ಇಂದಿರಾ-ಕ್ಯಾಸ್ಟ್ರೋ ಆಲಿಂಗನ ನೆನಪಿದೆಯಾ...? ರಾಹುಲ್ ಗಾಂಧಿಗೆ ಹಳೆಯ ಫೋಟೋ ತೋರಿಸಿ ತಿರುಗೇಟು ನೀಡಿದ ಸಂಸದ ದುಬೆ! | PM Hug Jab

PM Hug Jab | ಇಂದಿರಾ-ಕ್ಯಾಸ್ಟ್ರೋ ಆಲಿಂಗನ ನೆನಪಿದೆಯಾ...? ರಾಹುಲ್ ಗಾಂಧಿಗೆ ಹಳೆಯ ಫೋಟೋ ತೋರಿಸಿ ತಿರುಗೇಟು ನೀಡಿದ ಸಂಸದ ದುಬೆ!
PM Hug Jab | ಇಂದಿರಾ-ಕ್ಯಾಸ್ಟ್ರೋ ಆಲಿಂಗನ ನೆನಪಿದೆಯಾ...? ರಾಹುಲ್ ಗಾಂಧಿಗೆ ಹಳೆಯ ಫೋಟೋ ತೋರಿಸಿ ತಿರುಗೇಟು ನೀಡಿದ ಸಂಸದ ದುಬೆ!
Published on

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಹಾಗೂ ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವ ಶೈಲಿಯನ್ನು (PM Hug Jab) ಗೇಲಿ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ತಿರುಗೇಟು ನೀಡಿದ್ದು, ಗಾಂಧಿ ಪರಿವಾರದ ರಾಜತಾಂತ್ರಿಕ ಆಲಿಂಗನಗಳ ಹಳೆಯ ಇತಿಹಾಸವನ್ನು ನೆನಪಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದೇ ವಿದೇಶಾಂಗ ನೀತಿ ಎಂಬ ಕಲ್ಪನೆ ಪ್ರಧಾನಿ ಮೋದಿಯವರಿಗೆ ಎಲ್ಲಿಂದ ಬಂತೋ ನನಗಂತೂ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ, ತಮ್ಮ ಮಾತನ್ನು ನಿರೂಪಿಸಲು ವೇದಿಕೆಯಲ್ಲಿದ್ದ ಸ್ವಪಕ್ಷೀಯ ನಾಯಕ ಸಂದೀಪ್ ದೀಕ್ಷಿತ್​ರನ್ನು ಆಲಂಗಿಸಿಕೊಂಡಿದ್ದರು. ಈ ವೇಳೆ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಎಂದು ತಿಳಿದು ಹಿಡಿದುಕೊಂಡಿರಾ ಎಂದು ತಮಾಷೆಯಾಗಿ ಕೇಳಿದ್ದಕ್ಕೆ, ರಾಹುಲ್ ನಗುತ್ತಾ ನಾನು ಇನ್ನೂ ಅಲ್ಲಿಯವರೆಗೆ ತಲುಪಿಲ್ಲ ಎಂದು ಉತ್ತರಿಸಿದ್ದರು. ಈ ಸಂಭಾಷಣೆ ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಯಿತು.
ರಾಹುಲ್ ಗಾಂಧಿ ಹೇಳಿಕೆಗೆ ತಮ್ಮ ಎಕ್ಸ್​ ಖಾತೆಯ ಮೂಲಕ ತಿರುಗೇಟು ನೀಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಹಾಗೂ ಪ್ಯಾಲೆಸ್ಟೈನ್ ನಾಯಕ ಯಾಸಿರ್ ಅರಾಫತ್ ಅವರನ್ನು ಆಲಂಗಿಸಿಕೊಂಡಿರುವ ಫೋಟೋಗಳನ್ನು ಹಾಗೂ ಎಂಟು ವರ್ಷಗಳ ಹಿಂದೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡಿದ್ದ ವೈರಲ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಇದರೊಂದಿಗೆ, ಈ ಆಲಿಂಗನವನ್ನು ಉಸಿರುಕಟ್ಟುವ ಗ್ಯಾಸ್ಟ್ರಿಕ್ ಉರಿ ಎನ್ನುತ್ತೀರಾ ಅಥವಾ ಕಾಮದ ಉರಿ ಎನ್ನುತ್ತೀರಾ ಎಂದು ಬರೆದು ದುಬೆ ಖಾರವಾಗಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಇಂದಿರಾ ಗಾಂಧಿ ಮತ್ತು ಫಿಡೆಲ್ ಕ್ಯಾಸ್ಟ್ರೋ ಭೇಟಿಯ ಹಳೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಹೆಸರನ್ನು ಪ್ರಸ್ತಾಪಿಸಿ ಪ್ರಧಾನಿಯವರನ್ನು ವ್ಯಂಗ್ಯವಾಡಿದ್ದಕ್ಕಾಗಿ ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರು, ಪ್ರಧಾನಿಯವರನ್ನು ಅಪಮಾನಿಸುವ ಮೂಲಕ ಮೋದಿಯವರನ್ನು ಮೂರು ಬಾರಿ ಐತಿಹಾಸಿಕವಾಗಿ ಆಯ್ಕೆ ಮಾಡಿದ ಕೋಟ್ಯಂತರ ಮತದಾರರನ್ನು ಗೇಲಿ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದುಕೊಂಡು ರಾಹುಲ್ ಗಾಂಧಿ ಬಳಸಿರುವ ಭಾಷೆ ಸಂಸ್ಕೃತಿರಹಿತ ಮತ್ತು ಅಸಂಸದೀಯವಾದುದು ಎಂದು ಕಿಡಿಕಾರಿದ್ದಾರೆ.

ಇನ್ನು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು, ರಾಜಕೀಯ ವಿಮರ್ಶೆಯ ನೆಪದಲ್ಲಿ ಮಹಿಳೆಯರನ್ನು ಅಪಮಾನಿಸಿ ಸಾರ್ವಜನಿಕ ಜೀವನವನ್ನು ಅಸಭ್ಯ ಹಾಸ್ಯಕ್ಕೆ ತಳ್ಳುವುದು ರಾಹುಲ್ ಗಾಂಧಿ ಅವರ ರಾಜಕೀಯ ಪರಿಪಕ್ವತೆಯ ಕೊರತೆಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net