150 ಕೋಟಿ ಜನರ ನಾಯಕ ಮೋದಿಯನ್ನು ಒಣ ಬೆದರಿಕೆಯಿಂದ ಮಣಿಸಲು ಸಾಧ್ಯವಿಲ್ಲ: ಟ್ರಂಪ್​ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ​ | VladimirPutin

Vladimir Putin | ಪ್ರಧಾನಿ ನರೇಂದ್ರ ಮೋದಿ ಜೊತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Vladimir Putin | ಪ್ರಧಾನಿ ನರೇಂದ್ರ ಮೋದಿ ಜೊತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Published on
Vladimir Putin: ರಷ್ಯಾದೊಂದಿಗೆ ಸಂಬಂಧಗಳನ್ನು ಕಡಿಮೆ ಮಾಡುವಂತೆ ಭಾರತದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇರ ಸಂದೇಶ ರವಾನಿಸಿದ್ದು, ಸೇಂಟ್ ಪೀಟರ್ಸ್‌ಬರ್ಗ್ ಅಂತರರಾಷ್ಟಯ ಆರ್ಥಿಕ ವೇದಿಕೆಯಲ್ಲಿ (SPIEF) ಮಾತನಾಡಿದ ಅವರು, ಭಾರತವು ಎಂದಿಗೂ ಯಾವುದೇ ವಿದೇಶಿ ಶಕ್ತಿಯ ಆದೇಶ ಅಥವಾ ದಬ್ಬಾಳಿಕೆಗೆ ತಲೆಬಾಗುವುದಿಲ್ಲ ಮತ್ತು ಸಾರ್ವಭೌಮ ರಾಷ್ಟ್ರವಾಗಿ ತನ್ನ ಸ್ವತಂತ್ರ ನಿರ್ಧಾರಗಳನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸುವುದರ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ವಿವಿಧ ಜಾಗತಿಕ ವಿಷಯಗಳಲ್ಲಿ ಅಮೆರಿಕವು ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದರೂ, 150 ಕೋಟಿ ಜನಸಂಖ್ಯೆಯನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇಂತಹ ಒತ್ತಡ ತರುವುದು ವ್ಯರ್ಥ ಕಸರತ್ತು ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ, ಸೂಕ್ತ ಬೆಲೆ ಮತ್ತು ತಂತ್ರಜ್ಞಾನದ ಲಾಭವನ್ನು ಆಧರಿಸಿಯೇ ತನ್ನ ಜಾಗತಿಕ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನು ವಿರೋಧಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ವಿಧಿಸಿದ್ದ ನಿರ್ಬಂಧಗಳು ಮತ್ತು 25 ಪ್ರತಿಶತ ಸುಂಕದಂತಹ ಕ್ರಮಗಳು ಅಂತಿಮವಾಗಿ ಪಾಶ್ಚಿಮಾತ್ಯ ದೇಶಗಳಿಗೇ ತಿರುಗುಬಾಣವಾಗಲಿವೆ ಎಂದು ಅವರು ಎಚ್ಚರಿಸಿದ್ದಾರೆ.
ರಷ್ಯಾವನ್ನು ಜಾಗತಿಕವಾಗಿ ಒಂಟಿಯಾಗಿಸಲು ಪಾಶ್ಚಿಮಾತ್ಯ ದೇಶಗಳು ನಡೆಸಿದ ಎಲ್ಲಾ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿದ್ದು, ಭಾರತವು ರಷ್ಯಾದ ಅತ್ಯಂತ ವಿಶ್ವಾಸಾರ್ಹ ಪಾಲುದಾರನಾಗಿ ಮುಂದುವರಿದಿದೆ ಎಂದು ಪುಟಿನ್ ತಿಳಿಸಿದ್ದಾರೆ. ಸೋವಿಯತ್ ಒಕ್ಕೂಟದ ಕಾಲದಿಂದಲೂ ನಡೆದುಬಂದಿರುವ ಭಾರತ-ರಷ್ಯಾ ಮಿಲಿಟರಿ ಸಹಕಾರವು ಭವಿಷ್ಯದಲ್ಲೂ ಯಾವುದೇ ಮೂರನೇ ದೇಶದ ರಾಜಕೀಯ ಒತ್ತಡಕ್ಕೆ ಒಳಗಾಗದೆ, ಕೇವಲ ಪರಸ್ಪರ ಬದ್ಧತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ವಲಯದ ಸಹಕಾರವನ್ನು ಮತ್ತಷ್ಟು ಉನ್ನತ ಮಟ್ಟಕ್ಕೊಯ್ಯುವ ನಿಟ್ಟಿನಲ್ಲಿ ದೊಡ್ಡ ಘೋಷಣೆ ಮಾಡಿರುವ ರಷ್ಯಾ ಅಧ್ಯಕ್ಷರು, ವಿಶ್ವದ ಅತ್ಯುತ್ತಮ ಯುದ್ಧ ವಿಮಾನಗಳಲ್ಲಿ ಒಂದಾದ ಐದನೇ ತಲೆಮಾರಿನ ಸುಖೋಯ್ ಸು-57 (Sukhoi Su-57) ಯೋಜನೆಯಲ್ಲಿ ಭಾರತದೊಂದಿಗೆ ಜಂಟಿಯಾಗಿ ಕೆಲಸ ಮಾಡಲು ರಷ್ಯಾ ಸಿದ್ಧವಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಅತ್ಯಾಧುನಿಕ ಯುದ್ಧ ವಿಮಾನದ ಸಂಪೂರ್ಣ ತಂತ್ರಜ್ಞಾನ ವರ್ಗಾವಣೆ (Transfer of Technology) ಮತ್ತು ಅದರ ರಹಸ್ಯ ಸೋರ್ಸ್ ಕೋಡ್ ಅನ್ನು ಭಾರತದೊಂದಿಗೆ ಹಂಚಿಕೊಳ್ಳಲು ರಷ್ಯಾ ಮುಕ್ತವಾಗಿದೆ ಎಂದು ಪುಟಿನ್ ಜಾಗತಿಕ ವೇದಿಕೆಯಲ್ಲಿ ಖಚಿತಪಡಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net