

ಪಟನಾ: ಬಿಹಾರದ ದರ್ಭಂಗಾ ಜಿಲ್ಲೆಯ ಅಲಿನಗರ ಕ್ಷೇತ್ರದ ಬಿಜೆಪಿ ಶಾಸಕಿ ಹಾಗೂ ಖ್ಯಾತ ಗಾಯಕಿ ಮೈಥಿಲಿ ಠಾಕೂರ್ ( Maithili Thakur ) ಕುಟುಂಬವೀಗ ಗಂಭೀರ ಭೂಕಬಳಿಕೆ ಆರೋಪದ ಸುಳಿಯಲ್ಲಿ ಸಿಲುಕಿದೆ. ಮೈಥಿಲಿ ಅವರ ತಂದೆ ರಮೇಶ್ ಠಾಕೂರ್, ಸರ್ಕಾರಿ ಹಾಗೂ ಖಾಸಗಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ರಸ್ತೆ ಮತ್ತು ತಡೆಗೋಡೆ ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ನೇರವಾಗಿ ಬಿಹಾರ ಮುಖ್ಯಮಂತ್ರಿಗಳ ಕಚೇರಿ ಹಾಗೂ ವಲಯ ಅಧಿಕಾರಿಗಳಿಗೆ (Zonal Officer) ದೂರು ನೀಡಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಇತ್ತ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಮತ್ತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಮೇಶ್ ಠಾಕೂರ್ ಅವರು ಸ್ವತಃ ಮುಂದೆ ನಿಂತು ರಾತ್ರೋರಾತ್ರಿ ಬುಲ್ಡೋಜರ್ ಬಳಸಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ರಸ್ತೆ ಹಾಗೂ ತಡೆಗೋಡೆಯನ್ನು ತೆರವುಗೊಳಿಸಿದ್ದಾರೆ ಎಂದು ವರದಿಯಾಗಿದೆ.
ದರ್ಭಂಗಾ ಜಿಲ್ಲೆಯ ತಾರ್ದೀಹ್ ಬ್ಲಾಕ್‌ನ ಪೋಖರ್‌ಭಿಂದಾ ಪಂಚಾಯತ್‌ನಲ್ಲಿ ರಮೇಶ್ ಠಾಕೂರ್ ಅವರು ಇತ್ತೀಚೆಗೆ ಭೂಮಿಯನ್ನು ಖರೀದಿಸಿದ್ದಾರೆ. ಆ ಜಾಗದಲ್ಲಿ ವಾಸಕ್ಕಾಗಿ ಮನೆ ನಿರ್ಮಿಸುತ್ತಿದ್ದಾರೆ. ಆದರೆ, ಈ ನಿರ್ಮಾಣ ಕಾರ್ಯದ ವೇಳೆ ಗ್ರಾಮದ ದೇವರಾದ ತಿವಾರಿ ಬಾಬಾ ದೇವಸ್ಥಾನದ ಸಮೀಪದ ಜಾಗ, ಸಮುದಾಯದ ಅಂತ್ಯಕ್ರಿಯೆ ಸ್ಥಳ, ಖಾಸಗಿ ಸ್ಮಶಾನ ಹಾಗೂ ಶಶಿನಾಥ್ ಮಿಶ್ರಾ ಚೌಕದಿಂದ ಜಲಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸಾರ್ವಜನಿಕ ರಸ್ತೆಗೆ ಅಡ್ಡಿಯಾಗುವಂತೆ ತಡೆಗೋಡೆ ನಿರ್ಮಿಸಲಾಗಿದೆ ಎಂಬುದು ಗ್ರಾಮಸ್ಥರ ಪ್ರಮುಖ ದೂರಾಗಿದೆ. ಈ ಸಂಬಂಧ ಗ್ರಾಮಸ್ಥರು ಮುಖ್ಯಮಂತ್ರಿಗಳ ಕಚೇರಿಗೆ ದೂರು ಸಲ್ಲಿಸಿದ ನಂತರ, ಗುರುವಾರದಂದು ಝಂಝರ್‌ಪುರದ ಉಪ-ವಿಭಾಗೀಯ ಭೂ ಸುಧಾರಣಾ ಅಧಿಕಾರಿ (DCLR) ಹಾಗೂ ವಲಯ ಅಧಿಕಾರಿ (CO) ಸ್ಥಳಕ್ಕೆ ಭೇಟಿ ನೀಡಿ ವಿವಾದಿತ ಭೂಮಿಯ ಅಳತೆ ಕಾರ್ಯ ನಡೆಸಿದರು.
ಪ್ರಾಥಮಿಕ ಗಡಿ ಗುರುತಿಸುವಿಕೆ ಮತ್ತು ಅಳತೆ ಕಾರ್ಯದ ನಂತರ, ಮುಖ್ಯ ದ್ವಾರದ ಹೊರಗೆ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಬೇಲಿ, ಪಾದಚಾರಿ ಮಾರ್ಗ ಮತ್ತು ವಿಭಜಕವನ್ನು ತಕ್ಷಣವೇ ತೆರವುಗೊಳಿಸುವಂತೆ ಡಿ.ಸಿ.ಎಲ್.ಆರ್ (DCLR) ಅಧಿಕಾರಿಗಳು ಆದೇಶಿಸಿದರು. ಅಲ್ಲದೆ, ಆಡಳಿತದಿಂದ ಮುಂದಿನ ಆದೇಶ ಬರುವವರೆಗೂ ಎರಡೂ ಕಡೆಯವರು ಸ್ಥಳದಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ಅಧಿಕಾರಿಗಳ ಸೂಚನೆಯ ಮೇರೆಗೆ ಕಾರ್ಮಿಕರು ಗೇಟ್ ಹೊರಗಿನ ನಿರ್ಮಾಣಗಳನ್ನು ತೆರವುಗೊಳಿಸಲು ಆರಂಭಿಸಿದರು. ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ಕಾನೂನುಬದ್ಧವಾಗಿ ಈ ವಿವಾದವನ್ನು ಇತ್ಯರ್ಥಪಡಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಶಾಸಕಿ ಮೈಥಿಲಿ ಠಾಕೂರ್ ಮತ್ತು ಅವರ ತಂದೆಯ ವಿರುದ್ಧ ನೆಟ್ಟಿಗರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಬಿಹಾರದಲ್ಲಿ 'ಜಂಗಲ್ ರಾಜ್' ಇದ್ದ ಕಾರಣಕ್ಕೆ ತಾವು ದೆಹಲಿಗೆ ವಲಸೆ ಹೋಗಬೇಕಾಯಿತು ಎಂದು ರಮೇಶ್ ಠಾಕೂರ್ ಅವರು ನೀಡಿದ್ದ ಹಳೆಯ ಹೇಳಿಕೆಗಳನ್ನು ಉಲ್ಲೇಖಿಸಿ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ತೀವ್ರ ಮುಜುಗರ ಮತ್ತು ಸಾರ್ವಜನಿಕ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ, ರಮೇಶ್ ಠಾಕೂರ್ ಅವರು ತಡರಾತ್ರಿ ಸ್ವತಃ ಸ್ಥಳದಲ್ಲಿದ್ದುಕೊಂಡು ಬುಲ್ಡೋಜರ್ ಸಹಾಯದಿಂದ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ರಸ್ತೆ ಮತ್ತು ತಡೆಗೋಡೆಯನ್ನು ನೆಲಸಮಗೊಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ಮತ್ತೊಂದೆಡೆ, ತಮ್ಮ ಕುಟುಂಬದ ವಿರುದ್ಧ ಕೇಳಿಬಂದಿರುವ ಎಲ್ಲಾ ಭೂಕಬಳಿಕೆ ಆರೋಪಗಳನ್ನು ಶಾಸಕಿ ಮೈಥಿಲಿ ಠಾಕೂರ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಆರೋಪಗಳು ಸಂಪೂರ್ಣ ಆಧಾರರಹಿತ ಮತ್ತು ಸುಳ್ಳಿನಿಂದ ಕೂಡಿವೆ. ನಮ್ಮ ಕುಟುಂಬದ ಬಳಿ ಭೂಮಿಗೆ ಸಂಬಂಧಿಸಿದ ಎಲ್ಲಾ ಅಧಿಕೃತ ದಾಖಲೆಗಳಿವೆ ಮತ್ತು ನಾವು ಯಾರ ಜಾಗವನ್ನೂ ಒತ್ತುವರಿ ಮಾಡಿಕೊಂಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವ ಬದಲು, ಆರೋಪ ಮಾಡುವವರು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ವಲಯ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದ ಮುಂದೆ ಅಧಿಕೃತವಾಗಿ ದೂರು ದಾಖಲಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ಈ ಭೂ ವಿವಾದವು ಬಿಹಾರ ರಾಜಕೀಯದಲ್ಲೂ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ವಿಪಕ್ಷದ ನಾಯಕರು ಆಡಳಿತಾರೂಢ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ. ರಾಷ್ಟ್ರೀಯ ಜನತಾ ದಳ (RJD) ಶಾಸಕ ಭಾಯಿ ವೀರೇಂದ್ರ ಮತ್ತು ಮಾಜಿ ಶಾಸಕ ತೇಜ್ ಪ್ರತಾಪ್ ಯಾದವ್ ಅವರು ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ಮತ್ತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಅಧಿಕಾರದ ಪ್ರಭಾವವನ್ನು ಬಳಸಿಕೊಂಡು ಬಡವರ ಹಾಗೂ ಸರ್ಕಾರಿ ಭೂಮಿಯನ್ನು ಕಬಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದು, ಶಾಸಕಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ವಲಯ ಅಧಿಕಾರಿ ಅಲೋಕ್ ಕುಮಾರ್ ಅವರು, ಗ್ರಾಮಸ್ಥರಿಂದ ದೂರು ಸ್ವೀಕರಿಸಿರುವುದನ್ನು ಖಚಿತಪಡಿಸಿದ್ದಾರೆ. ಈ ವಿವಾದವನ್ನು ಬಗೆಹರಿಸಲು ಎರಡೂ ಕಡೆಯವರನ್ನು 'ಜನತಾ ದರ್ಬಾರ್'ಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಎರಡೂ ಪಕ್ಷಗಳ ಬಳಿಯಿರುವ ಭೂ ದಾಖಲೆಗಳು ಮತ್ತು ಕಂದಾಯ ಇಲಾಖೆಯ ನಕ್ಷೆಗಳನ್ನು ಪರಿಶೀಲಿಸಿದ ನಂತರ ಕಾನೂನು ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಸ್ಪಷ್ಟಪಡಿಸಿದ್ದು, ಈ ಪ್ರಕರಣವು ಮುಂದೆ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ, (ಏಜೆನ್ಸೀಸ್).