ನವದೆಹಲಿ: ದೀಪಾವಳಿ ಹಬ್ಬದ ಸಡಗರದ ಸಮಯದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ಬೃಹತ್ ರ‍್ಯಾಲಿಯು ರಾಷ್ಟ್ರ ರಾಜಕೀಯದಲ್ಲಿ ಸಣ್ಣ ಮಟ್ಟದಲ್ಲಿ ಸಂಚಲನ ಮೂಡಿಸುವುದರ ಜೊತೆಗೆ ವ್ಯಾಪಾರ ವಹಿವಾಟು ನಷ್ಟಕ್ಕೆ (Delhi Traders Loss) ಕಾರಣವಾಗಿದೆ. ದೆಹಲಿಯಾದ್ಯಂತ ವ್ಯಾಪಕ ಸಂಚಾರ ದಟ್ಟಣೆ ಹಾಗೂ ಮಳಿಗೆಗಳು ಮುಚ್ಚಿದ್ದರಿಂದ ಲಕ್ಷಾಂತರ ರೂಪಾಯಿ ವಹಿವಾಟು ಕುಸಿದಿದ್ದು, ವ್ಯಾಪಾರ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ನೀಡಿರುವ ಮಾಹಿತಿಯ ಪ್ರಕಾರ, ದೀಪಾವಳಿಯ ಪ್ರಮುಖ ವ್ಯಾಪಾರ ಅವಧಿಯಲ್ಲಿ ನಡೆದ ಈ ರ‍್ಯಾಲಿಯಿಂದಾಗಿ 25 ಪ್ರಮುಖ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳ ಸುಮಾರು 3 ಲಕ್ಷ ಅಂಗಡಿಗಳಲ್ಲಿ 2.5 ಲಕ್ಷ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಿದ್ದವು. ಚಾಂದನಿ ಚೌಕ್, ಸದರ್ ಬಜಾರ್, ಕನ್ನಾಟ್ ಪ್ಲೇಸ್, ಕರೋಲ್ ಬಾಗ್ ಮತ್ತು ಕಾಶ್ಮೀರಿ ಗೇಟ್‌ನಂತಹ ಜನನಿಬಿಡ ಮಾರುಕಟ್ಟೆಗಳು ಅತಿ ಹೆಚ್ಚು ನಷ್ಟ ಅನುಭವಿಸಿವೆ.
ಹಬ್ಬದ ಈ ಮಹತ್ವದ ಸಮಯದಲ್ಲಿ ನಡೆದ ರ‍್ಯಾಲಿಯಿಂದಾಗಿ ಒಟ್ಟು 10,000 ಕೋಟಿ ರೂ. ನಿಂದ 12,000 ಕೋಟಿ ರೂ. ವರೆಗೆ ವ್ಯಾಪಾರ ನಷ್ಟ ಉಂಟಾಗಿದೆ ಎಂದು ಸಿಟಿಐ ಚೇರ್ಮನ್ ಬ್ರಿಜೇಶ್ ಗೋಯಲ್ ಮತ್ತು ವಿವಿಧ ವ್ಯಾಪಾರಿ ಸಂಘಟನೆಗಳು ಅಂದಾಜಿಸಿವೆ. ದೀಪಾವಳಿಗೆ ಮುನ್ನ ರ‍್ಯಾಲಿಯನ್ನು ಮುಂದೂಡುವಂತೆ ಅಥವಾ ಸ್ಥಳ ಬದಲಾಯಿಸುವಂತೆ ಕೋರಿ ವ್ಯಾಪಾರಿ ಸಂಘಟನೆಗಳು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದವು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಕ್ಟೋಬರ್ 24, 27, 28 ಹಾಗೂ ನವೆಂಬರ್ 1 ರಂದು ಸತತ ನಾಲ್ಕು ಪತ್ರಗಳನ್ನು ಬರೆದು ಮನವಿ ಮಾಡಿದ್ದರೂ, ರ‍್ಯಾಲಿಯನ್ನು ರದ್ದುಪಡಿಸದೆ ಹಾಗೇ ಮುಂದುವರಿಸಲಾಯಿತು ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಾಪಾರಿಗಳಿಗಾದ ನಷ್ಟ ಹಾಗೂ ರ‍್ಯಾಲಿಯ ಸಮಯದ ಕುರಿತು ಆಡಳಿತರೂಢ ಬಿಜೆಪಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಗೌರವ್ ವಲ್ಲಭ್ ವಿಪಕ್ಷಗಳ ಈ ಪ್ರತಿಭಟನೆಯನ್ನು ಅವ್ಯವಸ್ಥೆಯ ಗೂಡು ಎಂದು ಟೀಕಿಸಿದ್ದು, ವ್ಯಾಪಾರಿಗಳು ಕೋಟ್ಯಂತರ ರೂ. ನಷ್ಟ ಅನುಭವಿಸುವಂತೆ ಮಾಡಿದ್ದಾರೆ ಆರೋಪಿಸಿದ್ದಾರೆ. ಇದಲ್ಲದೆ, 1984ರ ಸಿಖ್ ವಿರೋಧಿ ದಂಗೆಯ ವಾರ್ಷಿಕೋತ್ಸವದಂದೇ ದೆಹಲಿಯಲ್ಲಿ ರಾಹುಲ್ ಗಾಂಧಿ ರ‍್ಯಾಲಿ ನಡೆಸಿರುವುದು ಸಂತ್ರಸ್ತರ ಗಾಯದ ಮೇಲೆ ಉಪ್ಪು ಸವರಿದಂತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಖಂಡಿಸಿದ್ದಾರೆ.
ಮತ್ತೊಂದೆಡೆ, ಕನ್ನಾಟ್ ಪ್ಲೇಸ್‌ನಲ್ಲಿ ವ್ಯಾಪಾರ ಮುಚ್ಚಿಸಿರುವ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವ್ಯಾಪಾರಿಗಳ ನಷ್ಟಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪಿಸಿದ್ದಾರೆ. ನಾವು ಎಲ್ಲರಿಗೂ ರ‍್ಯಾಲಿಗೆ ಬರುವಾಗ ಶಾಪಿಂಗ್ ಮಾಡುವಂತೆ ಹೇಳಿದ್ದೆವು. ಆದರೆ ಕನ್ನಾಟ್ ಪ್ಲೇಸ್‌ಗೆ ಬರುವಾಗ ಬಿಜೆಪಿಯೇ ಬಲವಂತವಾಗಿ ಪ್ರತಿಯೊಂದು ಅಂಗಡಿಯನ್ನು ಮುಚ್ಚಿಸಿದೆ ಎಂಬುದು ನಮಗೆ ತಿಳಿಯಿತು. ಹೀಗಾಗಿ ವ್ಯಾಪಾರಿಗಳಿಗೆ ನಿಜವಾಗಿಯೂ ನಷ್ಟಂಟು ಮಾಡುತ್ತಿರುವವರು ಯಾರು ಎಂಬುದು ಜನರಿಗೆ ಗೊತ್ತಾಗಬೇಕು ಎಂದು ರಾಹುಲ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ, ದೀಪಾವಳಿಯಂತಹ ಹಬ್ಬದ ಸಮಯದಲ್ಲಿ ನಡೆದ ಈ ಪ್ರತಿಭಟನಾ ರ‍್ಯಾಲಿಯು ರಾಜಕೀಯ ಕೆಸರೆರೆಚಾಟಕ್ಕೆ ನಾಂದಿ ಹಾಡುವುದರ ಜೊತೆಗೆ ದೆಹಲಿಯ ವ್ಯಾಪಾರ ವಲಯಕ್ಕೆ ಭಾರೀ ಆರ್ಥಿಕ ಹೊಡೆತ ನೀಡಿರುವುದು ಸುಳ್ಳಲ್ಲ(ಏಜೆನ್ಸೀಸ್).