ದೆಹಲಿಯಲ್ಲಿರುವ ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿಸಿದ್ದೇ ಬಿಜೆಪಿ! ರಾಹುಲ್ ಗಾಂಧಿ ಗಂಭೀರ ಆರೋಪ | Rahul Gandhi

ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿಸಿದ್ದೇ ಬಿಜೆಪಿ!
ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿಸಿದ್ದೇ ಬಿಜೆಪಿ!
Published on: 

ನವದೆಹಲಿ: ಇಂಡಿಯಾ ಒಕ್ಕೂಟದ ವತಿಯಿಂದ ಇಂದು (ನವೆಂಬರ್ 1) ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಮತ್ತು ರಾಮಲೀಲಾ ಮೈದಾನದ ಮೆಗಾ ರಾಲಿಯ ಸಂದರ್ಭದಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ. ರ‍್ಯಾಲಿಗೆ ಆಗಮಿಸುವ ಜನರು ಸ್ಥಳೀಯ ಮಾರುಕಟ್ಟೆಗಳಲ್ಲಿ ಹಬ್ಬದ ಶಾಪಿಂಗ್ ಮಾಡುವ ಮೂಲಕ ಸಣ್ಣ ವ್ಯಾಪಾರಿಗಳನ್ನು ಬೆಂಬಲಿಸಬೇಕು ಎಂದು ತಾವು ನೀಡಿದ್ದ ಕಳಕಳಿಗೆ ತದ್ವಿರುದ್ಧವಾಗಿ, ದೆಹಲಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕನ್ನಾಟ್ ಪ್ಲೇಸ್‌ನಲ್ಲಿ ಬಿಜೆಪಿಯು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದೆ ಎಂದು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರತಿಭಟನೆಯ ಜೊತೆಗೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿಯನ್ನೂ ಮಾಡುವಂತೆ ತಾವು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದೆವು. ಆದರೆ, ರ‍್ಯಾಲಿ ಮತ್ತು ಮೆರವಣಿಗೆಯ ಹಾದಿಯಲ್ಲಿರುವ ಕನ್ನಾಟ್ ಪ್ಲೇಸ್‌ಗೆ ಆಗಮಿಸಿದಾಗ ಅಲ್ಲಿನ ಪ್ರತಿಯೊಂದು ಅಂಗಡಿಯೂ ಬಂದ್ ಆಗಿರುವುದು ಕಂಡುಬಂದಿದೆ. ಬಿಜೆಪಿಯೇ ಸ್ವತಃ ಬಲವಂತವಾಗಿ ಈ ಅಂಗಡಿಗಳನ್ನು ಮುಚ್ಚಿಸುವ ಮೂಲಕ ವ್ಯಾಪಾರಿಗಳಿಗೆ ಭಾರೀ ಆರ್ಥಿಕ ನಷ್ಟವನ್ನು ಉಂಟುಮಾಡಿದೆ ಎಂದು ಕಿಡಿಕಾರಿದ್ದಾರೆ. ವ್ಯಾಪಾರಿಗಳಿಗೆ ಯಾರಿಂದ ಮತ್ತು ಹೇಗೆ ನಷ್ಟವಾಗುತ್ತಿದೆ ಎಂಬುದನ್ನು ಸಾರ್ವಜನಿಕರು ಅರಿಯಬೇಕು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

'ದೆಹಲಿ ಚಲೋ' ಮೆರವಣಿಗೆ, ಪ್ರಮುಖ ನಾಯಕರ ಭಾಗಿ!

ಮಧ್ಯ ದೆಹಲಿಯಲ್ಲಿ ಬಿಗಿ ಭದ್ರತೆ ಹಾಗೂ ವ್ಯಾಪಕ ಸಂಚಾರ ನಿರ್ಬಂಧಗಳ ನಡುವೆಯೂ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರು ದೆಹಲಿಗೆ ಆಗಮಿಸಿದ್ದರು. ಮಂಟೋ ರಸ್ತೆ-ಕನ್ನಾಟ್ ಪ್ಲೇಸ್ ಜಂಕ್ಷನ್‌ನಿಂದ ಆರಂಭವಾದ ಈ ಬೃಹತ್ ಮೆರವಣಿಗೆಯು ರಾಮಲೀಲಾ ಮೈದಾನದವರೆಗೆ ಸಾಗಿತು. ವೋಟ್ ಬಚಾವೋ, ದೇಶ್ ಬಚಾವೋ (ಮತ ಉಳಿಸಿ, ದೇಶ ಉಳಿಸಿ) ಎಂಬ ಘೋಷವಾಳಗಳಿರುವ ಬ್ಯಾನರ್‌ಗಳನ್ನು ಪ್ರದರ್ಶಿಸುತ್ತಾ ನಾಯಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖಾರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಹಲವು ದಿಗ್ಗಜರು ಈ ಮೆಗಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Also Read
ರ‍್ಯಾಲಿಗೆ ಬನ್ನಿ, ಸ್ಥಳೀಯ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಿ ಸಣ್ಣ ವ್ಯಾಪಾರಿಗಳನ್ನು ಬೆಂಬಲಿಸಿ: ಕೈ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಕರೆ! | Rahul Gandhi
ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿಸಿದ್ದೇ ಬಿಜೆಪಿ!

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ಸಮರ!

ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್​​ಐಆರ್​) ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಯಿಂದ ಕಾನೂನುಬದ್ಧ ಮತದಾರರನ್ನು ಏಕಪಕ್ಷೀಯವಾಗಿ ಕೈಬಿಡುತ್ತಿರುವ ಕ್ರಮವನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಇವಿಎಂ ಯಂತ್ರಗಳ ಬದಲಿಗೆ ಮತ್ತೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ವಿಪಕ್ಷ ನಾಯಕರು ಒತ್ತಾಯಿಸಿದರು.

ಬಿಜೆಪಿಯಿಂದ ಕೌಂಟರ್​ ರ‍್ಯಾಲಿ!

ಮತ್ತೊಂದೆಡೆ, ನವೆಂಬರ್ 1ರಂದೇ 1984ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರನ್ನು ಸ್ಮರಿಸುವ ಉದ್ದೇಶದಿಂದ ಬಿಜೆಪಿಯು ಪಶ್ಚಿಮ ದೆಹಲಿಯಲ್ಲಿ ಪ್ರತ್ಯೇಕ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತು. ಕಾಂಗ್ರೆಸ್ ಪಕ್ಷವು ವ್ಯವಸ್ಥಿತವಾಗಿ ದಂಗೆಯ ನಡೆದ ದಿನದಂದೇ ರಾಜಕೀಯ ರ‍್ಯಾಲಿ ಹಮ್ಮಿಕೊಂಡಿದೆ ಎಂದು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿದರು. ಹರಿ ನಗರ ಬಸ್ ಡಿಪೋದಿಂದ ಆರಂಭವಾದ ಈ ಮೆರವಣಿಗೆ ತಿಲಕ್ ನಗರ ಮೆಟ್ರೋ ನಿಲ್ದಾಣದವರೆಗೆ ಸಾಗಿತು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ಸಚಿವೆ ರೇಖಾ ಗುಪ್ತಾ, ಸಂಸದೆ ಬಾನ್ಸುರಿ ಸ್ವರಾಜ್ ಹಾಗೂ ಪ್ರಮುಖ ನಾಯಕರು ಸಿಖ್ ಸಮುದಾಯದ ಸದಸ್ಯರೊಂದಿಗೆ ಈ ಮೆರವಣಿಗೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ, ದೆಹಲಿಯಲ್ಲಿ ರಾಜಕೀಯ ಪಕ್ಷಗಳ ಬೃಹತ್ ಪ್ರತಿಭಟನೆಗಳು ಮತ್ತು ವಾಗ್ವಾದಗಳಿಂದಾಗಿ ರಾಜಕೀಯ ವಾತಾವರಣವು ತೀವ್ರ ಕಾವೇರಿತ್ತು(ಏಜೆನ್ಸೀಸ್​).

Related Stories

ರಾಹುಲ್ ಗಾಂಧಿ
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಅಡ್ಡದಾರಿಯಿಂದ: ರಾಹುಲ್ ಗಾಂಧಿ ಗಂಭೀರ ಆರೋಪ
ಮತ ಮತ್ತು ದೇಶದ ಉಳಿವಿಗಾಗಿ ರಾಮಲೀಲಾ ಮೈದಾನಕ್ಕೆ ಬನ್ನಿ!... ಯುವಜನತೆಗೆ ರಾಹುಲ್ ಗಾಂಧಿ ಕರೆ; ಬಿಜೆಪಿಗೆ ಧನ್ಯವಾದ ಹೇಳಿದ್ದೇಕೆ..? | Rahul Gandhi
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ