ನಮ್ಮಿಬ್ಬರ ಸಂಬಂಧ ಗಟ್ಟಿ, ಮಾತಿನಲ್ಲಿ ಸೌಜನ್ಯವಿರಲಿ!...ಮೋದಿ ರಾಜತಾಂತ್ರಿಕತೆ ಟೀಕಿಸಿದ್ದ ರಾಹುಲ್​ಗೆ ವಿದೇಶಾಂಗ ಸಚಿವಾಲಯ ಪಾಠ | MEA

MEA | ಮೋದಿ ರಾಜತಾಂತ್ರಿಕತೆ ಟೀಕಿಸಿದ್ದ ರಾಹುಲ್​ಗೆ ವಿದೇಶಾಂಗ ಸಚಿವಾಲಯ ಪಾಠ
MEA | ಮೋದಿ ರಾಜತಾಂತ್ರಿಕತೆ ಟೀಕಿಸಿದ್ದ ರಾಹುಲ್​ಗೆ ವಿದೇಶಾಂಗ ಸಚಿವಾಲಯ ಪಾಠ
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಲೇವಡಿ ಮಾಡುವಾಗ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸಂದೀಪ್ ದೀಕ್ಷಿತ್ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೆಸರನ್ನು ಪ್ರಸ್ತಾಪಿಸಿದ ಬೆನ್ನಲ್ಲೇ, ವಿದೇಶಾಂಗ ಸಚಿವಾಲಯವು (MEA) ರಾಜತಾಂತ್ರಿಕ ಸಂಭಾಷಣೆಗಳಲ್ಲಿ ಪರಸ್ಪರ ಗೌರವ ಇರಬೇಕು ಎಂದು ಖಡಕ್​ ಎಚ್ಚರಿಕೆ ನೀಡಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಇಟಲಿ ನಡುವಿನ ಬಾಂಧವ್ಯವು ಎಲ್ಲಾ ರೀತಿಯಲ್ಲೂ ವಿಸ್ತರಿಸಿದೆ ಮತ್ತು ಬಲಗೊಂಡಿದೆ ಎಂದು ಹೇಳಿದ್ದು, ಎರಡೂ ಕಡೆಯವರು ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದ್ದಾರೆ.

ರಾಜಕೀಯ ವಾಗ್ದಾಳಿಯ ಬಗ್ಗೆ ನೇರವಾಗಿ ವ್ಯಾಖ್ಯಾನಿಸದ ಜೈಸ್ವಾಲ್, ಭಾರತ ಮತ್ತು ಇಟಲಿ ನಡುವಿನ ದ್ವಿಪಕ್ಷೀಯ ಬಾಂಧವ್ಯವು ಬಲಗೊಂಡಿದ್ದು ಪರಸ್ಪರ ಗೌರವ ಮತ್ತು ತಿಳುವಳಿಕೆಯು ರಾಜತಾಂತ್ರಿಕ ಅಭ್ಯಾಸದ ಪ್ರಮುಖ ಭಾಗವಾಗಿದೆ. ಈ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಎರಡೂ ದೇಶಗಳು ಪರಸ್ಪರ ಗೌರವದಿಂದ ಮುಂದುವರಿಯಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಮೋದಿ ಅವರ ವಿದೇಶಾಂಗ ನೀತಿಯ ಕುರಿತು ಕಾಂಗ್ರೆಸ್ ಮಾಡಿದ ಟೀಕೆಯು ರಾಜಕೀಯ ಸಂಘರ್ಷವಾಗಿ ಮಾರ್ಪಟ್ಟಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದ್ದು, ರಾಹುಲ್ ರಾಜಕೀಯ ಸಂಭಾಷಣೆಯ ಎಲ್ಲೆ ಮೀರಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ರಾಹುಲ್​ ಗಾಂಧಿ ಹೇಳಿದ್ದೇನು...?

ಸಮಾವೇಶವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ವಿದೇಶಿ ನಾಯಕರೊಂದಿಗಿನ ವೈಯಕ್ತಿಕ ಸಂಬಂಧಗಳನ್ನು ಪ್ರಧಾನಿ ಮೋದಿಯವರು ರಾಜತಾಂತ್ರಿಕತೆ ಎಂದು ಪರಿಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತ ಶೈಲಿಯನ್ನು ನೆನಪಿಸಿಕೊಂಡಿದ್ದ ಅವರು, ಆ ನಾಯಕರು ತಮ್ಮ ಸ್ನೇಹಿತರು ಎಂಬ ಆಲೋಚನೆ ಪ್ರಧಾನಿ ತಲೆಗೆ ಎಲ್ಲಿಂದ ಬಂತೋ ಗೊತ್ತಿಲ್ಲ ಎಂದಿದ್ದರು.
ತಮ್ಮ ಮಾತನ್ನು ನಿರೂಪಿಸಲು ವೇದಿಕೆಯಲ್ಲಿದ್ದ ಸ್ವಪಕ್ಷೀಯ ನಾಯಕ ಸಂದೀಪ್ ದೀಕ್ಷಿತ್​ರನ್ನು ಆಲಂಗಿಸಿಕೊಂಡಿದ್ದರು. ಈ ವೇಳೆ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಎಂದು ತಿಳಿದು ಹಿಡಿದುಕೊಂಡಿರಾ ಎಂದು ತಮಾಷೆಯಾಗಿ ಕೇಳಿದ್ದಕ್ಕೆ, ರಾಹುಲ್ ನಗುತ್ತಾ ನಾನು ಇನ್ನೂ ಅಲ್ಲಿಯವರೆಗೆ ತಲುಪಿಲ್ಲ ಎಂದು ಉತ್ತರಿಸಿದ್ದರು. ಅಮೆರಿಕ-ಇರಾನ್ ಯುದ್ಧ ಭುಗಿಲೆದ್ದಾಗ ಇಂದಿರಾ ಗಾಂಧಿಯವರಂತಹ ನಾಯಕತ್ವ ಇದ್ದಿದ್ದರೆ ಭಾರತ ಮಧ್ಯಸ್ಥಿಕೆ ವಹಿಸಬಹುದಿತ್ತು, ಆದರೆ ಪಾಕಿಸ್ತಾನ ಆ ಸ್ಥಾನವನ್ನು ಆಕ್ರಮಿಸಿಕೊಂಡಾಗ ನರೇಂದ್ರ ಮೋದಿಯವರು ಸುಮ್ಮನೆ ನೋಡುತ್ತಾ ನಿಂತರು ಎಂದು ರಾಹುಲ್​ ಟೀಕಿಸಿದ್ದರು.

ರಾಹುಲ್ ಗಾಂಧಿ ಹೇಳಿಕೆಗಳ ವಿರುದ್ಧ ಬಿಜೆಪಿ ಕಿಡಿ!..

ಬಿಜೆಪಿ-ಆರ್‌ಎಸ್‌ಎಸ್ ಅನ್ನು ಜೋಕರ್‌ಗಳ ಗುಂಪು ಎಂದು ಕರೆದಿದ್ದು ಸೇರಿದಂತೆ ರಾಹುಲ್ ಗಾಂಧಿ ಹೇಳಿಕೆಗಳ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಸೇರಿದಂತೆ ಹಲವು ನಾಯಕರು, ಗಾಂಧಿ ರಾಜಕೀಯ ಸಂಭಾಷಣೆಯ ಎಲ್ಲೆ ಮೀರಿದ್ದಾರೆ ಹಾಗೂ ಮೆಲೋನಿ ಅವರನ್ನು ಉಲ್ಲೇಖಿಸಿರುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ. ಈ ರಾಜಕೀಯ ಸಂಘರ್ಷಕ್ಕೆ ಈಗ ರಾಜತಾಂತ್ರಿಕ ಪ್ರತಿಕ್ರಿಯೆ ಸಿಕ್ಕಿದ್ದು, ವಿದೇಶಾಂಗ ಸಚಿವಾಲಯವು ಇಟಲಿಯೊಂದಿಗಿನ ಭಾರತದ ಸಂಬಂಧ ಹಾಗೂ ಪರಸ್ಪರ ಗೌರವದ ಅಗತ್ಯವನ್ನು ಎತ್ತಿಹಿಡಿದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net