ಅಸ್ಸಾಂ ಚುನಾವಣೆ; ಮೂರನೇ ಬಾರಿಯೂ ಎನ್​ಡಿಗೆ ಅಧಿಕಾರಕ್ಕೆ; 90ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ತೀವಿ: ಅಮಿತ್ ಶಾ | Amit Shah

Amit Shah-ಅಮಿತ್ ಶಾ
Amit Shah-ಅಮಿತ್ ಶಾ
Published on
ಗುವಾಹಟಿ: ಅಸ್ಸಾಂ ಚುನಾವಣೆ ಅಖಾಡಕ್ಕೆ ಧುಮುಕಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಭಾನುವಾರ(ಮಾ. 29) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 90 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಎರಡು ದಿನಗಳ ಕಾಲ ಚುನಾವಣೆ ಪ್ರಚಾರಕ್ಕಾಗಿ ಅಸ್ಸಾಂಗೆ ಭೇಟಿ ನೀಡಿರುವ ಶಾ ಗುವಾಹಟಿಯಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿರುವ ಅವರು, ಅಸ್ಸಾಂನ ಜನರು ಸತತ ಮೂರನೇ ಅವಧಿಗೆ ಎನ್‌ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು 90 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ಅಸ್ಸಾಂನಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಗಳು ನಡೆದಿವೆ. ರಾಜ್ಯದಲ್ಲಿ ಉಗ್ರವಾದ, ಬಾಂಬ್ ಸ್ಫೋಟಗಳು ಹಾಗೂ ಗುಂಡಿನ ದಾಳಿಗಳು ನಿಂತಿವೆ. ರಾಜ್ಯದಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದ್ದು, ಇಡೀ ಈಶಾನ್ಯದ ಆರೋಗ್ಯ ಮತ್ತು ಶಿಕ್ಷಣದ ಕೇಂದ್ರವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಹಾಲಿ ವಿಧಾನಸಭೆಯಲ್ಲಿ ಬಿಜೆಪಿ 64 ಶಾಸಕರನ್ನು ಹೊಂದಿದ್ದು, ಮಿತ್ರ ಪಕ್ಷಗಳಾದ ಅಸೋಮ್ ಗಣ ಪರಿಷತ್ 9, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ 7 ಹಾಗೂ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಮೂವರು ಶಾಸಕರನ್ನು ಹೊಂದಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ 26, ಎಐಯುಡಿಎಫ್ 15 ಶಾಸಕರನ್ನು ಹೊಂದಿದ್ದರೇ, ಸಿಪಿಐ(ಎಂ) ಒಬ್ಬ ಶಾಸಕನನ್ನು ಹೊಂದಿದೆ. ಓರ್ವ ಪಕ್ಷೇತರ ಶಾಸಕರಿದ್ದಾರೆ.
ಅಸ್ಸಾಂನಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. 2023ರ ಕ್ಷೇತ್ರ ಪುನರ್ವಿಂಗಡಣೆಯ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net