬ್ಬಂದಿ ಸಜೀವ ದಹನವಾಗಿದ್ದು, ಓರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ವಾಯುಪಡೆ, ಅಸ್ಸಾಂನ ಜೋರ್ಹತ್‌ನಲ್ಲಿ ಇಂದು ಬೆಳಿಗ್ಗೆ 10.00 ಗಂಟೆಗೆ ಐಎಎಫ್ ಎಎನ್ -32 ವಿಮಾನವು ದಿನನಿತ್ಯದ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತ ಸ್ಥಳ ನಿರ್ವಹಣೆ ಮತ್ತು ಆರಂಭಿಕ ವಿಚಾರಣೆಗಳು ನಡೆಯುತ್ತಿವೆ. ಜೀವಹಾನಿಗೆ ಐಎಎಫ್ ತೀವ್ರವಾಗಿ ವಿಷಾದಿಸುತ್ತದೆ. ಮತ್ತು ಈ ದುಃಖದ ಸಮಯದಲ್ಲಿ ಮೃತ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದೆ.
ದುರಂತದಲ್ಲಿ ಮೃತಪಟ್ಟವರ ಮಾಹಿತಿ ಹಂಚಿಕೊಂಡಿರು ಐಎಎಫ್, ಮೃತಪಟ್ಟವರನ್ನು ಸ್ಕ್ವಾಡ್ರನ್ ಲಿಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಮ್ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ವಾಯು ಖೇಮರಾಮ್ ಕುಮಾವತ್ ಹಾಗೂ ಅಗ್ನಿವೀರ್ವಾಯು ಡ್ಯಾನಿಶ್ ಆಲಂ ಎಂದು ತಿಳಿಸಿದೆ.
ಇನ್ನೂ ವಿಮಾನ ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ, ಮತ್ತು ಸಾವುನೋವುಗಳು ಅಥವಾ ಗಾಯಗಳ ಬಗ್ಗೆ ವಿವರಗಳು ಸ್ಪಷ್ಟವಾಗಿಲ್ಲ. ಆದರೆ ಪೈಲಟ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಭಾರತೀಯ ವಾಯುಪಡೆಯು ಘಟನೆಯನ್ನು ದೃಢಪಡಿಸಿದ್ದು, ಪರಿಸ್ಥಿತಿಯ ಮೌಲ್ಯಮಾಪನದ ನಂತರ ಹೆಚ್ಚಿನ ನವೀಕರಣಗಳನ್ನು ಒದಗಿಸಲಾಗುವುದು. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ.
ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ Su-30MKI ಫೈಟರ್ ಜೆಟ್ ಅಪಘಾತದಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ ತಿಂಗಳುಗಳ ಬಳಿಕ ಮತ್ತೆ ಈ ಘಟನೆ ನಡೆದಿದೆ (ಏಜೆನ್ಸೀಸ್).