ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿರುವ ಭಾರತವು ಪ್ರಸ್ತುತ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುತ್ತಿದ್ದು, ಮುಂಬರುವ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 100 ಬಿಲಿಯನ್ ಡಾಲರ್ ಮೈಲಿಗಲ್ಲನ್ನು ತಲುಪುವ ವಿಶ್ವಾಸವನ್ನು ಪುಟಿನ್ ವ್ಯಕ್ತಪಡಿಸಿದರು. ಪಿಟಿಐ ಮುಖ್ಯಸ್ಥ ವಿಜಯ್ ಜೋಶಿ ಪ್ರಶ್ನೆಗೆ ಉತ್ತರಿಸಿದ ರಷ್ಯಾ ಅಧ್ಯಕ್ಷರು, ಭಾರತ ಸಾಧಿಸುತ್ತಿರುವ ಈ ಅಭೂತಪೂರ್ವ ಆರ್ಥಿಕ ಪ್ರಗತಿಯು ಆಕಸ್ಮಿಕವಾಗಿ ಬಂದಿದ್ದಲ್ಲ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕಠಿಣ ಪರಿಶ್ರಮ ಮತ್ತು ದೂರದೃಷ್ಟಿಯ ಫಲಿತಾಂಶವಾಗಿದೆ ಎಂದು ಶ್ಲಾಘಿಸಿದರು.