ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬಂಗಾಳಿ ಪದ್ದತಿಯ ಮೀನು, ಮಾಂಸಹಾರ ಸೇವನೆ ನಿರ್ಬಂಧಿಸುತ್ತೆ: ಸಿಎಂ ಮಮತಾ ಬ್ಯಾನರ್ಜಿ | CM Mamata Banerjee

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
Published on
ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣಾ ಕಣ ರಂಗೇರಿದ್ದು, ಭಾನುವಾರ(ಮಾ. 29) ಬಿಜೆಪಿ ವಿರುದ್ಧ ಮಾಂಸಹಾರದ ಧಾಳ ಉರುಳಿಸಿರುವ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ರಾಜ್ಯದಲ್ಲಿ ಬಂಗಾಳಿ ಪದ್ದತಿಯ ಮೀನು, ಮಾಂಸಹಾರ ಸೇವನೆಯನ್ನು ನಿಷೇಧಿಸುತ್ತದೆ ಎಂದು ಆರೋಪಿಸಿದ್ದಾರೆ. 
ಪುರುಲಿಯಾದಲ್ಲಿ ನಡೆದ ಪಕ್ಷದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಬಿಜೆಪಿ ಮೀನು, ಮಾಂಸ, ಮೊಟ್ಟೆ ತಿನ್ನಬಾರದು ಎಂದು ಹೇಳುತ್ತದೆ. ಅವರು ಯಾವುದೇ ಧರ್ಮವನ್ನು ನಂಬುವುದಿಲ್ಲ. ಗಲಭೆಗಳನ್ನು ಆಶ್ರಯಿಸುತ್ತಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಆದಿವಾಸಿಗಳನ್ನು ಶೋಷಿಸಲಾಗುತ್ತದೆ, ಮಹಿಳೆಯರ ಮೇಲೆ ದಾಳಿ ಮಾಡಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ ಉಲ್ಲೇಖಿಸಿ, ಬಿಜೆಪಿಯ ಹಿರಿಯ ನಾಯಕರೊಬ್ಬರು ನಿನ್ನೆ 15 ವರ್ಷಗಳ ಟಿಎಂಸಿ ಸರ್ಕಾರದ ವಿರುದ್ಧ ಚಾರ್ಜ್​ಶೀಟ್ ಅನ್ನು ಬಿಡುಗಡೆ ಮಾಡಿದ್ದಾರೆ. ಮೊದಲು ಅವರ ವಿರುದ್ಧ ಚಾರ್ಜ್​ಶೀಟ್ ಅನ್ನು ಬಿಡುಗಡೆ ಮಾಡಬೇಕು. ಗುಜರಾತ್​ನಲ್ಲಿ ತುಂಬಾ ಗಲಭೆಗಳು ನಡೆದವು ಎಂದು ಕಿಡಿಕಾರಿದ್ದಾರೆ.
ಮಹಿಳೆಯರಿಗಾಗಿ ಟಿಎಂಸಿ ಸರ್ಕಾರ ಜಾರಿಗೆ ತಂದ ಲಕ್ಷ್ಮಿ ಭಂಡಾರ್ ಯೋಜೆಯನ್ನು ಶ್ಲಾಘಿಸಿದ ಅವರು, ಬಿಜೆಪಿ ಚುನಾವಣೆಗೂ ಮೊದಲು ಆಮಿಷ ಒಡ್ಡುತ್ತದೆ. ಸ್ವಲ್ಪ ಹಣವನ್ನು ನೀಡುತ್ತದೆ, ಆದರೆ ಚುನಾವಣೆ ಬಳಿಕ ಅದನ್ನು ಬಂದ್ ಮಾಡುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಚುನಾವಣೆ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಎಸ್​ಐಆರ್ ಪ್ರಕ್ರಿಯೆ ಅಡಿ 1.2 ಕೋಟಿ ಮತದಾರರನ್ನು ಅಳಿಸಲಾಗಿದೆ. ಮತ್ತು ಇತ್ತೀಚೆಗೆ ನನ್ನ ಜೊತೆ ಕೆಲಸ ಮಾಡಿದ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ತೆಗೆದು ಹಾಕಿ ಅವಮಾನ ಮಾಡಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 23ರಂದು 152 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಬಳಿಕ ಏ. 29ರಂದು ಉಳಿದ 142 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ. 4ರಂದು ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net