ಮದುವೆ ಇಷ್ಟವಿಲ್ಲದಿದ್ರೆ 'ಬೇಡ' ಎನ್ನಿ, ಕೊಲ್ಲಬೇಡಿ...ಪುಣೆ ಸಿಯಾಳ ಕ್ರೌರ್ಯಕ್ಕೆ ಸೋನಮ್ ಪ್ರಕರಣವೇ ಪ್ರೇರಣೆ: ರಘುವಂಶಿ ತಾಯಿ ಆರೋಪ! Ketan Agarwal and Raja Raghuvanshi Murder

ಸಿಯಾಳ ಕ್ರೌರ್ಯಕ್ಕೆ ಇಂದೋರ್‌ನ ಸೋನಮ್ ಕೇಸ್ ಪ್ರೇರಣೆಯೇ?
ಸಿಯಾಳ ಕ್ರೌರ್ಯಕ್ಕೆ ಇಂದೋರ್‌ನ ಸೋನಮ್ ಕೇಸ್ ಪ್ರೇರಣೆಯೇ?
Published on

ಪ್ರಮುಖ ಮುಖ್ಯಾಂಶಗಳು

  • ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಪುಣೆಯ ಕೇತನ್ ಅಗರ್‌ವಾಲ್ ಹತ್ಯೆ ಪ್ರಕರಣ
  • ಭಾವಿ ಪತಿಯನ್ನೇ ಕಣಿವೆಗೆ ತಳ್ಳಿದ ಸಿಯಾಳ ಕ್ರೌರ್ಯಕ್ಕೆ ಇಂದೋರ್‌ನ ಸೋನಮ್ ಕೇಸ್ ಪ್ರೇರಣೆಯೇ?
  • ಪುಣೆ ಕೊಲೆ ಪ್ರಕರಣದ ಬೆನ್ನಲ್ಲೇ ಇಂದೋರ್‌ನ ರಘುವಂಶಿ ಕುಟುಂಬದ ಹಳೇ ಕಣ್ಣೀರಿನ ಗಾಯ ಮತ್ತೆ ಹಸಿ
ಪುಣೆ: ಇತ್ತೀಚೆಗೆ ಪುಣೆಯಲ್ಲಿ ನಡೆದ ಕೇತನ್ ಅಗರ್​ವಾಲ್​ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ನಿಶ್ಚಿತಾರ್ಥವಾಗಿದ್ದ ಭಾವಿ ಪತಿಯನ್ನು ಸಿಯಾ ಎಂಬ ಯುವತಿ ಕಣಿವೆಗೆ ತಳ್ಳಿ ಕೊಂದಿರುವ ಆರೋಪ ಕೇಳಿಬಂದಿದೆ.
ಈ ಘಟನೆ ಇದೀಗ ಇಂದೋರ್‌ನ ರಾಜಾ ರಘುವಂಶಿ (Ketan Agarwal and Raja Raghuvanshi Murder) ಕುಟುಂಬದ ಹಳೆಯ ಕಣ್ಣೀರಿನ ಗಾಯವನ್ನು ಮತ್ತೆ ಕೆದಕಿದೆ. ಪುಣೆ ಘಟನೆಯ ಬಗ್ಗೆ ಕೇಳಿ ಇಂದೋರ್‌ನ ರಾಜಾ ರಘುವಂಶಿ ತಾಯಿ, ಉಮಾ ರಘುವಂಶಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಮದುವೆ ಇಷ್ಟವಿಲ್ಲದಿದ್ದರೆ 'ನೋ' ಅನ್ನಿ, ಕೊಲ್ಲಬೇಡಿ!

ಪುಣೆ ಪ್ರಕರಣದ ಬಗ್ಗೆ ಮಾತನಾಡುತ್ತಾ ಉಮಾ ರಘುವಂಶಿ, ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗಬೇಕಿದ್ದ ಹುಡುಗನನ್ನೇ ಸಿಯಾ ಕಣಿವೆಗೆ ತಳ್ಳಿ ಕೊಂದಿದ್ದಾಳೆ. ಈ ಹುಡುಗಿಯರಿಗೆ ಮದುವೆ ಇಷ್ಟವಿಲ್ಲದಿದ್ದರೆ ಮೊದಲೇ ನಿರಾಕರಿಸಬೇಕು. ಅದನ್ನು ಬಿಟ್ಟು ಹೀಗೆ ಕೊಲೆ ಮಾಡುವುದು ಎಷ್ಟು ಸರಿ? ಇಂತಹ ಘಟನೆಗಳಿಂದಾಗಿ ಇವತ್ತು ಹುಡುಗರು ಮದುವೆ ಎಂದರೆ ಹೆದರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಾ ರಘುವಂಶಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಮ್‌ಗೆ ಕೇವಲ 11 ತಿಂಗಳಲ್ಲಿ ಜಾಮೀನು ಸಿಕ್ಕಿರುವುದೇ ಪುಣೆಯ ಸಿಯಾಳಂತಹ ಹುಡುಗಿಯರಿಗೆ ಧೈರ್ಯ ತಂದಿದೆ ಎಂದು ಉಮಾ ಆರೋಪಿಸಿದ್ದಾರೆ. ಸೋನಮ್‌ಗೆ ಕಠಿಣ ಶಿಕ್ಷೆಯಾಗಿದ್ದರೆ, ಇವತ್ತು ಸಿಯಾಳಿಗೆ ಇಷ್ಟೊಂದು ಧೈರ್ಯ ಬರುತ್ತಿರಲಿಲ್ಲ, ಕೇತನ್ ಪ್ರಾಣವೂ ಉಳಿಯುತ್ತಿತ್ತು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕುಟುಂಬದವರ ಬೆಂಬಲ, ಹೆಚ್ಚುತ್ತಿರುವ ಆರೋಪಿಗಳ ಧೈರ್ಯ!

ಇಂತಹ ಕ್ರೂರ ಕೃತ್ಯ ಎಸಗುವ ಹುಡುಗಿಯರಿಗೆ ತಮ್ಮ ತಂದೆಯಂದಿರ ಬೆಂಬಲವಿರುತ್ತದೆ. ತಾವು ಏನೇ ತಪ್ಪು ಮಾಡಿದರೂ ತಂದೆ ದುಡ್ಡು ಸುರಿದು ಜೈಲಿನಿಂದ ಹೊರಗೆ ಕರೆತರುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸ ಇವರಲ್ಲಿದೆ ಎಂದು ರಘುವಂಶಿ ತಾಯಿ ಆರೋಪಿಸಿದ್ದಾರೆ.
ಕೊಲೆಯಾದ ರಾಜಾ ರಘುವಂಶಿಯ ಅಣ್ಣ ಸಚಿನ್ ರಘುವಂಶಿ ಮಾತನಾಡಿ, ಕೇತನ್ ಕೊಲೆಯಾದ ಸುದ್ದಿ ಕೇಳಿದಾಗಿನಿಂದ ನನಗೆ ರಾತ್ರಿ ಇಡೀ ನಿದ್ದೆ ಬಂದಿಲ್ಲ. ನಮ್ಮ ತಾಯಿಯ ನೋವು ಇಂದು ಕೇತನ್ ತಾಯಿಗೂ ಬಂದಿದೆ. ಆರೋಪಿಗಳ ಕುಟುಂಬದವರು ಮೊದಲು ಸಮಾಜದ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಾರೆ, ಆಮೇಲೆ ಕದ್ದುಮುಚ್ಚಿ ಜೈಲಿನಿಂದ ಬಿಡಿಸಲು ಕೋರ್ಟ್‌ಗಳಿಗೆ ಅಲೆಯುತ್ತಾರೆ. ನಮ್ಮ ಕೇಸ್‌ನಲ್ಲೂ ಸೋನಮ್ ತಂದೆ ಆಕೆಯನ್ನು ಬಿಡಿಸಲು ಶಿಲ್ಲಾಂಗ್‌ವರೆಗೂ ಓಡಾಡಿದ್ದರು ಎಂದು ಆಕ್ರೋಶ ಹೊರಹಾಕಿದ್ದಾರೆ.

ಜಾಮೀನು ಸಿಗುತ್ತೆ ಎನ್ನುವ ಅತಿಯಾದ ನಂಬಿಕೆ!

ಸೋನಮ್‌ಗೆ ಸುಲಭವಾಗಿ ಜಾಮೀನು ಸಿಕ್ಕಿದ್ದನ್ನು ನೋಡಿ, ಪುಣೆಯ ಸಿಯಾ ಕೂಡ ತಾನು ಯಾರನ್ನಾದರೂ ಕಣಿವೆಗೆ ತಳ್ಳಿ ಕೊಂದರೂ ಸಾಕ್ಷ್ಯಗಳ ಕೊರತೆಯಿಂದ ಸುಲಭವಾಗಿ ಪಾರಾಗಬಹುದು ಎಂದುಕೊಂಡಿದ್ದಾಳೆ. ಕಾನೂನಿನಲ್ಲಿರುವ ನೂನ್ಯತೆಗಳನ್ನು ಬಳಸಿಕೊಂಡು ಇವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ನಾವು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ, ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಸಚಿನ್ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net