ಡಿಸೆಂಬರ್‌ನಲ್ಲಿ ಮೊಟ್ಟೆ, ಚಿಕನ್ ದರ ಇನ್ನೂ ಹೆಚ್ಚಳ ಸಾಧ್ಯತೆ! ಮಾಂಸ ಪ್ರಿಯರಿಗೆ ದಿಢೀರ್​ ಏರಿಕೆ ಬಿಸಿಗೆ ಹೀಗಿದೆ ಕಾರಣ | Egg Price

Egg Price
ಡಿಸೆಂಬರ್‌ನಲ್ಲಿ ಮೊಟ್ಟೆ, ಚಿಕನ್ ದರ ಇನ್ನೂ ಹೆಚ್ಚಳ ಸಾಧ್ಯತೆ! ಮಾಂಸ ಪ್ರಿಯರಿಗೆ ದಿಢೀರ್​ ಏರಿಕೆ ಬಿಸಿಗೆ ಹೀಗಿದೆ ಕಾರಣ | Egg Price
Published on: 

ಬೆಂಗಳೂರು: ಕಳೆದ ಕೆಲವು ದಿನಗಳಿಂದ 7 ರೂ. ಇದ್ದ ಮೊಟ್ಟೆ ಇದೀಗ 8ರಿಂದ 8.5 ರೂ.ಗೆ ದಿಢೀರ್​ ಏರಿಕೆಯಾಗಿದ್ದು, ಕೋಳಿ ಮಾಂಸದ ದರವು ದುಪ್ಪಟ್ಟಾಗಲಿದೆ ಎಂದು ವರದಿಯಾಗಿದೆ.

ಮೆಕ್ಕೆಜೋಳ ಮತ್ತು ನುಚ್ಚಕ್ಕಿಯ ಬೆಲೆ

ಡಿಸೆಂಬರ್​ನಲ್ಲಿ ಕೋಳಿ ಮೊಟ್ಟೆ ಮತ್ತು ಮಾಂಸದ ದರ ಇನ್ನೂ ಏರಿಕೆಯಾಗುವ ಸಾಧ್ಯತೆಯಿದ್ದು, ಜನಸಾಮಾನ್ಯರ ಅಡುಗೆ ಮನೆಯ ಬಜೆಟ್‌ಗೆ ಮತ್ತಷ್ಟು ಹೊಡೆತ ಬೀಳುವ ಆತಂಕ ಎದುರಾಗಿದೆ. ಕೋಳಿ ಆಹಾರ ತಯಾರಿಕೆಗೆ ಬಳಸುವ ಮೆಕ್ಕೆಜೋಳ ಮತ್ತು ನುಚ್ಚಕ್ಕಿಯ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆ ಆಗಿರುವುದೇ ಈ ಬೆಳವಣಿಗೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ 7ರಿಂದ 8 ರೂಪಾಯಿ ಇದ್ದು, ಡಿಸೆಂಬರ್ ವೇಳೆಗೆ 8ರಿಂದ 9 ರೂಪಾಯಿಗೆ ಏರಬಹುದು ಎಂದು ಉದ್ಯಮದ ಮೂಲಗಳು ಅಂದಾಜಿಸಿವೆ. ಇನ್ನೂ ಸ್ಕಿನ್​ ಲೆಸ್​ ಕೋಳಿ ಮಾಂಸದ ಬೆಲೆ ಕೆಜಿಗೆ ಈಗಿರುವ 225-250 ರೂ.ಯಿಂದ 260-275 ರೂ.ಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿವರಿಸಲಾಗಿದೆ. ಕಳೆದ ವರ್ಷ ಕೆಜಿಗೆ ಸುಮಾರು 18 ರೂ. ಇದ್ದ ಮೆಕ್ಕೆಜೋಳದ ಬೆಲೆ ಈಗ 34 ರೂಪಾಯಿಗೆ ತಲುಪಿದೆ. ಡಿಸೆಂಬರ್ ವೇಳೆಗೆ ಇದು 40 ರೂಪಾಯಿಗೆ ಏರಬಹುದು ಎಂಬ ಆತಂಕವೂ ಇದೆ.

ಮುಂಗಾರು ಮಳೆ ಕೊರತೆ

ಇನ್ನು ನುಚ್ಚಕ್ಕಿಯ ಬೆಲೆ ಕಳೆದ ವರ್ಷ 14ರಿಂದ 15 ರೂಪಾಯಿ ಇದ್ದದ್ದು, ಈಗ 31ರಿಂದ 32 ರೂಪಾಯಿಗೆ ಹೆಚ್ಚಾಗಿರುವುದು ಕೋಳಿ ಸಾಕಾಣಿಕೆದಾರರಲ್ಲಿ ಖರ್ಚು-ವೆಚ್ಚದ ಚಿಂತೆ ತಂದೊಡ್ಡಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆಯಿಂದ ಮೆಕ್ಕೆಜೋಳದ ಉತ್ಪಾದನೆ ಶೇ.15ರಿಂದ 16ರಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಉದ್ಯಮದ ಅಂದಾಜುಗಳು ತಿಳಿಸಿವೆ. ಮತ್ತೊಂದೆಡೆ, ಮೆಕ್ಕೆಜೋಳವನ್ನು ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದೂ ಬೆಲೆ ಏರಿಕೆಗೆ ಕಾರಣವಾಗಿದೆ.

Also Read
ಜನಾಕ್ರೋಶಕ್ಕೆ ಬೆದರಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ತಂದೆ: ರಾತ್ರೋರಾತ್ರಿ ಬುಲ್ಡೋಜರ್ ತಂದು ರಸ್ತೆ ತೆರವು...! Maithili Thakur
Egg Price

ಡಿಸೆಂಬರ್ ಮತ್ತು ಜನವರಿಯಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆಚರಣೆಗಳ ಹಿನ್ನೆಲೆಯಲ್ಲಿ ಮೊಟ್ಟೆ ಮತ್ತು ಕೋಳಿ ಮಾಂಸಕ್ಕೆ ಎಂದಿನಂತೆ ಡಿಮಾಂಡ್​ ಹೆಚ್ಚಾಗಲಿದೆ. ಆದರೆ, ಆಹಾರದ ವೆಚ್ಚ ಹೆಚ್ಚುತ್ತಿರುವುದರಿಂದ ಈ ಅವಧಿಯಲ್ಲಿ ಕೋಳಿ ಉತ್ಪಾದನೆ ಶೇ.20ಕ್ಕಿಂತ ಹೆಚ್ಚು ಕುಸಿಯುವ ಸಾಧ್ಯತೆಯಿದೆ ಎಂದು ಉದ್ಯಮದ ಪ್ರತಿನಿಧಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).