ಸುಲಿಗೆ ಪ್ರಕರಣ: ಮಧ್ಯರಾತ್ರಿ 2.30ಕ್ಕೆ ಅಭಿಷೇಕ್ ಬ್ಯಾನರ್ಜಿ ಮನೆಗೆ ನುಗ್ಗಿದ ಪೊಲೀಸರು: ಭದ್ರತಾ ಸಿಬ್ಬಂದಿ ವಾಗ್ವಾದ; ಹೈಡ್ರಾಮಾ | Abhishek Banerjee
ಅಭಿಷೇಕ್ ಬ್ಯಾನರ್ಜಿ ಮತ್ತು ಮಮತಾ ಬ್ಯಾನರ್ಜಿ
Published on:
Copied
Follow Us
ಕೋಲ್ಕತ್ತಾ: ಸುಲಿಗೆ ಪ್ರಕರಣವೊಂದರ ತನಿಖೆಯ ಭಾಗವಾಗಿ ಶನಿವಾರ(ಜೂ. 13) ಮಧ್ಯರಾತ್ರಿ 2.30ಕ್ಕೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ(Abhishek Banerjee) ಅವರ ಕೋಲ್ಕತ್ತಾದ ಮನೆಗೆ ಪೊಲೀಸರು ನುಗ್ಗಿದ್ದು, ಈ ವೇಳೆ ಸ್ಥಳದಲ್ಲಿ ಬ್ಯಾನರ್ಜಿ ಅವರ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಭಾರೀ ಹೈಡ್ರಾಮಾ ನಡೆದಿದೆ ಎಂದು ವರದಿಯಾಗಿದೆ.
ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ಕಾರ್ಯದರ್ಶಿ ಸುಮಿತ್ ರಾಯ್ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲು ಪಶ್ಚಿಮ ಮೇದಿನಿಪುರ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಅಭಿಷೇಕ್ ಬ್ಯಾನರ್ಜಿ ಅವರ ಮನೆಗೆ ಬೆಳಗಿನ ಜಾವ 2:30ಕ್ಕೆ ಭೇಟಿ ನೀಡಿ ಶೋಧ ನಡೆಸಲು ಮುಂದಾಗಿದ್ದು, ಈ ವೇಲೆ ಮನೆಯೊಳಗಿದ್ದ ಬ್ಯಾನರ್ಜಿ ಅವರ ಭದ್ರತಾ ಸಿಬ್ಬಂದಿ ಪೊಲೀಸರ ತಂಡವನ್ನು ತಡೆದಿದ್ದಾರೆ. ಈ ವೇಳೆ ಎರಡು ಕಡೆ ವಾಗ್ವಾದ ನಡೆದಿದ್ದು, ಬಳಿಕ ಪೊಲೀಸರು ಮನೆಗೆ ನುಗ್ಗಿ ಶೋಧ ನಡೆಸಿದ್ದಾರೆ.
ಇನ್ನೂ ಪೊಲೀಸರ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ರಾತ್ರಿಯೇ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರು ಅಳಿಯನ ನಿವಾಸಕ್ಕೆ ಆಗಮಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. ಬಳಿಕ ಸ್ವಲ್ಪ ಹೊತ್ತು ಬಿಟ್ಟು ಪೊಲೀಸರು ವಾಪಸ್ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್ ಬ್ಯಾನರ್ಜಿ, ಅವರು ಬೀಗ ಮುರಿದು ಇಡೀ ಮನೆಯನ್ನು ಶೋಧಿಸಿದರು. ಯಾಕೆ ದಾಳಿ ಮಾಡಿದ್ರೂ, ಏನಾಯ್ತು ಎಂಬ ಬಗ್ಗೆ ತನಿಖಾ ಸಂಸ್ಥೆಗಳನ್ನೇ ಕೇಳಿ ಎಂದು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಪಶ್ಚಿಮ ಮೇದಿನಿಪುರ ಜಿಲ್ಲೆಯ ಸಲ್ಬೋನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಆರ್ಥಿಕ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಈ ಶೋಧ ನಡೆದಿದೆ. ಆರೋಪಗಳ ಸ್ವರೂಪ ಅಥವಾ ನಿರ್ದಿಷ್ಟ ಪುರಾವೆಗಳ ಕುರಿತು ಹೆಚ್ಚಿನ ವಿವರಗಳನ್ನು ಈಗಲೇ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).